Kannada News

ವಲಸೆ ಕಾರ್ಮಿಕರಿಗೆ ತಮ್ಮ ಗೆಸ್ಟ್ ಹೌಸ್ ನಲ್ಲೇ ಕ್ವಾರಂಟೈನ್ ಗೆ ಅವಕಾಶ ನೀಡಿದ ಶಾಸಕ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮುಂಬೈನಿಂದ ಬಂದಿರುವ 200ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ತಮ್ಮ ಗೆಸ್ಟ್ ಹೌಸ್‍ನಲ್ಲಿಯೇ ಕ್ವಾರಂಟೈನ್ ಮಾಡಿ ಊಟ ಉಪಹಾರ ನೀಡುವ ಮೂಲಕ ಯಮಕನಮರಡಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾನವೀಯತೆ ಮೆರೆದಿದ್ದಾರೆ.

ಕೊರೊನಾ ಭೀತಿ  ಲಾಕ್ ಡೌನ್ ಹಿನ್ನಲೆಯಲ್ಲಿ ಸಂಕಷಕ್ಕೆ ಸಿಲುಕಿರುವ ವಲಸೆ ಕಾರ್ಮಿಕರು ದುಡಿಮೆ ಇಲ್ಲದೇ ತಮ್ಮ ಗ್ರಾಮಗಳಿಗೆ ವಾಪಸ್ ಆಗುತ್ತಿದ್ದಾರೆ.  ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ತಮ್ಮ ಗ್ರಾಮಗಳಿಗೆ ಬರುವ ಕಾರ್ಮಿಕರನ್ನು ಯಾವುದೋ ಸರ್ಕಾರಿ ಕಟ್ಟಡದಲ್ಲಿ ಇಟ್ಟು ಕ್ವಾರಂಟೈನ್ ಮಾಡುವ ಬದಲು ಸತೀಶ್ ಜಾರಕಿಹೊಳಿ ಅವರು ವಲಸೆ ಕಾರ್ಮಿಕರನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಲದಾಳ ಗ್ರಾಮದಲ್ಲಿರುವ ತಮ್ಮ ಗೆಸ್ಟ್ ಹೌಸ್‍ನಲ್ಲಿ ಕ್ವಾರಂಟೈನ್ ಮಾಡಿಸಿದ್ದಾರೆ.

ಗೆಸ್ಟ್ ಹೌಸ್‍ನಲ್ಲಿ ಇರುವ ಎಲ್ಲ ಕಾರ್ಮಿಕರು ಮುಂಬೈನಿಂದ ಬಂದವರಾಗಿದ್ದಾರೆ. ದಿನನಿತ್ಯ ಎಲ್ಲ ಕಾರ್ಮಿಕರಿಗೂ ತಮ್ಮ ಸ್ವಂತ ಹಣದಿಂದ 2 ಬಾರಿ ಊಟ, ತಿಂಡಿ, ಸೇರಿದಂತೆ ಹಣ್ಣು ಹಂಪಲ ನೀಡುತ್ತಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ವಿವಿಧ ಕಡೆ ಕ್ವಾರಂಟೈನ್ ಇರುವ 1 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಊಟ ಉಪಹಾರ ತಲುಪಿಸುತ್ತಿದ್ದಾರೆ. ಅಲ್ಲದೇ ಎಲ್ಲ ಕಾರ್ಮಿಕರಿಗೆ ಕಾಲ ಕಳೆಯಲು ಆಟಿಕೆ ಸಾಮಾನುಗಳನ್ನು ವಿತರಿಸಿದ್ದಾರೆ.

ಮುಂಬೈನಿಂದ ತಮ್ಮ ಊರುಗಳಿಗೆ ಆಗಮಿಸಿದ ಯಮಕನಮರಡಿ ಕ್ಷೇತ್ರದ ವಲಸೆ ಕಾರ್ಮಿಕರನ್ನು ಕೊರೊನಾ ಭಯದಿಂದ ಗ್ರಾಮಸ್ಥರು ಊರಿನೊಳಗೆ ಸೇರಿಸಿಕೊಳ್ಳಲಿಲ್ಲ. ಈ ಹಿನ್ನಲೆಯಲ್ಲಿ ಸತೀಶ್ ಜಾರಕಿಹೊಳಿ ತಮ್ಮ ಗೆಸ್ಟ್ ಹೌಸ್ ನಲ್ಲೇ ಉಳಿದುಕೊಳ್ಳಲು ಕಾರ್ಮಿಕರಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button