*ಶಕ್ತಿ ಯೋಜನೆ ಬಳಿಕ ದೇವಾಲಯಗಳಿಗೆ ಹರಿದು ಬಂದ ಭಕ್ತರು; ಸವದತ್ತಿ ಯೆಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ಕೋಟಿ ರೂ.ಕಾಣಿಕೆ ಸಂಗ್ರಹ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಈಬಾರಿ ಅಪಾರ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ.
ಮೇ 17ರಿಂದ ಜೂನ್ 30ರ ಅವಧಿಯಲ್ಲಿ 45 ದಿನಗಳಲ್ಲಿ ದೇವಸ್ಥಾನದಲ್ಲಿ 1.37 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. 1 ಕೋಟಿ 30 ಲಕ್ಷದ 42 ಸಾವಿರ ನಗದು, 4.44 ಲಕ್ಷ ಮೌಲ್ಯದ ಚಿನ್ನ, 2.29 ಲಕ್ಷ ಮೌಲ್ಯದ ಬೆಳ್ಳಿ ಆಭರಣ ದೇಗುಲದ ಹುಂಡಿಯಲ್ಲಿ ಸಂಗ್ರಹವಾಗಿದೆ.
ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭಿಸಿರುವ ಬೆನ್ನಲ್ಲೇ ರಾಜ್ಯದ ವಿವಿಧ ಯಾತ್ರಾ ಸ್ಥಳ, ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದೇವಾಲಯಗಳಲ್ಲಿ ಅಪಾರ ಕಾಣಿಕೆ ಸಂಗ್ರಹದಲಿಯೂ ಏರಿಕೆಯಾಗುತ್ತಿದೆ.
ನಂಜನಗೂಡು ದೇವಾಲಯದಲ್ಲಿಯೂ ಕೋಟಿ ರೂ ಸಂಗ್ರಹ:
ಇನ್ನು ಮೈಸೂರು ಜಿಲ್ಲೆಯ ಐತಿಹಾಸಿಕ ನಂಜನಗೂಡು ನಂಜುಂಡೇಶ್ವರಸ್ವಾಮಿ ದೇವಸ್ಥಾನದಲ್ಲಿಯೂ ಒಂದೇ ತಿಂಗಳಲ್ಲಿ 1.77 ಕೋಟಿ ರೂ ಕಾಣಿಕೆ ಸಂಗ್ರಹವಾಗಿದೆ. ದೇವಸ್ಥಾನ ಸಿಬ್ಬಂದಿ ಹಾಗೂ ಬ್ಯಾಂಕ್ ಸಿಬ್ಬಂದಿಗಳು ಸೇರಿ ಹುಂಡಿ ಎಣಿಕೆ ಕಾರ್ಯ ಮಾಡಿದ್ದು, 1,77,08,710 ರೂ ನಗದು, 65 ಗ್ರಾಂ ಚಿನ್ನ, 3.5 ಕೆಜಿ ಬೆಳ್ಳಿ, 64 ವಿದೇಶಿ ಕರೆನ್ಸಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ