*ಬೆಂಗಳೂರಿಗೆ ಯೋಜನಾಬದ್ಧವಾಗಿ ಹೊಸ ರೂಪ ನೀಡಲು ʼಬ್ರ್ಯಾಂಡ್ ಬೆಂಗಳೂರುʼ ಯೋಜನೆ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಿರಂತರವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಯೋಜನಾಬದ್ಧವಾಗಿ ಹೊಸರೂಪ ನೀಡಲು “ಬ್ರ್ಯಾಂಡ್ ಬೆಂಗಳೂರು” ಪರಿಕಲ್ಪನೆಯಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ ಅವರು ಬ್ರ್ಯಾಂಡ್ ಬೆಂಗಳೂರು ಹಾಗೂ ಅದರ ಅಧ್ಯಯನ ವರದಿ ಸ್ವೀಕೃತಿ ಹಾಗೂ ಮುಂದಿನ ಕ್ರಮಗಳ ವಿಚಾರವಾಗಿ ಪ್ರಶ್ನೆ ಕೇಳಿದರು.
ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರ ಪರವಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಉತ್ತರಿಸಿದರು.
“ಬೆಂಗಳೂರು ನಗರ ಈ ಹಿಂದೆ ಗಾರ್ಡನ್ ಸಿಟಿ, ಪ್ಯಾರಡೈಸ್ ಆಫ್ ಪೆನ್ಷನರ್ಸ್, ಹಾಸ್ಪಿಟಲ್ ಹಬ್, ಐಟಿ ಹಬ್, ಎಜುಕೇಶನ್ ಹಬ್ ಆಗಿ ಹೆಸರು ಮಾಡಿತ್ತು. ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿಂದೆ ವಿಶ್ವ ನಾಯಕರು ಬೆಂಗಳೂರಿಗೆ ಬಂದು ನಂತರ ದೇಶದ ಇತರೆ ನಗರಗಳಿಗೆ ತೆರಳುತ್ತಿದ್ದರು.
ಬೆಂಗಳೂರಿನ ಸ್ವರೂಪವನ್ನು ಬದಲಿಸಲು ನಮ್ಮ ಉಪಮುಖ್ಯಮಂತ್ರಿಗಳು ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆ ಮೂಲಕ ಕೆಲಸ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಬೆಂಗಳೂರಿನ ಸಂಘ ಸಂಸ್ಥೆಗಳು, ಎಲ್ಲಾ ವರ್ಗದ ಜನರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ. ಸುಗಮ ಸಂಚಾರ ಬೆಂಗಳೂರು, ಹಸಿರು ಬೆಂಗಳೂರು, ಆರೋಗ್ಯ ಬೆಂಗಳೂರು, ಜನಹಿತ ಬೆಂಗಳೂರು, ಶೈಕ್ಷಣಿಕ ಬೆಂಗಳೂರು, ತಂತ್ರಜ್ಞಾನ ಮತ್ತು ಮಾಹಿತಿ ಬೆಂಗಳೂರು, ಹಸಿರು ಬೆಂಗಳೂರು, ಜಲ ಸುರಕ್ಷ ಬೆಂಗಳೂರು ಬಗ್ಗೆ 70 ಸಾವಿರ ಸಲಹೆಗಳನ್ನು ಸಂಗ್ರಹಿಸಲಾಗಿದೆ. ಈ ಪ್ರತಿ ವಿಭಾಗಕ್ಕೆ ಸಂಬಂಧಿಸಿದ ಸಲಹೆಗಳನ್ನು ವಿವಿಧ ಸಂಸ್ಥೆಗಳಿಗೆ ಅಧ್ಯಯನಕ್ಕೆ ನೀಡಲಾಗಿದೆ. ಈ ಸಂಸ್ಥೆಗಳು ವರದಿ ನೀಡಿದ ನಂತರ ಈ ಕುರಿತ ಸಲಹೆಗಳನ್ನು ಜಾರಿಗೊಳಿಸಲಾಗುವುದು” ಎಂದರು.
“ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬೃಹತ್ ಬೆಂಗಳೂರು ಸಮನ್ವಯ ಸಮಿತಿ ರಚನೆ ಮಾಡಲಾಗುವುದು. ಸರ್ಕಾರದ ಮುಖ್ಯಕಾರ್ಯದರ್ಶಿಗಳ ಮಟ್ಟದಲ್ಲಿ ಬೃಹತ್ ಬೆಂಗಳೂರು ಕಾರ್ಯಕಾರಿ ಸಮಿತಿ ಮಾಡಿ ಬೆಂಗಳೂರನ್ನು ಹೊಸ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ನಮ್ಮ ಉಪಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ನಾವು ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಮುಂದೆ ಕೆಲಸ ಮಾಡುತ್ತೇವೆ ಎಂದು ಹೇಳುತ್ತಿದ್ದು, ಇದು ವಿರೋಧ ಪಕ್ಷದ ನಾಯಕರಿಗೆ ಅರ್ಥವಾಗುತ್ತಿಲ್ಲ.
ಬೆಂಗಳೂರಿನ ಅಭಿವೃದ್ಧಿಯನ್ನು ಯೋಜನಾ ಬದ್ಧವಾಗಿ ಮಾಡಲು ನಾವು ಬದ್ಧ. ಇದಕ್ಕೆ ಎಲ್ಲಾ ಪಕ್ಷಗಳ ಸಹಕಾರ ಮುಖ್ಯ. ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ ಏನೂ ಕೆಲಸ ಆಗಿಲ್ಲ ಎನ್ನುತ್ತೀರಿ. ನಿಮ್ಮ ಸರ್ಕಾರ 25 ಸಾವಿರ ಕೋಟಿ ಸಾಲ ಮಾಡಿಟ್ಟು ಹೋಗಿದ್ದೀರಿ. ಅದರ ಜೊತೆಗೆ ಬಿಲ್ ಬಾಕಿ. ನಗರೊತ್ಥಾನ, ವಾರ್ಡ್ ಅನುದಾನ ಸೇರಿದಂತೆ ಸಾಲ ಹೆಚ್ಚು ಮಾಡಿದ್ದೀರಿ. ಮುನಿರತ್ನ ಅವರು ಮೆಲ್ಸೇತುವೆ ವಿಚಾರವಾಗಿ ಮಾತನಾಡುತ್ತಿದ್ದರು. ಇದೇ ಚಾಲುಕ್ಯ ಸರ್ಕಲ್ ಮೇಲ್ಸೆತುವೆಗೆ ವಿರೋಧ ಮಾಡಿದವರೇ ಬಿಜೆಪಿಯವರು” ಎಂದು ವಿರೋಧ ಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ