ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಭೀಮಾ ನದಿಗೆ ಸೊನ್ನ ಗ್ರಾಮದಲ್ಲಿ ಬ್ಯಾರೇಜ್ ನಿರ್ಮಾಣದಿಂದ ಸಿಂಧಗಿ ತಾಲೂಕಿನ ಬ್ಯಾಡಗಿಹಾಳ ಗ್ರಾಮ ಮುಳುಗಡೆಯಾಗಿ, ಮನೆ ಕಳೆದುಕೊಂಡ ಜನರಿಗೆ ವಿಜಯಪುರ ಜಿಲ್ಲೆಯ ಉಸ್ತುವಾರಿ ಹಾಗೂ ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ನಿವೇಶನ ಪತ್ರ ನೀಡಿದರು.
ಮನೆ ಕಳೆದುಕೊಂಡು ಜನರು ಪಟ್ಟ ಕಷ್ಟ ಹೇಳಲು ಅಸಾಧ್ಯ. ಗ್ರಾಮ ಮುಳುಗಡೆಯ ಸುದ್ದಿ ತಿಳಿದು ಕಳೆದ ವರ್ಷ ನಾನು ಇಲ್ಲಿಗೆ ಭೇಟಿ ನೀಡಿದಾಗ, ಅದೆಷ್ಟೋ ವರ್ಷಗಳಿಂದ ಬದುಕಿ ಬಾಳಿದ ಮನೆಯನ್ನು ಕಳೆದುಕೊಂಡ ಜನರ ನೋವನ್ನು ಅರಿತು, ಅವರಿಗೆ ನಿವೇಶನಗಳ ಹಕ್ಕುಪತ್ರ ನೀಡಿ, ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದೆ. ಅದಕ್ಕಾಗಿ ನನ್ನೊಂದಿಗೆ ಅಧಿಕಾರಿಗಳು ಸತತವಾಗಿ ಶ್ರಮವಹಿಸಿದ ಫಲವಾಗಿ, ಇಂದು ಸುಮಾರು 311 ನಿರಾಶ್ರಿತರಿಗೆ ನಿವೇಶನಗಳ ಹಕ್ಕುಪತ್ರ ವಿತರಿಸಿದ್ದೇನೆ ಎಂದರು.
ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಸುಮಾರು 30 ಎಕರೆ ಪ್ರದೇಶದಲ್ಲಿ ನಿರಾಶ್ರಿತರಿಗೆ ನಿವೇಶನ ಜೊತೆಗೆ ಶಾಲೆ, ಸಮುದಾಯ ಭವನ, ವಿದ್ಯುತ್, ನೀರಿನ ಟ್ಯಾಂಕ್ ಸೇರಿದಂತೆ ಇತರೆ ಮೂಲಸೌಕರ್ಯಗಳ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗಿದೆ. ನನ್ನೊಂದಿಗೆ ನಿರಂತರವಾಗಿ ಶ್ರಮಿಸಿದ, ಸಂಕಷ್ಟದಲ್ಲಿದ್ದ ಜನರ ಹಿತಕ್ಕಾಗಿ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶರುಣ ಶಹಾಪುರ, ಹನುಮಂತ ನಿರಾಣಿ, ಮಾಜಿ ಶಾಸಕರಾದ ರಮೇಶ ಭೂಸನುರ, ಲಿಂಬೆ ಅಭಿವೃದ್ಧಿ ಮಂಡಳ ಅಧ್ಯಕ್ಷರಾದ ಅಶೋಕ ಅಲ್ಲಾಪುರ, ಜಿಲ್ಲಾಧಿಕಾರಿಗಳಾದ ಪಿ.ಸುನಿಲಕುಮಾರ, ಜಿ.ಪಂ.ಮುಖ್ಯಕಾರ್ಯನಿರ್ಣಾಧಿಕಾರಿ ಗೋವಿಂದ ರೆಡ್ಡಿ, ಉಪವಿಭಾಗಾಧಿಕಾರಿ ಶ್ರಾಹುಲ ಶಿಂಧೆ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು .
ಸರಕಾರಿ ಕಾರ್ಯಕ್ರಮಗಳಲ್ಲಿ ಇವೆಲ್ಲ ನಿಷೇಧ! ರಾಜ್ಯ ಸರಕಾರದ ಆದೇಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ