Latest

ಭಾರತ-ಚೀನಾ ಗಡಿಯಲ್ಲಿ ಶತ್ರುಗಳನ್ನು ಹಿಮ್ಮೆಟ್ಟಿಸಲು ಕೆಚ್ಚೆದೆಯಿಂದ ನಿಂತ ಬೆಳಗಾವಿಯ ಯೋಧ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಒಂದೆಡೆ ಭಾರತದ ಗಡಿ ಭಾಗದಲ್ಲಿ ಕ್ಯಾತೆ ತೆಗೆದು ಜಗಳಕ್ಕೆ ನಿಂತಿರುವ ಚೀನಾ ಇನ್ನೊಂದೆಡೆ ದೇಹವನ್ನೇ ಹೆಪ್ಪುಗಟ್ಟಿಸುವಂತಹ ಭಯಂಕರವಾದ ಚಳಿ. ಇಂಥಹ ಸಂದಿಗ್ಧ ಸ್ಥಿತಿಯಲ್ಲಿಯೂ ದೇಶದ ಗಡಿ ರಕ್ಷಣೆಗಾಗಿ ಕೆಚ್ಚೆದೆಯಿಂದ ನಿಂತಿರುವ ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯ ಯೋಧ… ಹೌದು. ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ನಲ್ಲಿ ಬೆಳಗಾವಿ ಜಿಲ್ಲೆಯ ಯೋಧನೊಬ್ಬ ಭಾರತದ ರಕ್ಷಣೆಗಾಗಿ ಕಳೆದ ನಾಲ್ಕು ತಿಂಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಯೋಧ ಅರುಣ ಮಿಸಾಳೆ ಕಳೆದ ಮೂರುವರೆ ತಿಂಗಳಿಂದ ಸಿಯಾಚಿನ್‌ ಗ್ಲೆಸಿಯರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ದೇಹವನ್ನೇ ಹೆಪ್ಪುಗಟ್ಟಿಸುವ ಮೈನಸ್‌ 40 ಡಿಗ್ರಿ ತಾಪಮಾನದಲ್ಲಿ ದೇಶ ಸೇವೆಯಲ್ಲಿ ನಿರತರಾಗಿದ್ದಾರೆ. ಶತ್ರುಗಳ ಗುಂಡೇಟಿಗಿಂತ ಅಪಾಯಕಾರಿ ಹವಾಮಾನದಲ್ಲಿ ಗಡಿ ಕಾಯುವುದು ಸವಾಲಿನ ಕೆಲಸವೇ ಸರಿ.

ಸಿಯಾಚಿನ್ ನಲ್ಲಿ ಕರ್ತವ್ಯ ನಿರ್ವಹಿಸಲು ಕೇವಲ ಮೂರು ತಿಂಗಳು ಮಾತ್ರ ಅವಕಾಶ ಇದೆ. ಆದರೆ ಕೊರೊನಾ ಲಾಕ್‌ಡೌನ್‌, ಭಾರತ-ಚೀನಾ ಸಂಘರ್ಷದಿಂದಾಗಿ ಕೆಲವು ಯೋಧರು ಕರ್ತವ್ಯಕ್ಕೆ ಹಾಜರಾಗದಿರುವುದರಿಂದ ಈಗಾಗಲೇ ಅಲ್ಲಿರುವ ಯೋಧರು ಹೆಚ್ಚುವರಿಯಾಗಿ ಕೆಲಸ ನಿರ್ವಹಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಮತ್ತೆ ಒಂದು ತಿಂಗಳು ಯೋಧ ಅರುಣ ಮಿಸಾಳೆಯ ಸೇವೆ ಹೆಚ್ಚುವರಿಯಾಗಿದೆ.

ಮಾರ್ಚ್‌ ತಿಂಗಳಲ್ಲಿ ಯೋಧ ಅರುಣ ಕಾಲ್ನಡಿಗೆ ಮೂಲಕ ಹಿಮ ಪರ್ವತವನ್ನೇರುವಾಗ ಸುಮಾರು ಮೈನಸ್‌ 50-55 ಡಿಗ್ರಿವರೆಗೂ ಹವಾಮಾನ ಇತ್ತು. ಸದ್ಯ ಹವಾಮಾನ ತುಸು ಇಳಿಕೆಯಾಗಿದ್ದು, ಮಧ್ಯ ರಾತ್ರಿಯಲ್ಲಿ ಮೈನಸ್‌ 25ರವರೆಗೂ ಇರುತ್ತದೆ. ಇಂಥದರಲ್ಲಿ ಹಿಮವನ್ನೇ ಕಾಯಿಸಿ ನೀರು ಕುಡಿಯಬೇಕಾಗುತ್ತದೆ. ನಿದ್ದೆಯಂತೂ ಅಷ್ಟಕ್ಕಷ್ಟೇ ಆಗಿದ್ದು, ನಿದ್ದೆಯಲ್ಲಿದ್ದಾಗ ಆಮ್ಲಜನಕ ಪಡೆದುಕೊಳ್ಳಲು 2-3 ಬಾರಿ ಎದ್ದು ನೀರು ಕುಡಿಯಬೇಕಾಗುತ್ತದೆ ಎನ್ನುತ್ತಾರೆ ಯೋಧ ಅರುಣ ಮಿಸಾಳೆ.

ಕಳೆದ ನಾಲ್ಕು ದಿನಗಳ ಹಿಂದೆ ಭಾರತ-ಚೀನಾ ಮಧ್ಯೆ ನಡೆದ ಗುಂಡಿನ ಕಾಳಗದಿಂದ ಸುಮಾರು 8-10 ಕಿ.ಮೀ. ದೂರದಲ್ಲಿರುವ ಯೋಧ ಅರುಣ ಅವರ ತಂಡವೂ ಅಲರ್ಟ್‌ ಆಗಿದ್ದು, ಯಾವುದೇ ಕ್ಷಣದಲ್ಲಿಯೂ ಚೀನಾ ಸೈನಿಕರು ಭಾರತದ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ದೇಶದ ಗಡಿ ಕಾಯುವಲ್ಲಿ ಇಂಥ ಅನೇಕ ತಂಡಗಳು ಸಜ್ಜಾಗಿವೆ.

ಮಾಜಿ ಸೈನಿಕ, ತಂದೆ ಲಕ್ಷ್ಮಣ ಹಾಗೂ ತಾಯಿ ಜೀಜಾಬಾಯಿ ಅವರ ಕಿರಿಯ ಪುತ್ರನಾಗಿರುವ ಅರುಣ 2012ರಲ್ಲಿ ಮರಾಠಾ ಲಘು ಪದಾತಿ ದಳಕ್ಕೆ ಸೇರಿದ್ದರು. ಪತ್ನಿ ಸವಿತಾ ಕಳೆದ ವರ್ಷವೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸಧ್ಯ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನಲೆಯಲ್ಲಿ ಇನ್ನೂ ಕೆಲ ದಿನಗಳ ಕಾಲ ಯೋಧ ಅರುಣ ಸಿಯಾಚಿನ್ ನಲ್ಲೇ ಕಾರ್ಯನಿರ್ವಹಿಸಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button