Kannada NewsKarnataka NewsLatestPolitics

*ಮಹಿಳೆ ವಿವಸ್ತ್ರ ಪ್ರಕರಣ: ಆರೋಪಿಗಳ ವಿರುದ್ಧ ಕಠಿಣ ಕ್ರಮ, ಪ್ರೇಮಿಗಳಿಗೆ ರಕ್ಷಣೆ*

ಗೃಹ ಸಚಿವ ಡಾ.ಜಿ.ಪರಮೇಶ್ವರ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿದ ಪ್ರಕರಣದಲ್ಲಿ ಈಗಾಗಲೇ 7 ಜನರನ್ನು ಬಂಧಿಸಲಾಗಿದೆ. ಪ್ರೀತಿಸಿ ಗ್ರಾಮ ಬಿಟ್ಟು ಹೋದ ಪ್ರೇಮಿಗಳನ್ನು ಹುಡುಕಿ ಸರ್ಕಾರದಿಂದ ಸೂಕ್ತ ರಕ್ಷಣೆ ಕಲ್ಪಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಮಂಗಳವಾರ ವಿಧಾನ ಸಭೆಯ ಶೂನ್ನವೇಳೆಯಲ್ಲಿ ಪ್ರಕರಣದ ಕುರಿತು ಜರುಗಿದ ಚರ್ಚೆಯಲ್ಲಿ ಅವರು ಮಾತನಾಡಿದರು. ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ಇದಾಗಿದೆ. ಗ್ರಾಮದ ಅಶೋಕ್ ಗಡ್ಕಕರಿ ಹಾಗೂ ಪ್ರಿಯಾಂಕ ಪರಸ್ಪರ ಪ್ರೀತಿಸುತ್ತಿದ್ದರು. ಈ ಪ್ರೀತಿಗೆ ಹುಡುಗಿಯ ಮನೆಯವರು ವಿರೋಧಿಸಿದ್ದರಿಂದ ಪ್ರೇಮಿಗಳು ಗ್ರಾಮ ಬಿಟ್ಟು ಹೋಗಿದ್ದಾರೆ. ಈ ವಿಚಾರ ತಿಳಿದ ಹುಡುಗಿಯ ಸಂಬಂಧಿಕರು, ಹುಡುಗನ ಮನೆಗೆ ಆಗಮಿಸಿ, ತಾಯಿ ಹಾಗೂ ವಯಸ್ಸಾದ ಅಜ್ಜಿಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಅಷ್ಟಕ್ಕೆ ಸುಮ್ನನಾಗದೆ 55 ವರ್ಷದ ಹುಡುಗನ ತಾಯಿಯನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾರೆ. ಘಟನೆ ಬಗ್ಗೆ ತಿಳಿದ ತಕ್ಷಣ ಪೊಲೀಸರು ಗ್ರಾಮಕ್ಕೆ ತೆರಳಿ ಮಹಿಳೆಯನ್ನು ರಕ್ಷಿಸಿ, ಆಸ್ಪತ್ರೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ಭೇಟಿ ಮಾಡಿ ಧೈರ್ಯ ಹೇಳಿದ್ದೇನೆ. ಗ್ರಾಮಕ್ಕೂ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ. ಘಟನೆಯ ಬಗ್ಗೆ ತಿಳಿದು ಪ್ರೇಮಿಗಳು ಆತಂಕಕ್ಕೆ ಒಳಗಾಗಿ, ಅನಾಹುತ ಮಾಡಿಕೊಳ್ಳುವ ಮುನ್ನವೇ ಅವರನ್ನು ಪತ್ತೆ ಹಚ್ಚಿ ರಕ್ಷಣೆ ನೀಡುವುದಾಗಿ ಹೇಳಿದರು.


ಸಮಾಜದಲ್ಲಿ ಇಂದಿಗೂ ಪ್ರೀತಿಸಿ ಮದುವೆ ಆಗುವುದಕ್ಕೆ ವಿರೋಧ ಕಂಡುಬರುತ್ತಿದೆ. ಕೆಲವು ಪ್ರಕರಣಗಳಲ್ಲಿ ಪೋಷಕರು ಒಪ್ಪಿ ಮದುವೆ ಮಾಡಿಸುತ್ತಾರೆ. ಆದರೂ ಬಹುತೇಕ ಕಡೆ ವಿರೋಧವೇ ಹೆಚ್ಚು. ಮರ್ಯಾದೆ ಹತ್ಯೆ ಅಂತಹ ಪ್ರಕರಣಗಳು ಸಹ ಇವೆ. ಪ್ರೀತಿಸಿ ಮದುವೆ ಆಗುವುದಕ್ಕೆ ಸಮಾಜ ಒಪ್ಪಬೇಕು. ಆಗ ಮಾತ್ರ ಇಂತಹ ಪ್ರಕರಣಗಳು ಕಡಿಮೆ ಯಾಗುತ್ತವೆ. ಇಂತಹ ವಿಚಾರದಲ್ಲಿ ಕಾನೂನಿಗಿಂತ ಸಮಾಜದಲ್ಲಿ ಬದಲಾವಣೆ ಮೂಡುವುದು ಅಗತ್ಯವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅಭಿಪ್ರಾಯಪಟ್ಟರು.
ಶಾಸಕ ಸುನೀಲ್‍ಕುಮಾರ್ ಮಾತನಾಡಿ, ಸಂತ್ರಸ್ತರಿಗೆ ಸರ್ಕಾರ ರಕ್ಷಣೆ ನೀಡಬೇಕು. ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು. ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ಆರೋಪಿಗಳಿಗೆ ನ್ಯಾಯಲಯದಲ್ಲಿ ಜಾಮೀನು ಸಿಗದಂತೆ ಕಠಿಣ ಕಾನೂನುಗಳ ಅಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು. ಶಾಸಕ ಅಶೋಕ್ ಪಟ್ಟಣ ಸಹ ಪ್ರಕರಣವನ್ನು ಖಂಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button