ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ವಿಜಯಾ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಹಿಜಾಬ್ ವಿವಾದ ಮುಂದುವರೆದಿದ್ದು, ಇಂದೂ ಕೂಡ ಹಿಜಾಬ್ ಹಾಗೂ ಗುರ್ಖಾ ಧರಿಸಿ ಬಂದ ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಧರಿಸಿ ತರಗತಿಗೆ ಹೋಗಲು ಬಿಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ನಿನ್ನೆ ಕಾಲೇಜಿನಲ್ಲಿ 20 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಕೆಲ ಯುವಕರು ಸಾಥ್ ನೀಡಿದ್ದರಲ್ಲದೇ ಕಾಲೇಜು ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಮತ್ತೆ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿರುವ ಮುಸ್ಲೀಂ ವಿದ್ಯಾರ್ಥಿನಿಯರು ತಮಗೂ ತರಗತಿಗಳಿಗೆ ಬಿಡುವಂತೆ ಕೇಳಿದ್ದಾರೆ. ಈ ವೇಳೆ ಸಿಬ್ಬಂದಿಗಳು ವಿದ್ಯಾರ್ಥಿನಿಯರಿಗೆ ತರಗತಿಗಳಿಗೆ ತೆರಳಲು ಅವಕಾಶ ನೀಡಿಲ್ಲ ಎನ್ನಲಾಗಿದೆ.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿನಿಯರು, ಕಾಲೇಜು ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ನಮಗೆ ಸೋಮವಾರದವರೆಗೆ ರಜೆ ಇದೆ ಎಂದು ನಿನ್ನೆ ಕಳುಹಿಸಿದ್ದರು. ಆದರೆ ಇಂದು ಕಾಲೇಜು ಆರಂಭವಾಗಿದ್ದು, ಬೇರೆ ವಿದ್ಯಾರ್ಥಿಗಳಿಗೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ನಮಗೆ ಮಾತ್ರ ಕ್ಲಾಸ್ ಗೆ ತೆರಳಲು ಅವಕಾಶ ಕೊಡುತ್ತಿಲ್ಲ. ಡಿಗ್ರಿ ಕಾಲೇಜಿಗೆ ಕೋರ್ಟ್ ಮಧ್ಯಂತರ ಆದೇಶ ಅನ್ವಯವಾಗುವುದಿಲ್ಲ ಆದಾಗ್ಯೂ ಕಾಲೇಜು ಸಂಬಂಧಿಗಳು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಕಾಲೇಜಿನಲ್ಲಿ ಮತ್ತೆ ಬಿಗುವಿನ ವಾತಾವರನ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಲೇಜು ಸಿಬ್ಬಂದಿಗಳು, ಪೊಲೀಸರು ಹಾಗೂ ವಿದ್ಯಾರ್ಥಿನಿಯರ ಜತೆ ಮಾತನಾಡಿ, ಮನವೊಲಿಕೆ ಯತ್ನ ನಡೆಸಿದ್ದಾರೆ.
ವಿದ್ಯಾರ್ಥಿನಿಯರು ಕೋರ್ಟ್ ಆದೇಶ ಅರ್ಥಮಾಡಿಕೊಳ್ಳಬೇಕು. ಇಲ್ಲಿ ಬೇರಾವ ಉದ್ದೇಶಗಳಿಗೂ ಅವಕಾಶ ನೀಡುವುದಿಲ್ಲ. ಕಾಲೇಜು ಸುತ್ತ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಹಿಜಾಬ್ ಧರಿಸಿ ಕಾಲೇಜಿಗೆ ಬರಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಹೆತ್ತ ತಾಯಿ ಮೇಲೆ ಜೀಪ್ ಹರಿಸಿ ಕೊಂದ ಮಗ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ