Kannada NewsLatest

ವಿಟಿಯುನಲ್ಲಿ ವೆಂಚರ್ ಕ್ಯಾಪಿಟಲ್, ಪಾಲುದಾರಿಕೆ, ಸಂಶೋಧನೆಯ ಸಂಗಮ: ಅಶ್ವತ್ಥನಾರಾಯಣ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಇನ್ನು ಮುಂದೆ ಉದ್ಯಮಗಳೊಂದಿಗೆ ಬೆಸೆಯುವ ಮೂಲಕ ವೆಂಚರ್ ಕ್ಯಾಪಿಟಲ್, ಪಾಲುದಾರಿಕೆಗಳಿಗೆ ಅವಕಾಶ ಮಾಡಿಕೊಡಲಾಗುವುದು. ಜೊತೆಗೆ, ವೃತ್ತಿನಿರತರು ಕೂಡ ಸಂಶೋಧನೆ ಕೈಗೊಳ್ಳುವುದನ್ನು ಉತ್ತೇಜಿಸಲು ಜಾಗತಿಕ ಸಾಮರ್ಥ್ಯ ಕೇಂದ್ರ(ಜಿಸಿಸಿ)ಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಗುರುವಾರ ಇಲ್ಲಿ ನಡೆದ 21ನೇ ವಿಟಿಯು ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಈಗ ಅನುಷ್ಠಾನಗೊಳ್ಳುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಕಲಿಕೆಯ ರೀತಿನೀತಿಗಳನ್ನೇ ಆಮೂಲಾಗ್ರವಾಗಿ ಬದಲಿಸಿ, ಕ್ರಾಂತಿಕಾರಕ ಪರಿವರ್ತನೆಗಳನ್ನು ಹೊತ್ತು ತರಲಿದೆ. ಈ ಪ್ರಕ್ರಿಯೆಗೆ ಈಗಾಗಲೇ ಚಾಲನೆ ಸಿಕ್ಕಿದೆ ಎಂದರು.

ಶಿಕ್ಷಣ ಸಂಸ್ಥೆಗಳು ಕೇವಲ ಪದವಿ ನೀಡುವುದಕ್ಕೆ ಸೀಮಿತವಾಗಬಾರದು. ಜತೆಗೆ, ಅವು ಪ್ರತ್ಯೇಕವಾಗಿ ಉಳಿಯಬಾರದು. ಹೀಗಾಗಿಯೇ, ಆಧುನಿಕ ಉದ್ಯಮಗಳನ್ನು ಶಿಕ್ಷಣ ಸಂಸ್ಥೆಗಳ ಹತ್ತಿರಕ್ಕೆ ತರುವ ಮೂಲಕ ಸಹಭಾಗಿತ್ವವನ್ನು ಹೊಂದಲು ಹಲವು ಉಪಕ್ರಮಗಳನ್ನು ಜಾರಿಗೆ ತರಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ, ಕೌಶಲ್ಯಗಳ ಕಲಿಕೆ ಮತ್ತು ಉದ್ಯೋಗಕ್ಕೆ ಬೇಕಾದ ಅರ್ಹತೆಗಳು ಸಮರ್ಪಕವಾಗಿ ಸಿಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.

ವಿ.ಟಿ.ಯು.ವನ್ನು `ಯೂನಿವರ್ಸಿಟಿ ಆಫ್ ಎಮಿನಿನ್ಸ್’ ಆಗಿ ರೂಪಿಸಲು ಕ್ರಿಯಾಯೋಜನೆಯನ್ನು ತಯಾರಿಸಲಾಗಿದೆ. ಇದರ ಜತೆಗೆ, ರಾಜ್ಯದಲ್ಲಿ 30 ಎಂಜಿನಿಯರಿಂಗ್ ಕಾಲೇಜುಗಳನ್ನು `ಸೂಪರ್-30’ ಯೋಜನೆಯಡಿ ಜಾಗತಿಕ ಗುಣಮಟ್ಟದ ಸಂಸ್ಥೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇವೆಲ್ಲವೂ ಸರಕಾರವು ಬೆಳಗಾವಿಯಿಂದಲೇ ಆರಂಭಿಸಿರುವ `ಸರ್ವರಿಗೂ ಉದ್ಯೋಗ’ ಯೋಜನೆಗೆ ಪೂರಕವಾಗಿವೆ ಎಂದು ಸಚಿವರು ಹೇಳಿದರು.

ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಗೆ ಸಾಕಷ್ಟು ಆದ್ಯತೆ ಮತ್ತು ಉತ್ತೇಜನ ಇರಬೇಕು. ಹೀಗಾಗಿ ವಿಟಿಯುನಲ್ಲಿ ಸಂಶೋಧನಾರ್ಥಿಗಳಿಗೆ ಸದ್ಯಕ್ಕೆ ಕೊಡುತ್ತಿರುವ ಮಾಸಿಕ 25 ಸಾವಿರ ರೂ.ಗಳ ಫೆಲೋಶಿಪ್ಪನ್ನು ಮುಂಬರುವ ದಿನಗಳಲ್ಲಿ ಏರಿಸಲಾಗುವುದು. ಇದರಿಂದಾಗಿ ರಾಜ್ಯದಲ್ಲಿ ಶೈಕ್ಷಣಿಕ, ಸಂಶೋಧನಾತ್ಮಕ ಮತ್ತು ಔದ್ಯಮಿಕ ಸಂಸ್ಕೃತಿಗಳ ತ್ರಿವೇಣಿ ಸಂಗಮವಾಗಲಿದೆ. ಇದು ಆತ್ಮನಿರ್ಭರ ಭಾರತ ನಿರ್ಮಾಣದ ಕನಸನ್ನು ನನಸಾಗಿಸಲಿದೆ ಎಂದು ಅಶ್ವತ್ಥನಾರಾಯಣ ಪ್ರತಿಪಾದಿಸಿದರು.

ಇದೇ ಸಂದರ್ಭದಲ್ಲಿ ಅವರು, ನೀರಾವರಿ ತಜ್ಞ, ದಿವಂಗತ ಎಸ್.ಜಿ.ಬಾಳೇಕುಂದ್ರಿ ಅವರ ಶತಮಾನೋತ್ಸವವನ್ನು ವಿ.ವಿ.ದಲ್ಲಿ ಅರ್ಥಪೂರ್ಣವಾಗಿ ಆಚರಿಸುವ ಜತೆಗೆ, ಅವರ ಹೆಸರಿನಲ್ಲಿ ಅಧ್ಯಯನ ಕೇಂದ್ರವನ್ನೂ ತೆರೆಯಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋತ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸಂಸದೆ ಮಂಗಳಾ ಅಂಗಡಿ, ಕುಲಪತಿ ಪ್ರೊ.ಕರಿಸಿದ್ಧಪ್ಪ ಉಪಸ್ಥಿತರಿದ್ದರು.

ಘಟಿಕೋತ್ಸವದಲ್ಲಿ ರ್ಯಾಂಕ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಜತೆಗೆ, ಉದ್ಯಮಿ ಕ್ರಿಸ್ ಗೋಪಾಲಕೃಷ್ಣನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಭಾರತ್ ಬಯೋಟೆಕ್ ಸಂಸ್ಥಾಪಕ ಡಾ.ಕೃಷ್ಣ ಯಲ್ಲಾ ಮತ್ತು ಹಿರಿಯ ಸಂಶೋಧಕಿ ಡಾ.ರೋಹಿಣಿ ಗೋಡಬೋಲೆ ಅವರನ್ನೂ ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿದ್ದು, ಅವರು ಅನುಪಸ್ಥಿತಿಯಲ್ಲಿ ಪ್ರದಾನ ಮಾಡಲಾಯಿತು.
ವಿಶ್ವೇಶ್ವರಯ್ಯ ತಾಂತ್ರಿಕ ವಿವಿ 21 ನೇ ಘಟಿಕೋತ್ಸವ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button