ಪ್ರಗತಿವಾಹಿನಿ ಸುದ್ದಿ: ಮಕರ ಸಂಕ್ರಾಂತಿಯೆಂದು ಎಳ್ಳುಬೆಲ್ಲ ಕೊಡಲು ಬಂದಿದ್ದ ಅತ್ತೆಯನ್ನೇ ಅಳಿಯ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ನಗರದ ಖಾಸಬಾಗ್ ನ ರಾಯತ್ ಗಲ್ಲಿಯಲ್ಲಿ ನಡೆದಿದೆ.
43 ವರ್ಷದ ರೇಣುಕಾ ಪದ್ಮುಖಿ ಕೊಲೆಯಾದ ಮಹಿಳೆ. ಶುಭಂ ಬಿರ್ಜೆ ಅತ್ತೆಯನೇ ಕೊಂದ ಅಳಿಯ. ಪತ್ನಿ ಚಿಕಿತ್ಸೆಗೆಂದು ಹಣ ನೀಡುವಂತೆ ಶುಭಂ ಬಿರ್ಜೆ ಕೇಳಿದ್ದ ಹಣ ಕೊಡಲು ನಿರಾಕರಿಸಿದ್ದಕ್ಕೆ ಕುಡಿದ ಮತ್ತಿನಲ್ಲಿ ಅತ್ತೆಯನ್ನೇ ಕೊಲೆ ಮಾಡಿದ್ದಾನೆ.
ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಶುಭಂ ಬಿರ್ಜೆ, ಆತನ ತಾಯಿ ಸುಜಾತಾ ಬಿರ್ಜೆ, ತಂದೆ ದತ್ತಾ ಬಿರ್ಜೆ ಬಂಧಿತರು. ಪ್ರಾಥಮಿಕ ತನಿಖಾ ಮಾಹಿತಿಯ ಪ್ರಕಾರ, ಶುಭಂ ಹಾಗೂ ರೇಣುಕಾ ದಂಪತಿಗಳು ಸುಮಾರು 7 ತಿಂಗಳ ಹಿಂದೆ ರಜಿಸ್ಟರ್ ಮದುವೆಯಾಗಿದ್ದರು. ಆರೋಪಿ ಪತ್ನಿ 3 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೂ ಪತ್ನಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಆದ್ದರಿಂದ ರೇಣುಕಾ ಮಧ್ಯಪ್ರವೇಶಿಸಿ ಮಗಳಿಗೆ ಚಿಕಿತ್ಸೆ ಕೊಡಿಸಿದ್ದರು. ಈ ಸಂಬಂಧ ಹುಡುಗನ ಕುಟುಂಬ ಮತ್ತು ಹುಡುಗಿಯ ಕುಟುಂಬದ ನಡುವೆ ಮಾತಿನ ಚಕಮಕಿ ನಡೆಯಿತು. ಆ ಸಮಯದಲ್ಲಿ ಆರೋಪಿಯು ಅತ್ತೆಯನ್ನೇ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ