ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: 2019-20 ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ ಅನುದಾನ ವ್ಯರ್ಥವಾಗಲು ಕಾರಣರಾದ ವಿವಿಧ ಇಲಾಖೆಯ ಅಧಿಕಾರಿಗಳ ಕುರಿತು ಸಮಿತಿಯು ಈಗಾಗಲೇ ವರದಿ ನೀಡಿದೆ. ಸದರಿ ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ಜಿಲ್ಲಾ ಪಂಚಾಯತ ಸದಸ್ಯರ ಒಮ್ಮತಾಭಿಪ್ರಾಯದ ಮೇರೆಗೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಕಳಿಸಲಾಗುವುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ (ನ.17) ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯ ಆರಂಭದಲ್ಲಿ ಮಾತನಾಡಿದ ಸದಸ್ಯ ರಮೇಶ್ ದೇಶಪಾಂಡೆ, ನಿಗದಿತ ದಿನಕ್ಕಿಂತ ತಡವಾಗಿ ಬಿಲ್ ಸಲ್ಲಿಸಿದ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಗೂ ತಾಂತ್ರಿಕ ನೆಪವೊಡ್ಡಿ ಬಿಲ್ ಪಾಸ್ ಮಾಡದೇ ಅನುದಾನ ವ್ಯರ್ಥವಾಗಲು ಕಾರಣರಾದ ಖಜಾನೆ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪಟ್ಟುಹಿಡಿದರು.
ಪ್ರತಿ ಸಭೆಯಲ್ಲೂ ಇದೇ ವಿಷಯ ಚರ್ಚೆಯಾದರೂ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟಾರೆ ಅಂದಾಜು 7 ಕೋಟಿ ರೂಪಾಯಿ ಮೊತ್ತದ ಬಿಲ್ ಗಳಿಗೆ ಮಾರ್ಚ್ 29ಕ್ಕೆ ಟೋಕನ್ ನೀಡಿದ ಖಜಾನೆ ಅಧಿಕಾರಿಗಳು ಅದರಲ್ಲಿ ಕೇವಲ 1.80 ಕೋಟಿ ಬಿಲ್ ಮಾತ್ರ ಪಾಸ್ ಮಾಡುವ ಮೂಲಕ ಉಳಿದ ಬಿಲ್ ಪಾಸ್ ಮಾಡದೇ ಅನುದಾನ ವ್ಯರ್ಥ ಆಗಲು ಕಾರಣರಾಗಿದ್ದಾರೆ ಎಂದು ಸದಸ್ಯ ಶಂಕರ ಮಾಡಲಗಿ ದೂರಿದರು.
ಇಂತಹ ಲೋಪವೆಸಗಿದ ನಿರ್ದಿಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಕಳೆದ ಸಭೆಗಳಲ್ಲಿ ಸದಸ್ಯರ ಆಗ್ರಹಿಸಿದಂತೆ ವ್ಯಪಗತ ಕುರಿತು ತನಿಖೆಗೆ ಸಮಿತಿ ರಚಿಸಲಾಗಿತ್ತು. ಸದರಿ ಸಮಿತಿಯ ವರದಿಯ ಪ್ರಕಾರ ಒಟ್ಟಾರೆ 28 ಇಲಾಖೆಯ ಅನುದಾನ ವ್ಯರ್ಥವಾಗಿರುವುದು ಕಂಡುಬಂದಿರುತ್ತದೆ ಎಂದು ವಿವರಿಸಿದರು.
ಕೆಲವೊಂದು ಇಲಾಖೆಯಲ್ಲಿ ಅತ್ಯಂತ ಕಡಿಮೆ ಅನುದಾನ ವ್ಯರ್ಥವಾದರೆ ಕೆಲವೆಡೆ ಹೆಚ್ಚಿನ ಅನುದಾನ ವ್ಯರ್ಥವಾಗಿರುತ್ತದೆ. ಎಲ್ಲ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡುವ ಬದಲು ಅತೀ ಹೆಚ್ಚು ಅನುದಾನ ವ್ಯರ್ಥಗೊಳಿಸಿದ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮಕ್ಕೆ ಕಳಿಸಬಹುದು. ಈ ಬಗ್ಗೆ ಸದಸ್ಯರು ಒಮ್ಮತದ ಅಭಿಪ್ರಾಯ ನೀಡಬೇಕು ಎಂದು ದರ್ಶನ್ ಕೋರಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಅನುದಾನ ವ್ಯರ್ಥ ಕುರಿತು ಖಜಾನೆಯ ಜಂಟಿ ನಿರ್ದೇಶಕರನ್ನು ಕೂಡ ಸಭೆಗೆ ಕರೆಸಲಾಗಿತ್ತು. ಅವರು ಕೂಡ ಸರ್ಕಾರದ ಮಾರ್ಗಸೂಚಿ ಮತ್ತು ನಿಯಮಾವಳಿಗಳ ಕುರಿತು ವಿಸ್ತೃತವಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು
ಫೆಬ್ರುವರಿ ಅಂತ್ಯಕ್ಕೆ ಬಿಲ್ ಸಲ್ಲಿಸಲು ಕ್ರಮ:
ಪ್ರಸಕ್ತ ಸಾಲಿನಲ್ಲಿ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಿ ಫೆಬ್ರುವರಿ ಅಂತ್ಯದೊಳಗೆ ಸಲ್ಲಿಸುವಂತೆ ಎಲ್ಲ ಅಧಿಕಾರಿಗಳಿಗೂ ಸೂಚಿಸಲಾಗಿದ್ದು, ಈ ಬಾರಿ ಅನುದಾನ ವ್ಯರ್ಥ ಆಗದಂತೆ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುವುದು ಎಂದು ಜಿಪಂ ಸಿಇಓ ದರ್ಶನ್ ತಿಳಿಸಿದರು.
ಸರಕಾರಿ ನೌಕರರ ವೈದ್ಯಕೀಯ ವೆಚ್ಚದ ಬಿಲ್ ಗಳನ್ನು ಬಾಕಿ ಇಟ್ಟುಕೊಂಡಿರುವ ಬಗ್ಗೆ ಪ್ರಸ್ತಾಪಿಸಿದ ಸದಸ್ಯ ರಮೇಶ್ ದೇಶಪಾಂಡೆ ಅವರು, ಇದರಿಂದ ಅನಾರೋಗ್ಯಕ್ಕೆ ಒಳಗಾದವರಿಗೆ ವಿನಾಕಾರಣ ತೊಂದರೆಯಾಗುತ್ತಿದೆ ಎಂದರು.
ಬಾಕಿ ಉಳಿದಿರುವ 450 ವೈದ್ಯಕೀಯ ವೆಚ್ಚದ ಬಿಲ್ ಸೇರಿದಂತೆ ಇನ್ನು ಮುಂದೆ ಯಾವುದೇ ಸರಕಾರಿ ನೌಕರರ ವೈದ್ಯಕೀಯ ವೆಚ್ಚದ ಬಿಲ್ ಗಳನ್ನು ಇಂದು ತಿಂಗಳಿನಲ್ಲಿ ಪಾಸ್ ಮಾಡಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂಬರುವ ದಿನಗಳಲ್ಲಿ ಬಿಲ್ ಪಾವತಿ ತಡವಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು.
2019 ನೇ ಸಾಲಿನಲ್ಲಿ ಲಿಂಕ್ ಹೊರತುಪಡಿಸಿ ಬಿಡುಗಡೆಯಾದ ಅನುದಾನದ ಪೈಕಿ ಒಟ್ಟಾರೆ 6360.60 ಲಕ್ಷ ರೂಪಾಯಿ ಅನುದಾನ ವ್ಯಪಗತವಾಗಿತ್ತು. ಅದೇ ರೀತಿ ಇಲಾಖಾವಾರು ಬಿಡುಗಡೆಯಾದ ವೇತನೇತರ (ಲಿಂಕ್ ಪ್ರಕಾರ) 1942.21 ಲಕ್ಷ ರೂಪಾಯಿ ಅನುದಾನ ವ್ಯಪಗತವಾಗಿರುತ್ತದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿಗಳು ಕಳೆದ ಸಭೆಯಲ್ಲಿ ಸದಸ್ಯರ ಗಮನಕ್ಕೆ ತಂದಿದ್ದರು.
ಇಂದಿನ ಸಭೆಯಲ್ಲಿ ಇದೇ ವಿಷಯ ಪ್ರಮುಖವಾಗಿ ಚರ್ಚೆಯಾಯಿತು. ಇದಲ್ಲದೇ ಹದಿನೈದನೇ ಹಣಕಾಸು ಯೋಜನೆಯಡಿ ನೀಡಲಾಗುವ ಅನುದಾನದಲ್ಲಿ ಶೌಚಾಲಯ ನಿರ್ಮಾಣಕ್ಕೆ ಇರುವ ಅನುದಾನವನ್ನು ಕುಡಿಯುವ ನೀರು ಯೋಜನೆಗೆ ಒದಗಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಸರ್ಕಾರದ ಮಾರ್ಗಸೂಚಿಯಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಜಿಪಂ ಸಿಇಓ ದರ್ಶನ್ ಸ್ಪಷ್ಟಪಡಿಸಿದರು.
ಇತ್ತೀಚೆಗೆ ನಿಧನರಾದ ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರಿಗೆ ಸಭೆಯ ಆರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಒಂದು ನಿಮಿಷ ಮೌನ ಆಚರಿಸಲಾಯಿತು.
ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಅರುಣ ಕಟಾಂಬಳೆ, ಸದಸ್ಯರಾದ ಸರಸ್ವತಿ ಪಾಟೀಲ, ಶಂಕರ ಮಾಡಲಗಿ, ಸಿದ್ದಪ್ಪ ಮುದಕಣ್ಣವರ, ಜಿತೇಂದ್ರ ಮಾದರ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ