Kannada NewsLatest

ಕನ್ನಡ ಅಸ್ಮಿತೆಗೆ ದಕ್ಕೆಯಾದರೆ ಸಹಿಸಲ್ಲ; ಎಂಇಎಸ್‌ಗೆ ನಾಡೋಜ ಮಹೇಶ ಜೋಶಿ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ಗುರುವಾರ ಬೆಳಗಾವಿ ನಗರಕ್ಕೆ ಭೇಟಿ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಲಾ ಶ್ರೀ ಮೆಟಗುಡ್ಡ ಅವರು ನಗರದ ಚನ್ನಮ್ಮ ವೃತ್ತದಲ್ಲಿ ನಾಡಧ್ವಜ ನೀಡಿ ಬರಮಾಡಿಕೊಂಡರು.

ನಂತರ ರಾಣಿ ಚನ್ನಮ್ಮಳ ಪುತ್ಥಳಿಗೆ ಮಹೇಶ ಜೋಶಿ ಮಾಲಾರ್ಪಣೆ ಮಾಡಿದರು. ನಗರದ ಶ್ರೀ ಕೃಷ್ಣದೇವರಾಯ ವೃತ್ತದಿಂದ ವಾದ್ಯ ಮೇಳದೊಂದಿಗೆ, ಜಿಲ್ಲೆಯ ಸಾಹಿತಿಗಳು, ಕನ್ನಡ ಅಭಿಮಾನಿಗಳು ಮೆರವಣಿಗೆ ಮೂಲಕ ಮಹೇಶ ಜೋಶಿ ಅವರನ್ನು ಕುಮಾರ ಗಂಧರ್ವ ರಂಗಮಂದಿರ ಡಾ.ಬಸವರಾಜ ಕಟ್ಟಿಮನಿ ಸಭಾ ಭವನಕ್ಕೆ ಕರೆದೊಯ್ಯಲಾಯಿತು.

ಡಾ.ಮಹೇಶ ಜೋಶಿ ಅವರು ಬೆಳಗಾವಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವ, ಮಂಗಲಾ ಶ್ರೀ ಮೆಟಗುಡ್ಡ ಅವರಿಗೆ ಪರಿಷತ್ತು ಧ್ವಜ ನೀಡುವ ಮೂಲಕ ಅವರಿಗೆ ಜಿಲ್ಲಾ ಪರಿಷತ್ ಜವಾಬ್ದಾರಿಯನ್ನು ಕೊಟ್ಟರು.

ಈ ವೇಳೆ ಮಾತನಾಡಿದ ಮಹೇಶ್ ಜೊಶಿ, ನಮ್ಮ ಕನ್ನಡದ ಅಸ್ಮಿತೆಯ ಸ್ವಾಭಿಮಾನದ ಸೌಭಾಗ್ಯದ ಸಂಕೇತವಾದ ನಾಡ ಧ್ವಜವನ್ನು ಸುಟ್ಟಿರುವುದು, ಇಡೀ ನಾಡಿನ ಕನ್ನಡಿಗರನ್ನು ಕೆರಳಿಸಿದೆ. ಹಾಗೆಯೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಬಸವೇಶ್ವರ ಪುತ್ತಳಿಗಳಿಗೆ ಅವಮಾನ ಮಾಡಿದ ಪುಂಡರ ಪುಂಡಾಟಿಕೆ ತಡೆಯಬೇಕು ಎಂದು ಆಗ್ರಹಿಸಿದರು.

ತಪ್ಪಿತಸ್ಥರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಬೇಕು. ಮತ್ತು ನಾಡದ್ರೋಹಿ ಚಟುವಟಿಕೆಗಳಿಗೆ ಸದಾ ಕುಮ್ಮಕ್ಕು ನೀಡುತ್ತಿರುವ ಎಂಇಎಸ್ ನಿಷೇಧಿಸಬೇಕು ಎಂದರು.

ನಮ್ಮ ಸಾಹಿತ್ಯ ಪರಿಷತ್ತು ಸದಾ ಕನ್ನಡಕ್ಕಾಗಿ ದುಡಿಯುತ್ತಿದ್ದು, ಇದು ಕೇವಲ ಸಾಹಿತಿಗಳ ಪರಿಷತ್ ಅಲ್ಲ, ಇದನ್ನು ಅಭಿಮಾನಿಗಳ, ಸಹೃದಯಿಗಳ, ಕನ್ನಡ ಕಾವಲುಗಾರರ, ಪೋಷಕರ, ನಾಡಿನ ಹಿತ ಚಿಂತಕರ ಪರಿಷತ್ ಆಗಿ ಮಾಡೋಣ. ನಿಮ್ಮ ಊರುಗಳಲ್ಲಿ ಗ್ರಾಮ, ತಾಲೂಕು, ಜಿಲ್ಲೆಗಳಲ್ಲಿ ಮರೆತುಹೋಗಿರುವ ಸಾಹಿತಿಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಹೊಸ ಯೋಜನೆ ಮಾಡೋಣ, ಊರಿನ ಬಸ್ ನಿಲ್ದಾಣಗಳಿಗೆ ಸಾಹಿತಿಗಳ ಹೆಸರು ನಾಮಕರಣ ಮಾಡಿ, ಅವರನ್ನು ನೆನೆಯೋಣ ಎಂದರು.

ಸಾನಿಧ್ಯ ವಹಿಸಿದ್ದ ಕಾರಂಜಿಮಠದ ಶ್ರೀ.ಮ.ನಿ.ಪ್ರ.ಗುರುಸಿದ್ಧ ಮಹಾಸ್ವಾಮಿಗಳು ಮಾತನಾಡಿ ಕಳೆದ 5 ವರ್ಷಗಳಲ್ಲಿ ಒಬ್ಬ ಮಹಿಳೆಯಾಗಿ ಅನೇಕ ಒಳ್ಳೆಯ ಕಾರ್ಯಕ್ರಮಗಳೊಂದಿಗೆ ಕನ್ನಡವನ್ನು ಕಟ್ಟುವ ಕೆಲಸ ಮೆಟಗುಡ್ಡ ಅವರು ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಬೆಳಗಾವಿಯ ಅಭಿಮಾನ ಗಡಿಭಾಗದ ಕನ್ನಡದ ಕಂಪು ರಾಜ್ಯದಲ್ಲೆಡೆ ಪಸರುವಂತೆ ಆಗಲಿ ಎಂದು ಹಾರೈಸಿದರು.

ಅಧಿಕಾರ ಸ್ವೀಕರಿಸಿದ ಮಂಗಲಾ ಮೆಟಗುಡ್ಡ ಜಿಲ್ಲೆಯಲ್ಲಿ ಕನ್ನಡದ ಅಭಿಮಾನ ವೃದ್ಧಿಸಲು ತಾಲೂಕಿಗೊಂದು, ಕನ್ನಡ ಭವನ ನಿರ್ಮಾಣವಾಗಬೇಕಿದೆ. ಅಪೂರ್ಣ ಕಟ್ಟಡಗಳನ್ನು ಪೂರ್ಣಗೊಳಿಸಲು ಮತ್ತು ಹಿರಿಯ ಸಾಹಿತಿಗಳ ವ್ಯಕ್ತಿ ಚಿತ್ರಣ ಮಾಡುವ, ಕನ್ನಡಕ್ಕಾಗಿ ಮತ್ತು ಸಾಹಿತ್ಯದ ಬೆಳವಣಿಗೆಗೆ ಎಲ್ಲರ ಸಹಾಯ ಸಹಕಾರದಿಂದ ಜವಾಬ್ದಾರಿಯಿಂದ ಕೆಲಸ ಮಾಡುವೆ ಎಂದರು.

ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಎಂ ವೈ ಮೆಣಸಿನಕಾಯಿ ಮತ್ತು ಸುನೀಲ ಸಾಣಿಕೊಪ್ಪ ಅವರು ಬರೆದ ‘ನಮ್ಮ ರಾಷ್ಟ್ರೀಯ ಹಬ್ಬಗಳು ಮತ್ತು ‘ಬಯಲು ಗೀತ’ ಪುಸ್ತಕಗಳು ಲೋಕಾರ್ಪಣೆಗೊಂಡವು.

ಅತಿಥಿಗಳಾಗಿ ಆಗಮಿಸಿದ್ದ ಗೋವಾ ಕನ್ನಡಿಗರ ಸಂಘದ ಜಯಶ್ರೀ ಹೊಸಮನಿ ಕನ್ನಡ ನಾಡಿನ ಹೊರಗೂ ಸಹ ಇರುವ ನಮ್ಮ ಕನ್ನಡಿಗರ ಹಿತರಕ್ಷಣೆ ಕಾಪಾಡಲು ಮತ್ತು ನಾಡು ನುಡಿ ಬೆಳೆಸಲು ಗಡಿಯಾಚೆಯು ನಮ್ಮ ಸಂಘ ಶ್ರಮಿಸುತ್ತಿದೆ ಇದಕ್ಕೆ ತಮ್ಮೆಲ್ಲರ ಸಹಕಾರ ನಿರಂತರವಾಗಿರಲಿ ಎಂದರು.

ಹಿರಿಯ ಸಾಹಿತಿ ಚಂದ್ರಶೇಖರ ಅಕ್ಕಿ ಅವರು ಮಾತನಾಡಿ ಗಡಿಭಾಗದಲ್ಲಿರುವ ಬೆಳಗಾವಿಯಲ್ಲಿ ಮುಂಬರುವ ದಿನಗಳಲ್ಲಿ ಮಂಗಲಾ ಮೆಟಗುಡ್ಡ ಅವರ ಅಧಿಕಾರವಧಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿ ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಯ ರು ಪಾಟೀಲ, ಮೋಹನ ಪಾಟೀಲ, ಗುರುದೇವಿ ಹುಲೆಪ್ಪನವರಮಠ, ಸ ರಾ ಸುಳಕೂಡೆ, ಎಲ್ ವ್ಹಿ ಇಚ್ಚಂಗಿ, ಸೇರಿದಂತೆ ಜಿಲ್ಲೆಯ ಎಲ್ಲ ಸಾಹಿತಿಗಳು, ಲೇಖಕಿಯರು, ಮಹಿಳಾ ಮಂಡಲದ ಸದಸ್ಯರು, ಲಿಂಗಾಯತ ಮಹಿಳಾ ಬಳಗದವರು, ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಲಿಂಗಾಯತ ಮಹಿಳಾ ಬಳಗದವರು ನಾಡಗೀತೆ ಪ್ರಸ್ತುತಪಡಿಸಿದರು. ಶೈಲಜಾ ಭಿಂಗೆ ಅತಿಥಿಗಳನ್ನು ಪರಿಚಯಿಸಿದರು. ಪಾಂಡುರAಗ ಜಟಗನ್ನವರ ಸ್ವಾಗತಿಸಿದರು. ಎಂ ವೈ ಮೆಣಸಿನಕಾಯಿ ವಂದಿಸಿದರು. ಪ್ರತಿಭಾ ಕಳ್ಳಿಮಠ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
4.60 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅನಿಲ ಬೆನಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button