Kannada NewsKarnataka NewsLatest

ಬೆಳಗಾವಿ: ಎಲ್ಲ 27 ಮಾದರಿಗಳೂ ನೆಗೆಟಿವ್ -ಮರ್ಕಜ್ ಸಭೆಯಲ್ಲಿ ಭಾಗವಹಿಸಿದವರಲ್ಲೂ ಕೊರೋನಾ ಲಕ್ಷಣ ಇಲ್ಲ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಕೋವಿಡ್-೧೯ ಸೋಂಕಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಹೊಸದಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಒಟ್ಟು ಆರು ಮಾದರಿಗಳ ಪೈಕಿ ಎಲ್ಲ ಆರೂ ವರದಿಗಳು ನೆಗೆಟಿವ್ ಬಂದಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ.
 ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಿಂದ ಇದುವರೆಗೆ ಒಟ್ಟು ೨೭  ಮಾದರಿಗಳನ್ನು ಕಳಿಸಲಾಗಿತ್ತು. ಇಂದು ಬಂದಿರುವ ವರದಿಯ ಪ್ರಕಾರ ಎಲ್ಲ ೨೭ ಮಾದರಿಗಳು ನೆಗೆಟಿವ್ ಬಂದಿರುತ್ತವೆ ಎಂದು‌ ತಿಳಿಸಿದ್ದಾರೆ.
ಇದುವರೆಗೆ ೨೧ ಮಾದರಿಗಳ ವರದಿ ನೆಗೆಟಿವ್ ಬಂದಿದ್ದು, ಇಂದಿನ ಆರು ಪ್ರಕರಣಗಳ ವರದಿ ಕೂಡ ನೆಗೆಟಿವ್ ಬಂದಿರುತ್ತವೆ.
ಜನರು ವದಂತಿಗಳಿಗೆ ಕಿವಿಗೊಡದೇ ಸರ್ಕಾರದ ಸೂಚನೆ ಮೇರೆಗೆ ಎಲ್ಲ ರೀತಿಯ ಮುನ್ನೆಚ್ವರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.
 
ಮರ್ಕಜ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಬೆಳಗಾವಿ ಜಿಲ್ಲೆಯ ೬೨ ಜನರಲ್ಲಿ ರೋಗದ ಲಕ್ಷಣಗಳು ಕಂಡುಬಂದಿಲ್ಲ ಎಂದೂ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. 
 ನವದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಒಟ್ಟು ೬೨ ಜನರಲ್ಲಿ ಯಾರಿಗೂ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ೪೨ ಜನರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ೩೩ ಜನರ ಗಂಟಲು ದ್ರವದ ‌ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ತಬ್ಲಿಘಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರು ಮತ್ತೆ ಯಾರಾದರೂ ಇದ್ದಲ್ಲಿ ತಕ್ಷಣವೇ ಸ್ವಯಂ ಪ್ರೇರಣೆಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷಿಸಿಕೊಂಡು ಜಿಲ್ಲಾಡಳಿಕ್ಕೆ ಮಾಹಿತಿಯನ್ನು ನೀಡಬೇಕು.
ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡೂ ಮಾಹಿತಿಯನ್ನು ಮುಚ್ಚಿಟ್ಟರೆ ಅಂತಹವರ ವಿರುದ್ಧ ಸಮಾಜದ ಆರೋಗ್ಯದ ದೃಷ್ಟಿಯಿಂದ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರ ಬಗ್ಗೆ ಸಾರ್ವಜನಿಕರು ಕೂಡ ಆಯಾ ತಾಲ್ಲೂಕಿನ ತಹಶೀಲ್ದಾರರು ಅಥವಾ ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿಯನ್ನು ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ೬೨ ಜನರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಯಾರಲ್ಲೂ ಸೋಂಕು ಕಂಡುಬಂದಿರುವುದಿಲ್ಲ. ಆದಾಗ್ಯೂ ಮುಂಜಾಗ್ರತಾ ಕ್ರಮವಾಗಿ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ.
ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗದೇ ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು.
ಅನಾವಶ್ಯಕವಾಗಿ ಜನರು ರಸ್ತೆಗೆ ಬಂದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button