Belagavi NewsBelgaum NewsKannada NewsKarnataka NewsLatestNationalPolitics

*ಪತ್ನಿಯನ್ನೇ ಕ್ರೂರವಾಗಿ ಹತ್ಯೆ ಮಾಡಿದ ಕುಡುಕ ಪತಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯನ್ನು ಪತಿ ಕ್ರೂರವಾಗಿ ಹತ್ಯೆ ಮಾಡಿದ ದಾರುಣ ಘಟನೆ ಶನಿವಾರ ನಡೆದಿದೆ.

ಮೃತ ಮಹಿಳೆಯನ್ನು ಶಿವಕ್ಕ ಬಸವರಾಜ ಜೋಡಳಿ (33) ಎಂದು ಗುರುತಿಸಲಾಗಿದ್ದು, ಆರೋಪಿ ಬಸವರಾಜ ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದನು. ದಂಪತಿಗಳಿಗೆ ಸೌಮ್ಯ, ಪ್ರವೀಣ ಹಾಗೂ ಪ್ರಭು ಎಂಬ ಮೂವರು ಮಕ್ಕಳು ಇದ್ದರು. ಕಳೆದ ಸುಮಾರು ಆರು ವರ್ಷಗಳಿಂದ ಆರೋಪಿ ಮದ್ಯಪಾನ ಮಾಡಿ ಸಂಶಯದ ಹಿನ್ನೆಲೆಯಲ್ಲಿ ಪತ್ನಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದನು ಎಂದು ತಿಳಿದುಬಂದಿದೆ.

ಈ ಕಿರುಕುಳದಿಂದ ಬೇಸತ್ತ ಶಿವಕ್ಕ ಅವರು ಇಬ್ಬರು ಗಂಡು ಮಕ್ಕಳೊಂದಿಗೆ ತಮ್ಮ ಮನೆಗೆ ತೆರಳಿ ವಾಸವಾಗಿದ್ದರು. ಮಗಳು ಸೌಮ್ಯಳನ್ನು ಆರೋಪಿ ಬೆಂಗಳೂರಿನಲ್ಲಿ ತನ್ನೊಂದಿಗೆ ಇಟ್ಟುಕೊಂಡಿದ್ದನು. ಈ ನಡುವೆ ಆರೋಪಿ ಆಗಾಗ್ಗೆ ಊರಿಗೆ ಬಂದು ಪತ್ನಿ ಜೊತೆ ಜಗಳವಾಡಿ ಬೆದರಿಕೆ ಹಾಕುತ್ತಿದ್ದನು. ಈ ಕುರಿತು ಈಗಾಗಲೇ ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶನಿವಾರವೂ ಮನೆಗೆ ಬಂದ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿ “ನಿನ್ನನ್ನು ಜೀವಂತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ, ಕೂದಲು ಹಿಡಿದು ಎಳೆದುಕೊಂಡು ರಸ್ತೆಗೇರಿಸಿ ಹಲ್ಲೆ ನಡೆಸಿದ್ದಾನೆ. ನಂತರ ಅಲ್ಲೇ ಇದ್ದ ದೊಡ್ಡ ಕಲ್ಲಿನಿಂದ ತಲೆ ಹಾಗೂ ಕಾಲಿನ ಮೇಲೆ ಹೊಡೆದು ಕ್ರೂರವಾಗಿ ಕೊಲೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಧ್ಯೆ ಬಿಡಿಸಲು ಬಂದ ಮೃತೆಯ ತಂದೆಯ ಮೇಲೂ ಆರೋಪಿ ಹಲ್ಲೆ ನಡೆಸಿರುವುದು ತಿಳಿದುಬಂದಿದೆ.

ಘಟನೆ ಸಂಬಂಧ ದೊಡವಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೇವಲ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Related Articles

Back to top button