Kannada NewsKarnataka NewsPolitics

*ರಾಜ್ಯ ಬಿಜೆಪಿ ಉಸ್ತುವಾರಿ ಬದಲಾವಣೆ ಬೆನ್ನಲ್ಲೇ ಸ್ಫೋಟಕ ಹೇಳಿಕೆ ನೀಡಿದ ಯತ್ನಾಳ್*

ಪ್ರಗತಿವಾಹಿನಿ ಸುದ್ದಿ: 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿಗೆ ಬಿಜೆಪಿ ನೂತನ ಉಸ್ತುವಾರಿಗಳು ಮತ್ತು ಸಹ-ಉಸ್ತುವಾರಿಗಳನ್ನು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ನೇಮಕ ಮಾಡಿದ್ದಾರೆ. ಕರ್ನಾಟಕದ ನೂತನ ರಾಜ್ಯ ಉಸ್ತುವಾರಿಯಾಗಿ ಹರೀಶ್ ದ್ವಿವೇದಿ ಅವರನ್ನು ನೇಮಕ ಮಾಡಲಾಗಿದೆ. ಸಹ-ಉಸ್ತುವಾರಿಯಾಗಿ ಡಾ. ಕಾಸಂ ವೆಂಕಟೇಶ್ವರಲು ಅವರಿಗೆ ಜವಾಬ್ದಾರಿ ನೀಡಲಾಗಿದೆ. ಈ ಬದಲಾವಣೆ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಯತ್ನಾಳ್, ಹಿಂದೆ ಅರುಣ್ ಸಿಂಗ್ ಮತ್ತು ರಾಧಾ ಮೋಹನ್ ದಾಸ್ ಅಗರವಾಲ್ ಉಸ್ತುವಾರಿಗಳಾಗಿದ್ದಾಗಲೂ ಬಹಳ ನಿರೀಕ್ಷೆಗಳಿತ್ತು, ಏನೂ ಲಾಭ ಆಗಲಿಲ್ಲ. ಈಗ ರಾಧಾ ಮೋಹನ್ ದಾಸ್ ಅಗರವಾಲ್ ಅವರನ್ನು ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಿಂದ ತೆಗೆದು ಹಾಕಿದ್ದಾರೆ. ಹರೀಶ್ ದ್ವಿವೇದಿ ಮತ್ತು ವೆಂಕಟೇಶ್ವರಲು ಅವರಿಂದ ನಿರೀಕ್ಷೆ ಮಾಡಬೇಕಷ್ಟೇ. ಒಮ್ಮಿಂದೊಮ್ಮೆಲೇ ಬದಲಾವಣೆ ಆಗುತ್ತದೆ ಎಂದು ಏನು ಖುಷಿಪಟ್ಟಿಲ್ಲ ಎಂದಿದ್ದಾರೆ.

ನವೆಂಬರ್ ನಲ್ಲಿ ರಾಜ್ಯ ಅಧ್ಯಕ್ಷರ ಬದಲಾವಣೆ ಆದರೆ ಈ ಉಸ್ತುವಾರಿಗಳು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅನ್ನಿಸುತ್ತದೆ ಎಂದರು. ಇದೇ ವೇಳೆ ನನ್ನ ಉಚ್ಚಾಟನೆ ಮಾಡಿದ ಮೇಲೆ ನಾನು ಯಾವುದೇ ಬಿಜೆಪಿ ನಾಯಕರನ್ನು ಹೋಗಿ ಭೇಟಿ ಮಾಡಿಲ್ಲ. ನನ್ನ ಉಚ್ಚಾಟನೆ ಮರುಪರಿಶೀಲಿಸಿ ಅಂತಾ ನಾನು ಅರ್ಜಿ ಹಾಕಿಲ್ಲ. ಆಮೇಲೆ ನಾನು ಬಿಜೆಪಿಗೆ ಬೈದಿಲ್ಲ. ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರ ಬಿಟ್ಟರೆ ನಾನು ಬೇರೆ ಯಾವ ಬಿಜೆಪಿ ನಾಯಕರಿಗೆ ಬೈದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಗೆ ವಾಪಸ್ ಆಗುವ ಬಗ್ಗೆ ಪ್ರತಿಕ್ರೊಯಿಸಿದ ಯತ್ನಾಳ್, ದೇಶ ವಿರೋಧಿ ಚಟುವಟಿಕೆ ಮಾಡುವವರ ಜೊತೆ ನಾನು ಶಾಮೀಲಾಗಿಲ್ಲ. ಡಿ.ಕೆ. ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಜೊತೆ ನಾನು ಹೊಂದಾಣಿಕೆ ಮಾಡಿಕೊಂಡಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯವರು ಯಾರಿಗೆ ಹೇಳಿದರೋ ಅವರಿಗೆ ಮತ ಹಾಕಿದ್ದೇನೆ. ನನ್ನ ನಿಷ್ಠೆ ಬಿಜೆಪಿಗೆ ಮತ್ತು ಮೋದಿಗೆ ತೋರಿಸಿಕೊಟ್ಟಿದ್ದೇನೆ. ಇನ್ನು ಮುಂದಾದರೂ ಆ ಎಲ್ಲಾ ಗಣನೆ ಮಾಡಿ ನನಗೆ ಮಹತ್ತರ ಹುದ್ದೆ ಬಗ್ಗೆ ಪರಿಶೀಲಿಸುತ್ತೇವೆ ಎಂದರೆ ಮಾತ್ರ ಬಿಜೆಪಿಗೆ ವಾಪಸಾಗುವ ಬಗ್ಗೆ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.

Related Articles

Back to top button