ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಸೋಮವಾರ ಸಭೆ ನಡೆಸಿ ಚರ್ಚಿಸಿದರು.
ಈ ಸಂಬಂಧ ನಡೆದ 2ನೇ ಸಭೆ ಇದಾಗಿದೆ. ಅಭ್ಯರ್ಥಿ ಆಯ್ಕೆಗಾಗಿ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ 11 ಜನರ ಸಮಿತಿಯನ್ನು ಕಾಂಗ್ರೆಸ್ ನೇಮಕ ಮಾಡಿದೆ. ಬೆಳಗಾವಿಯಲ್ಲಿ ಮೊದಲ ಸಭೆ ನಡೆಸಲಾಗಿತ್ತು. ಇದೀಗ 2ನೇ ಸಭೆ ನಡೆದಿದ್ದು, ಆಕಾಂಕ್ಷಿಗಳ ಪಟ್ಟಿಯನ್ನು ಪರಿಶೀಲಿಸಲಾಯಿತು.
ಮಾಜಿ ಸಚಿವ, ಹಾಲಿ ಶಾಸಕ ಸತೀಶ್ ಜಾರಕಿಹೊಳಿ ಕಣಕ್ಕಿಳಿಯಬೇಕೆನ್ನುವ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂತು. ಅನೇಕ ನಾಯಕರು ಸತೀಶ್ ಜಾರಕಿಹೊಳಿ ಕಣಕ್ಕಿಳಿಯುವುದರಿಂದ ಕಾಂಗ್ರೆಸ್ ಗೆ ಬಲ ಬರಲಿದೆ. ಹಾಗಾಗಿ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಬೇಕು ಮತ್ತು ಅವರೇ ಸ್ಪರ್ಧಿಸಿದರೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಈ ಬಗ್ಗೆ ಯೋಚಿಸಿ ತಮ್ಮ ಅಭಿಪ್ರಾಯವನ್ನು ಶೀಘ್ರದಲ್ಲಿ ತಿಳಿಸುವುದಾಗಿ ಹೇಳಿದರು ಎಂದು ಗೊತ್ತಾಗಿದೆ.
ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಕಣಕ್ಕಿಳಿಸಬೇಕು ಎನ್ನುವ ಅಭಿಪ್ರಾಯವನ್ನೂ ಒಂದಿಬ್ಬರು ಮಂಡಿಸಿದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಎಂ.ಬಿ.ಪಾಟೀಲ, ಈಶ್ವರ ಖಂಡ್ರೆ, ಡಾ.ಜಿ.ಪರಮೇಶ್ವರ, ಲಕ್ಷ್ಮಿ ಹೆಬ್ಬಾಳಕರ್, ಮಹಾಂತೇಶ ಕೌಜಲಗಿ ಮೊದಲಾದವರು ಸಭೆಯಲ್ಲಿದ್ದರು.
ಸುರೇಶ ಅಂಗಡಿ ನಿಧನದಿಂದಾಗಿ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಫೆಬ್ರವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಅಭ್ಯರ್ಥಿಯ ಆಯ್ಕೆ ಕಸರತ್ತು ಜೋರಾಗಿದೆ.
ಬಿಜೆಪಿಯಲ್ಲಿ 20ಕ್ಕೂ ಹೆಚ್ಚು ಜನರು ಕಣಕ್ಕಿಳಿಯಲು ಪ್ರಯತ್ನ ನಡೆಸಿದ್ದಾರೆ.
ಸತೀಶ್ ಜಾರಕಿಹೊಳಿ ಹೆಗಲಿಗೆ ಬೆಳಗಾವಿ ಚುನಾವಣೆ: ಅಭ್ಯರ್ಥಿ ಆಯ್ಕೆಗೆ ಮತ್ತೆ ಸಭೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ