*ಬೆಳಗಾವಿ, ಚಿಕ್ಕೋಡಿ ಸೇರಿ 14-17 ಸೀಟು ಗೆಲುವು: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ, ಚಿಕ್ಕೋಡಿ ಸೇರಿದಂತೆ ರಾಜ್ಯದಲ್ಲಿ 14 ರಿಂದ 17 ಸೀಟುಗಳನ್ನು ಗೆಲ್ಲುತ್ತೇವೆಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಬೆಳಗಾವಿ ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬೈಯಿ, ಹೈದರಾಬಾದ್ ಕರ್ನಾಟಕದಲ್ಲಿ ಹೆಚ್ಚು ಕಾಂಗ್ರೆಸ್ ಸೀಟು ಗೆಲ್ಲುವ ವಿಶ್ವಾಸ ಇದ್ದು, ಸಚಿವರ ಮಕ್ಕಳಿಗೆ ಟಿಕೆಟ್ ಸಿಕ್ಕಿದ್ದರಿಂದ ಪಕ್ಷಕ್ಕೆ ಅನುಕೂಲವೇ ಆಗಿದೆ. 2019 ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ನಾವು ಹೆಚ್ಚಿನ ಸೀಟು ಗೆಲ್ಲಲು ಅವಕಾಶ ಇದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಸಚಿವರ ಮಕ್ಕಳಿಗೆ ಟಿಕೆಟ್ ನೀಡಿದ್ದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಈ ಕುರಿತು ಬಿಜೆಪಿಯವರಿಗೆ ಟೀಕಿಸಲು ನೈತಿಕ ಹಕ್ಕಿಲ್ಲ. ಬಿಜೆಪಿಯಲ್ಲಿಯೂ ಸಚಿವರ ಮಕ್ಕಳಿಗೆ ಟಿಕೆಟ್ ನೀಡಿದ ಉದಾಹರಣೆಗಳು ಸಾಕಷ್ಟಿವೆ. ಈ ವ್ಯವಸ್ಥೆ ಎಲ್ಲ ಪಕ್ಷಗಳಲ್ಲಿಯೂ ಇದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಇಲ್ಲ. ಈಗಾಗಲೇ ಮಳೆಯೂ ಪ್ರಾರಂಭವಾಗಿದ್ದು, ಅಲ್ಲಲ್ಲಿ ಎರಡು ಗಂಟೆಗಳ ಕಾಲ ಹೆಚ್ಚು ಮಳೆಯಾಗಿದೆ. ಇನ್ನು ಸಮರ್ಪಕ ಕುಡಿಯುವ ನೀರು ಪೂರೈಕೆಗಾಗಿ ಪ್ರತಿ ಗ್ರಾಮ ಪಂಚಾಯತ್ ಗೆ ಹೊಸ ಟ್ಯಾಂಕರ್ ಖರೀದಿಸಲು ಸೂಚಿಸಿದ್ದೇವೆ. ಕೆಲವು ಗ್ರಾಪಂಗಳಲ್ಲಿ ಹೊಸ ಟ್ಯಾಂಕರ್ ಕೂಡ ಖರೀದಿಸಿದ್ದಾರೆ. ಇನ್ನುಳಿದವರು ಬಾಡಿಗೆ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ನೀರಿನ ಸಮಸ್ಯೆ ಇದ್ದಲ್ಲಿ ತಹಶೀಲ್ದಾರ್ ಗಮನಕ್ಕೆ ತಂದರೆ ನೀರಿನ ಸಮಸ್ಯೆ ಪರಿಹರಿಸುತ್ತಾರೆಂದು ಹೇಳಿದರು.
ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಸಂಬಂಧ ಈಗಾಗಲೇ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಮಹಾರಾಷ್ಟ್ರ ದಿಂದ ನೀರು ಬಿಡತ್ತಾರೆ ಎನ್ನುವ ವಿಶ್ವಾಸವಿದೆ. ಹಿಡಕಲ್ ಡ್ಯಾಮ್ ನಿಂದ ಕೃಷ್ಣಾ ನದಿಗೆ ಈಗಾಗಲೇ ಒಂದು ಟಿಎಂಸಿ ನೀರು ಬಿಟ್ಟಿದ್ದೇವೆ. ಇನ್ನೊಂದು ಟಿಎಂಸಿ ನೀರು ಸದ್ಯದಲ್ಲೇ ಬಿಡುಗಡೆಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಬೆಳಗಾವಿಯಲ್ಲಿ ಚರಂಡಿ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಚರಂಡಿ ನೀರಿನ ಸಮಸ್ಯೆ ಬಗ್ಗೆ ಮಹಾನಗರ ಪಾಲಿಕೆಯವರು ಪರಿಹರಿಸುತ್ತಾರೆ. ನೀತಿ ಸಂಹಿತೆ ಮುಗಿದ ಬಳಿಕ ಬಳ್ಳಾರಿ ನಾಲಾ ಹೂಳೆತ್ತುವ ಬಗ್ಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ನನಗಿರುವ ಮಾಹಿತಿ ಪ್ರಕಾರ ಲೋಕಸಭೆ ಚುನಾವಣಾ ಫಲಿತಾಂಶ ನಂತರ ಸಚಿವ ಸಂಪುಟ ವಿಸ್ತರಣೆ ಆಗಲ್ಲ. ಈ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ನೇಹಾ, ಅಂಜಲಿ ಕೊಲೆ ಕೇಸ್ ನಂತಹ ಪ್ರಕರಣಗಳು ಎಲ್ಲಾ ಸರ್ಕಾರದಲ್ಲಿಯೂ ಈ ರೀತಿಯ ಘಟನೆಗಳು ಸಂಭವಿಸಿವೆ. ಇಂತಹ ಘಟನೆಗಳ ಮೇಲೆ ಪೊಲೀಸ್ ಇಲಾಖೆ ಹೆಚ್ಚಿನ ನೀಗಾ ವಹಿಸಬೇಕೆಂದರು.
ಇನ್ನು ಲೋಕೋಪಯೋಗಿ ಇಲಾಖೆಯಿಂದ ಜಿಲ್ಲೆಯಲ್ಲಿ 100 ನೂತನ ಶಾಲೆಗಳನ್ನು ನಿರ್ಮಿಸಲಾಗುತ್ತಿದ್ದು, ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ ತಲಾ 5 ಶಾಲೆಗಳನ್ನು ನಿರ್ಮಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಆಸೀಪ್ (ರಾಜು) ಸೇಠ್, ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ದಯಾನಂದ ಪಾಟೀಲ್, ಸುನೀಲ್ ಹಣಮನ್ನವರ್, ರಾಜಾ ಸಲೀಂ ಸೇರಿದಂತೆ ಹಲವು ಮುಖಂಡರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ