ಯುವಕನ ಕೊಲೆ ಪ್ರಕರಣ ಭೇದಿಸಿದ ಬೆಳಗಾವಿ ಪೊಲೀಸರು
ಮಾಳಮಾರುತಿ ಪೊಲೀಸರಿಂದ ಕಲ್ಲಿನಿಂದ ಕೊಲೆ ಮಾಡಿದ ಇಬ್ಬರು ಆರೋಪಿಗಳ ಬಂಧನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 2 ದಿನಗಳ ಹಿಂದೆ ಬೆಳಗಾವಿಯಲ್ಲಿ ಯುವಕನೋರ್ವನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ದಿನಾಂಕ:30.08.2023 ರಂದು ರಾತ್ರಿ ಮಾಳಮಾರುತಿ ಪೊಲೀಸ್ ಠಾಣೆಯ ವ್ಯಾಪ್ತಿಯ ಶಿವಬಸವ ನಗರದಲ್ಲಿ ನಾಗರಾಜ ಈರಪ್ಪ ಗಾಡಿವಡ್ಡರ ಎಂಬ ಯುವಕನನ್ನು ಬೈಕ್ ನಲ್ಲಿ ಬಂದ ಮೂವರು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದರು. ಸಿಸಿಟಿವಿ ಕ್ಯಾಮರಾದಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿತ್ತು.
ಈ ಪ್ರಕರಣವು ಒಂದು ಸೂಕ್ಷ್ಮ ಪ್ರಕರಣವಾಗಿದ್ದರಿಂದ ಪ್ರಕರಣವನ್ನು ಭೇಧಿಸಲು ಶೇಖರ, ಹೆಚ್.ಟಿ, ಐ.ಪಿ.ಎಸ್. ಉಪ ಪೊಲೀಸ್ ಆಯುಕ್ತರು, (ಕಾ&ಸು) ಬೆಳಗಾವಿ ನಗರ ಅವರ ಮಾರ್ಗದರ್ಶನದಲ್ಲಿ ಎನ್.ವಿ. ಭರಮನಿ, ಎಸಿಪಿ ಮಾರ್ಕೆಟ್ ಉಪ ವಿಭಾಗ ಮತ್ತು ಜೆ.ಎಂ. ಕಾಲಿಮಿರ್ಚಿ, ಪಿ.ಐ. ಮಾಳಮಾರುತಿ ಪೊಲೀಸ್ ಠಾಣೆ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಸಂಶಯಾಸ್ಪದ ಆರೋಪಿತರ ಬಗ್ಗೆ ಮಹತ್ತರ ಸುಳಿವನ್ನು ಪಡೆದು, ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರದ ಎಲ್.ಸಿ.ಬಿ. ಪೊಲೀಸರ ಸಹಕಾರದೊಂದಿಗೆ ದಿನಾಂಕ:01.09.2023 ರಂದು ಇಬ್ಬರು ಆರೋಪಿಗಳಾದ 1) ಪ್ರಥಮೇಶ ಧರ್ಮೇಂದ್ರ ಕಸಬೇಕರ (ವಯಸ್ಸು:20 ವರ್ಷ ಸಾ:ರಾಜಾರಾಮಪುರಿ ಬಾಯಚಾಪ ಚಾಳ ಗಲ್ಲಿ ಕೊಲ್ಲಾಪುರ) ಹಾಗೂ 2) ಆಕಾಶ ಕಾಡಪ್ಪಾ ಪವಾರ (ವಯಸ್ಸು: 21 ವರ್ಷ ಸಾ:ರಾಜಾರಾಮ ಚೌಕ ಎ-ವಾರ್ಡ ಕೊಲ್ಲಾಪೂರ) ಇವರನ್ನು ಕೊಲ್ಲಾಪುರದಲ್ಲಿ ವಶಕ್ಕೆ ಪಡೆದು ವಿಚಾರಿಸಲಾಗಿ ಕೃತ್ಯ ಎಸಗಿದ ಬಗ್ಗೆ ಒಪ್ಪಿಕೊಂಡಿದ್ದಾರೆ.
ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆ ಕುರಿತು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ತನಿಖೆ ಕೈಗೊಳ್ಳಲಾಗುವುದು. ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿಯನ್ನು ಬಂಧಿಸುವ ಪ್ರಕ್ರಿಯೆಯು ಜಾರಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೂಕ್ಷ್ಮ ಪ್ರಕರಣವನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳಾದ ಮಾರ್ಕೆಟ್ ಉಪ ವಿಭಾಗದ ಎಸಿಪಿ ನಾರಾಯಣ ಭರಮನಿ, ಪೊಲೀಸ್ ಇನ್ಸ್ಪೆಕ್ಟರ್ ಕಾಲಿಮಿರ್ಚಿ, ಪಿಎಸ್‌ಐಗಳಾದ ಹೊನ್ನಪ್ಪ ತಳವಾರ, ಶ್ರೀಶೈಲ ಹಾಗೂ ಸಿಬ್ಬಂದಿಗಳಾದ ಕುಂಡೆದ, ಚಿನ್ನಪ್ಪಗೋಳ, ಬಸ್ತವಾಡ, ಗೌರಾಣಿ, ಹೊಸಮನಿ ಮತ್ತು ಮುಜಾವರ ರವರ ಕಾರ್ಯಕ್ಷಮತೆಯನ್ನು ಮೆಚ್ಚಿ ಬಹುಮಾನ ಘೋಷಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ