ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಉಪಚುನಾವಣೆಗೆ ಬೆಳಗಾವಿ ಲೋಕಸಭಾ ಕ್ಷೇತ್ರ ಸಜ್ಜಾಗಿದೆ. ಇಂತಹ ಸಂದೇಶ ರಾಜ್ಯ ಚುನಾವಣೆ ಆಯೋಗದಿಂದ ಕೇಂದ್ರ ಚುನಾವಣೆ ಆಯೋಗಕ್ಕೆ ರವಾನೆಯಾಗಿದ್ದು, ಸೋಮವಾರ ಇಲ್ಲವೇ ಮಂಗಳವಾರ ಚುನಾವಣೆಯ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.
ಪ್ರಗತಿವಾಹಿನಿಗೆ ಉನ್ನತ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಸೋಮವಾರ ಇಲ್ಲವೇ ಮಂಗಳ ಚುನಾವಣೆ ದಿನಾಂಕ ಘೋಷಣೆಗೆ ಚುನಾವಣೆ ಆಯೋಗ ತಯಾರಿ ನಡೆಸಿದೆ.
ಸೆಪ್ಟಂಬರ್ 23ರಂದು ಕ್ಷೇತ್ರದ ಸಂಸದರಾಗಿದ್ದ ಸುರೇಶ ಅಂಗಡಿ ನಿಧನರಾಗಿದ್ದರು. ಅಲ್ಲಿಂದ 6 ತಿಂಗಳೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಿ, ಹೊಸ ಸಂಸದರ ಆಯ್ಕೆ ನಡೆಯಬೇಕು. (ತೀರಾ ಅನಿವಾರ್ಯ ಸಂದರ್ಭದಲ್ಲಿ ಈ ಅವಧಿಯನ್ನು ವಿಸ್ತರಿಸಿಕೊಳ್ಳುವ ಅಧಿಕಾರವನ್ನು ಚುನಾವಣೆ ಆಯೋಗ ಹೊಂದಿದೆ.)
ಮಾರ್ಚ್ 23ರೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಬೇಕು, ಅಂದರೆ 36ದಿನ ಮಾತ್ರ ಇದೆ. ಈ ಅವಧಿಯಲ್ಲಿ ಅಧಿಸೂಚನೆ ಹೊರಡಿಸಿ, ನಾಮಪತ್ರ ಸಲ್ಲಿಕೆ, ಪರಿಶೀಲನೆ, ಹಿಂಪಡೆಯುವಿಕೆ ಎಲ್ಲ ಪ್ರಕ್ರಿಯೆ ನಡೆದು, ಮತದಾನ ಮತ್ತು ಮತ ಎಣಿಕೆಯಾಗಬೇಕು.
ಸಾಮಾನ್ಯವಾಗಿ ಜನರಲ್ ಇಲೆಕ್ಷನ್ ನಲ್ಲಿ ಈ ಪ್ರಕ್ರಿಯೆಗೆ 40 -45 ದಿನ ಇಡಲಾಗುತ್ತದೆ. ಆದರೆ ಇದು ಉಪಚುನಾವಣೆಯಾಗಿದ್ದರಿಂದ ಈ ಅವಧಿಯನ್ನು ಕೇವಲ 30 -35 ದಿನಕ್ಕೆ ಇಳಿಸಬಹುದು.
ರಾಜಕೀಯ ಪಕ್ಷಗಳು ಚುನಾವಣೆಗೆ ಕಳೆದ 3 ತಿಂಗಳಿನಿಂದಲೇ ತಯಾರಿ ನಡೆಸಿವೆ. ಅಭ್ಯರ್ಥಿ ಹುಡುಕಾಟ ನಡೆಸಿ, ಬಹುತೇಕ ಅಂತಿಮಗೊಳಿಸಿಟ್ಟುಕೊಂಡಿವೆ. ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿಗಳ ಘೋಷಣೆಯೂ ಆಗಬಹುದು.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಫೈಟ್ ಕಾಂಗ್ರೆಸ್ -ಬಿಜೆಪಿ ಮಧ್ಯೆ. ಜೆಡಿಎಸ್ ಸ್ಪರ್ಧಿಸುವುದಿಲ್ಲ ಎಂದಿದೆ. ಇತರ ಸಣ್ಣ ಪುಟ್ಟ ಪಕ್ಷಗಳು ಸ್ಪರ್ಧಿಸುವ ಬಗ್ಗೆ ಈವರೆಗೂ ಸುದ್ದಿ ಬಂದಿಲ್ಲ. ಸ್ವತಂತ್ರ ಅಭ್ಯರ್ಥಿಗಳು ಕೂಡ ಘೋಷಿಸಿಕೊಂಡಿಲ್ಲ. ಚುನಾವಣೆ ದಿನಾಂಕ ಘೋಷಣೆಯಾದ ನಂತರ ಈ ಎಲ್ಲ ಘೋಷಣೆಯಾಗಬಹುದು.
ಒಟ್ಟಾರೆ ಬೆಳಗಾವಿ ಕ್ಷೇತ್ರ ಉಪಚುನಾವಣೆಗೆ ರೆಡಿಯಾಗಿದೆ. ಕೇವಲ 30 -35 ದಿನದಲ್ಲಿ ಹೊಸ ಸಂಸದರೂ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧರಾಗಲಿದ್ದಾರೆ.
ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ