Kannada NewsKarnataka News

ಬೆಳಗಾವಿ ಗ್ರಾಮೀಣ ಪ್ರತ್ಯೇಕ ತಾಲೂಕು; ಮನೆ ಬಾಗಿಲಿಗೆ ಸರಕಾರ ಸೇವೆ – ಲಕ್ಷ್ಮೀ ಹೆಬ್ಬಾಳಕರ್ ಭರವಸೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರವನ್ನು ಪ್ರತ್ಯೇಕ ತಾಲೂಕಾಗಿ ಘೋಷಣೆ ಮಾಡುವ ಮೂಲಕ ಕ್ಷೇತ್ರದ ಜನರಿಗೆ ಮನೆ ಬಾಗಿಲಲ್ಲೇ ಎಲ್ಲ ರೀತಿಯ ಸರಕಾರಿ ಸೇವೆ ದೊರಕುವಂತೆ ಮಾಡಲಾಗುವುದು ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಳಗಾವಿ ತಾಲೂಕು ಬಹಳ ದೊಡ್ಡದಿದೆ. ತಾಲೂಕಿನ ಸರಕಾರಿ ಕಚೇರಿಗಳ ಮೇಲೆ ಒತ್ತಡ ಬಹಳವಿದೆ. ಹಾಗಾಗಿ ಗ್ರಾಮೀಣ ತಾಲೂಕು ರಚನೆಯಾಗವುದು ಅಗತ್ಯವಿದೆ. ಈ ಬಾರಿ ಆಯ್ಕೆಯಾದ ನಂತರ ಮೊದಲ ಆದ್ಯತೆಯಾಗಿ ಗ್ರಾಮೀಣ ತಾಲೂಕು ರಚನೆಗೆ ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.

ಕಳೆದ ಬಾರಿಯೇ ಈ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಿದ್ದೆ. ಆದರೆ ವಿರೋಧ ಪಕ್ಷದ ಶಾಸಕಿಯಾಗಿದ್ದರಿಂದ ಸಾಧ್ಯವಾಗಿರಲಿಲ್ಲ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದ್ದು, ಪ್ರತ್ಯೇಕ ತಾಲೂಕು ರಚನೆ ನನ್ನ ಮೊದಲ ಆದ್ಯತೆಯಾಗಲಿದೆ. ಖಂಡಿತ ಇದು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದ ಜನರು ಎಲ್ಲ ಸರಕಾರಿ ಕೆಲಸಗಳಿಗೆ ಬೆಳಗಾವಿ ನಗರಕ್ಕೆ ಹೋಗಬೇಕಿದೆ. ಅಲ್ಲಿಯ ಕಚೇರಿಗಳಲ್ಲಿ ಕೆಲಸದ ಒತ್ತಡದಿಂದಾಗಿ ಸುಲಭವಾಗಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ಅವರ ಸಮಯ, ಶ್ರಮ, ಹಣ ವ್ಯಯವಾಗುತ್ತಿದೆ. ಹಾಗಾಗಿ ನಮ್ಮ ಕಚೇರಿ ಮೂಲಕ ಈಗಾಗಲೆ ಜನರಿಗೆ ಈ ಕುರಿತು ಸಹಾಯ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತ್ಯೇಕ ತಾಲೂಕಾದರೆ ತಹಸಿಲ್ದಾರ ಕಚೇರಿ ಸೇರಿದಂತೆ ಎಲ್ಲ ಕಚೇರಿಗಳೂ ಕ್ಷೇತ್ರಕ್ಕೆ ಬರಲಿವೆ. ಆಗ ಕೆಲಸದ ಒತ್ತಡ ಕಡಿಮೆಯಾಗುವುದರಿಂದ ಕೆಲಸ ಮಾಡಿಸಿಕೊಳ್ಳುವುದು ಸುಲಭವಾಗುತ್ತದೆ. ಅಲ್ಲದೆ ಜನರಿಗೆ ಅಗತ್ಯ ಸಹಾಯ ಮಾಡಲೆಂದೇ ನಮ್ಮ ಕಚೇರಿಯಲ್ಲೂ ಪೂರ್ಣಾವಧಿ ಸಹಾಯ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

ಗ್ರಾಮದಲ್ಲೇ ಸರಕಾರಿ ಸೇವೆ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಕನಿಷ್ಟ 6 ತಿಂಗಳಿಗೊಮ್ಮೆ ಎಲ್ಲ ಇಲಾಖೆಗಳ ತಾಲೂಕುಮಟ್ಟದ ಅಧಿಕಾರಿಗಳನ್ನು ಕರೆಸಿ ಅಹವಾಲು ಆಲಿಕೆ ಸಭೆಗಳನ್ನು ಆಯೋಜಿಸಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ. ತನ್ಮೂಲಕ ಮನೆ ಬಾಗಿಲಲ್ಲೇ ಸರಕಾರ ಸೇವೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಪ್ರಾಯೋಗಿಕವಾಗಿ ಇಂತಹ ಸಭೆಗಳನ್ನು ಆಯೋಜಿಸಲಾಗಿತ್ತು. ಅದು ಅತ್ಯಂತ ಯಶಸ್ವಿಯೂ ಆಗಿತ್ತು. ವಿವಿಧ ಮಾಸಾಶನ, ಪಡಿತರ ಕಾರ್ಡ್, ಬೇರೆ ಬೇರೆ ರೀತಿಯ ಸರಕಾರಿ ಕೆಲಸಗಳನ್ನು ಜನರು ಮನೆ ಬಾಗಿಲಲ್ಲೇ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ವಿಸ್ತರಿಸಿ, ಪೂರ್ಣ ಪ್ರಮಾಣದಲ್ಲಿ ಸರಕಾರಿ ಸೇವೆ ಒದಗಿಸುವ ಮೂಲಕ ಗ್ರಾಮೀಣ ಜನರು ಸರಕಾರಿ ಕೆಲಸಗಳಿಗಾಗಿ ಕಚೇರಿಗಳಿಗೆ ಸುತ್ತುವುದನ್ನು ತಪ್ಪಿಸಲಾಗುವುದು ಎಂದು ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.

https://pragati.taskdun.com/breaking-news-lakshmi-hebbalkar-has-released-a-list-of-many-projects-for-the-field/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button