https://youtu.be/-74tcCYzWEc
ಎಂ.ಕೆ.ಹೆಗಡೆ, ಬೆಳಗಾವಿ –ಕೆಲವೇ ತಿಂಗಳ ಹಿಂದೆ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಬೆಳಗಾವಿ ರಾಜಕಾರಣ ಉಪಚುನಾವಣೆ ಬಳಿಕ ಮತ್ತೊಮ್ಮೆ ಶಾಕ್ ನೀಡುವ ಲಕ್ಷಣ ಕಾಣಿಸಿದೆ.
ಉಪಚುನಾವಣೆ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಜಿಲ್ಲೆಯ ಪ್ರವಾಸದಲ್ಲಿರುವ ಸಂದರ್ಭದಲ್ಲೇ ಎರಡು ಮಹತ್ವದ ಬೆಳವಣಿಗೆಗಳು ನಡೆದಿದ್ದು, ಚುನಾವಣೆ ಬಳಿಕ ಏನಾಗಬಹುದು ಎನ್ನುವುದನ್ನು ಊಹಿಸಲು ಅಸಾಧ್ಯವಾದದ್ದೇನಲ್ಲ.
ಶನಿವಾರ ಯಡಿಯೂರಪ್ಪ ಬೆಳಗಾವಿಗೆ ಕಾಲಿಡುತ್ತಿರುವ ಸಂದರ್ಭದಲ್ಲೇ ಇತ್ತ ಗೋಕಾಕಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಸಮ್ಮಿಶ್ರ ಸರಕಾರ ಉರುಳಿಸಿದ ರಮೇಶ ಜಾರಕಿಹೊಳಿ ಮತ್ತೊಂದು ಬಾಂಬ್
ಕಾಂಗ್ರೆಸ್ ನ ಇನ್ನೂ 35 ಶಾಸಕರು ತಮ್ಮ ಸಂಪರ್ಕದಲ್ಲಿರುವುದಾಗಿ ಹೇಳಿರುವ ಅವರು, ಕಾಂಗ್ರೆಸ್ ಮನೆಯನ್ನು ಖಾಲಿ ಮಾಡಿಸುತ್ತೇನೆ ಎಂದು ಗುಡುಗಿದ್ದಾರೆ. ಕರ್ನಾಟಕದಲ್ಲಿ ಸಧ್ಯ ನಡೆದಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ರಮೇಶ್ ಮಾತು ತೀರಾ ಅಪ್ರಾಯೋಗಿಕ ಎನಿಸದು.
ಕಾಂಗ್ರೆಸ್ ಮತ್ತು ಜೆಡಿಎಸ್ ನ ಇನ್ನೂ ಅನೇಕ ಶಾಸಕರು ಅಡ್ಡ ಗೋಡೆಯ ಮೇಲಿನ ದೀಪದಂತೆ ಅಲ್ಲಿರಲಾರೆ, ಇಲ್ಲಿ ಬರಲಾರೆ ಎನ್ನುವ ಸ್ಥಿತಿಯಲ್ಲಿರುವುದು ಗುಟ್ಟೇನಲ್ಲ. ಉಪಚುನಾವಣೆ ಬಳಿಕ ಇದು ಸ್ಪಷ್ಟರೂಪ ಪಡೆಯುವ ಸಾಧ್ಯತೆ ಇದೆ. ಬಿಜೆಪಿ ನೀಡುವ ಆಫರ್ ಮೇಲೆ ಇದೆಲ್ಲ ಅವಲಂಬಿಸಿದೆ.
ಸಿಎಂ ಭೇಟಿಯಾದ ಪ್ರಕಾಶ ಹುಕ್ಕೇರಿ
ಚಿಕ್ಕೋಡಿ ಲೋಕಸಭೆಯ ಮಾಜಿ ಸಂಸದ, ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಭಾನುವಾರ ಬೆಳಗ್ಗೆ ಬೆಳಗಾವಿಯಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ. ಯಡಿಯೂರಪ್ಪ ಉಳಿದುಕೊಂಡಿದ್ದ ಯುಕೆ 27 ಹೊಟೆಲ್ ನಲ್ಲಿ ಭೇಟಿಯಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ.
ಪ್ರತಿ ಭಾನುವಾರ ತಿಂಡಿ ತಿನ್ನಲು ಇದೇ ಹೊಟೆಲ್ ಗೆ ಬರುತ್ತೇನೆ ಎಂದು ಮೊದಲು ಹೇಳಿದ ಪ್ರಕಾಶ ಹುಕ್ಕೇರಿ, ನಂತರ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಸಂಬಂಧ ಯಡಿಯೂರಪ್ಪ ಭೇಟಿಯಾಗಲು ಬಂದಿದ್ದೇನೆ ಎಂದಿದ್ದಾರೆ.
ಹಾಗೆ ನೋಡಿದರೆ ಕಾಂಗ್ರೆಸ್ ಮೇಲೆ ಪ್ರಕಾಶ ಹುಕ್ಕೇರಿ ಮುನಿಸು ಈಗಿನದ್ದಲ್ಲ. ಈಗ ಕಾಗವಾಡ ಉಪಚುನಾವಣೆ ಟಿಕೆಟ್ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಒಂದಿಷ್ಟು ಆಕ್ರೋಶಗೊಂಡಿದ್ದಾರೆ. ಆದರೆ ಯಾವಾಗ ಕಾಂಗ್ರೆಸ್ ಅವರ ಮಂತ್ರಿ ಸ್ಥಾನ ಕಿತ್ತುಕೊಂಡು ಲೋಕಸಭೆ ಚುನಾವಣೆಗೆ ಕಣಕ್ಕಿಳಿಸಿತೋ ಆಗಲೇ ಅವರು ಮುನಿಸಿಕೊಂಡಿದ್ದರು.
ಮಗ ಗಣೇಶ ಹುಕ್ಕೇರಿಗೆ ಚಿಕ್ಕೋಡಿ ಕ್ಷೇತ್ರದಲ್ಲಿ ಶಾಸಕರಾಗಲು ಅವಕಾಶವಾಯಿತು ಎನ್ನುವ ಒಂದೇ ಕಾರಣಕ್ಕೆ ಸುಮ್ಮನಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಪ್ರಕಾಶ ಹುಕ್ಕೇರಿ ಕಾಗವಾಡ ಕ್ಷೇತ್ರದ ಟಿಕೆಟ್ ಕೇಳಿದ್ದರು. ಆಗ ಶ್ರೀಮಂತ ಪಾಟೀಲ್ ಗೆ ಕೊಟ್ಟು, ಚುನಾಣೆ ನಂತರ ಅವರನ್ನು ಕಳೆದುಕೊಂಡಿತು.
2019ರ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೇಳಿದರೂ ಕೊಡದೆ ಒತ್ತಾಯಪೂರ್ವಕವಾಗಿ ಚಿಕ್ಕೋಡಿಯಲ್ಲಿ ಪ್ರಕಾಶ ಹುಕ್ಕೇರಿಯನ್ನು ಕಣಕ್ಕಿಳಿಸಲಾಯಿತು. ಅಲ್ಲಿ ಅವರು ಸೋಲಬೇಕಾಯಿತು.
ಉತ್ತಮ ಕೆಲಸಗಾರರಾಗಿರುವ ಪ್ರಕಾಶ ಹುಕ್ಕೇರಿ ರಾಜಕೀಯ ಭವಿಷ್ಯವನ್ನು ಕಾಂಗ್ರೆಸ್ ಪಕ್ಷ ಬಲಿಕೊಡುತ್ತಿರುವ ಬಗ್ಗೆ ಪ್ರಕಾಶ ಹುಕ್ಕೇರಿಗಿಂತ ಮಗ, ಶಾಸಕ ಗಣೇಶ ಹುಕ್ಕೇರಿಗೆ ಬೇಸರವಿದೆ. ಹಾಗಾಗಿ ಒಂದು ಸಂದರ್ಭದಲ್ಲಿ ಅವರು ಬಿಜೆಪಿ ಸೇರಲಿದ್ದಾರೆ ಎನ್ನುವ ವದಂತಿಯೂ ಹಬ್ಬಿತ್ತು. ಇದು ಕೇವಲ ವದಂತಿಯಾಗಿರಲಿಲ್ಲ.
ಈ ಬಾರಿ ಕಾಗವಾಡ ಟಿಕೆಟ್ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿ ಪ್ರಕಾಶ ಹುಕ್ಕೇರಿ ಮತ್ತು ಗಣೇಶ ಹುಕ್ಕೇರಿ ಇದ್ದರು. ಆ ಕ್ಷೇತ್ರದಲ್ಲಿ ಸಾಕಷ್ಟು ಕೆಲಸವನ್ನೂ ಮಾಡಿದ್ದರು. ಆದರೆ ಬಿಜೆಪಿಯಿಂದ ಬಂದ ರಾಜು ಕಾಗೆಗೆ ಟಿಕೆಟ್ ನೀಡಲಾಯಿತು. ಅಂದಿನಿಂದ ಕ್ಷೇತ್ರದ ಪ್ರಚಾರದಿಂದ ಪ್ರಕಾಶ ಹುಕ್ಕೇರಿ ದೂರ ಉಳಿದಿದ್ದಾರೆ.
ಇಂದು ಯಡಿಯೂರಪ್ಪ ಅವರನ್ನು ಭೇಟಿಯಾಗಿರುವುದರ ಹಿಂದೆ ರಾಜಕೀಯ ಉದ್ದೇಶ ಇಲ್ಲಎೆಂದು ಹೇಳಲು ಸಾಧ್ಯವೇ ಇಲ್ಲ ಎಂದು ಮೂಲಗಳು ಪ್ರಗತಿವಾಹಿನಿಗೆ ತಿಳಿಸಿವೆ. ಇದು ಉಪಚುನಾವಣೆ ಬಳಿಕ ನಡೆಯಬಹುದಾದ ರಾಜಕೀಯ ಧೃವೀಕರಣಕ್ಕೆ ಪೀಠಿಕೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಉತ್ತಮ ಆಫರ್ ಸಿಕ್ಕಿದರೆ ಬೆಳಗಾವಿ ಜಿಲ್ಲೆಯ ಇನ್ನೂ ಕೆಲವು ಶಾಸಕರು ಬಿಜೆಪಿಯತ್ತ ವಾಲಿದರೂ ಆಶ್ಚರ್ಯವೇನಿಲ್ಲ.
ರಮೇಶ ಜಾರಕಿಹೊಳಿ ಹೇಳಿಕೆ ಸಮ್ಮಿಶ್ರ ಸರಕಾರ ಉರುಳಿಸಿದ ರಮೇಶ ಜಾರಕಿಹೊಳಿ ಮತ್ತೊಂದು ಬಾಂಬ್ ಇದಕ್ಕೆ ಇನ್ನಷ್ಟು ಇಂಬು ನೀಡುವಂತಿದೆ.
ಒಟ್ಟಾರೆ ಯಡಿಯೂರಪ್ಪ ಬೆಳಗಾವಿ ಪ್ರವಾಸ ಕಾಂಗ್ರೆಸ್ ಮನೆಯಲ್ಲಿ ನಡುಕ ಹುಟ್ಟಿಸಿದ್ದಂತೂ ಸುಳ್ಳಲ್ಲ. ಉಪಚುನಾವಣೆಗೂ ಮುನ್ನ ಯಡಿಯೂರಪ್ಪ ಬೆಳಗಾವಿಯಲ್ಲಿ ಇನ್ನೂ 2 ದಿನ ( ಯಡಿಯೂರಪ್ಪ ಟ್ರಂಪ್ ಕಾರ್ಡ್ ಆಗಲಿದ್ದಾರಾ ಅನರ್ಹರಿಗೆ? ) ವಾಸ್ತವ್ಯ ಮಾಡಲಿದ್ದಾರೆ. ಇದು ಇನ್ನಷ್ಟು ಬೆಳವಣಿಗೆಗೆ ನಾಂದಿ ಹಾಡಿದರೂ ಅಚ್ಛರಿ ಇಲ್ಲ (ಪ್ರಗತಿವಾಹಿನಿ).
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ)
ಬೆಳಗಾವಿ ಜಿಲ್ಲೆಯಿಂದ ಐವರು ಸಚಿವರು -ಯಡಿಯೂರಪ್ಪ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ