ಬೆಳಗಾವಿ, ಚಿಕ್ಕೋಡಿ, ಬೈಲಹೊಂಗಲ – 3 ಜಿಲ್ಲೆಗಳಾಗಿ ಬೆಳಗಾವಿ ವಿಭಜನೆ; ಸಚಿವ ಉಮೇಶ ಕತ್ತಿ ಪ್ರತಿಪಾದನೆ
ಮೊಟ್ಟ ಮೊದಲ ಬಾರಿಗೆ ಹೊಸ ಪ್ರಸ್ತಾವನೆ ಮುಂದಿಟ್ಟ ಸಚಿವ ಉಮೇಶ ಕತ್ತಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆ ವಿಭಜನೆ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಜೊತೆಗೆ ಸ್ವಲ್ಪಮಟ್ಟಿಗೆ ಸ್ಪಷ್ಟತೆಯೂ ಕಾಣುತ್ತಿದೆ.
ಬೆಳಗಾವಿಯಲ್ಲಿ 3 ವಿಭಾಗವಾಗಿ ವಿಂಗಡಿಸಬೇಕು. ಬೆಳಗಾವಿ, ಚಿಕ್ಕೋಡಿ ಮತ್ತು ಬೈಲಹೊಂಗಲ ಜಿಲ್ಲೆಗಳಾಗಬೇಕು. 3 ಉಪವಿಭಾಗಾಧಿಕಾರಿಗಳ ಕಚೇರಿಗಳು ಜಿಲ್ಲಾಧಿಕಾರಿಗಳ ಕಚೇರಿಗಳಾಗಬೇಕು ಎಂದು ಸಚಿವ ಉಮೇಶ ಕತ್ತಿ ಸ್ಪಷ್ಟವಾಗಿ ಹೇಳಿದ್ದಾರೆ.
ಇದರಿಂದಾಗಿ ಗೋಕಾಕ ಜಿಲ್ಲೆಯಾಗಬೇಕೆನ್ನುವ ಹೋರಾಟಕ್ಕೆ ತೀವ್ರ ಹಿನ್ನಡೆಯುಂಟಾಗಿದೆ. ಗೋಕಾಕ ಜಿಲ್ಲೆಯಾಗಬೇಕೆನ್ನುವ ಹೋರಾಟ ಅನೇಕ ಬಾರಿ ತೀವ್ರ ಕಾವು ಪಡೆದುಕೊಂಡಿತ್ತು. ಇದೀಗ ಉಮೇಶ ಕತ್ತಿ ಅವರ ಹೊಸ ಪ್ರಸ್ತಾವನೆ ಮಲಗಿದ್ದ ಗೋಕಾಕನ್ನು ಮತ್ತೆ ಎಬ್ಬಿಸುವುದರಲ್ಲಿ ಸಂದೇಹವಿಲ್ಲ.
ಉಮೇಶ ಕತ್ತಿ ಪ್ರಸ್ತಾವನೆಯಲ್ಲಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳನ್ನೂ ತಲಾ 6 ಕ್ಷೇತ್ರಗಳನ್ನಾಗಿ ವಿಂಗಡಿಸಿದ್ದಾರೆ. ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ಖಾನಾಪುರ ಮತ್ತು ಹುಕ್ಕರಿ ಬೆಳಗಾವಿ ಜಿಲ್ಲೆ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಗೋಕಾಕ, ಅರಬಾವಿ, ಕಿತ್ತೂರು ಬೈಲಹೊಂಗಲ ಜಿಲ್ಲೆ ಹಾಗೂ ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಕಾಗವಾಡ, ರಾಯಬಾಗ, ಕುಡಚಿ ಸೇರಿ ಚಿಕ್ಕಡಿ ಜಿಲ್ಲೆಯಾಗಬೇಕು ಎಂದು ಉಮೇಶ ಕತ್ತಿ ತಮ್ಮ ಪ್ರಸ್ತಾವನೆ ಮಂಡಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು. ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆ 3 ಭಾಗಗಳಾಗಿ ವಿಭಾಗವಾಗಬೇಕು ಎನ್ನುವ ಸ್ಪಷ್ಟ ಹೇಳಿಕೆಯನ್ನು ಅವರು ಮುಂದಿಟ್ಟಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕೂಡ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆ 3 ವಿಭಾಗಗಳಾಗಿ ವಿಂಗಡಣೆಯಾಗಬೇಕು ಎನ್ನುವ ಪ್ರಸ್ತಾಪವನ್ನು ಇಟ್ಟಿದ್ದಾರೆ. ಆದರೆ ಲಕ್ಷ್ಮಿ ಹೆಬ್ಬಾಳಕರ್ ಯಾವ್ಯಾವುದು ಜಿಲ್ಲಾ ಕೇಂದ್ರಗಳಾಗಬೇಕು ಎನ್ನುವುದನ್ನು ಹೇಳಿಲ್ಲ. ಬೆಳಗಾವಿ ತಾಲೂಕನ್ನು ವಿಭಜಿಸಿ ಗ್ರಾಮೀಣ ತಾಲೂಕನ್ನು ಮಾಡಬೇಕೆನ್ನುವ ಒತ್ತಾಯವನ್ನೂ ಲಕ್ಷ್ಮಿ ಹೆಬ್ಬಾಳಕರ್ ಮಾಡಿದ್ದಾರೆ.
ಈ ಬೆಳವಣಿಗೆಗಳಿಂದಾಗಿ ಕೆಲವು ತಿಂಗಳಿನಿಂದ ನನಗುದಿಗೆ ಬಿದ್ದಿದ್ದ ಜಿಲ್ಲಾ ವಿಭಜನೆ ಕೂಗು, ಹೋರಾಟ ಮತ್ತು ಕಾವು ಪಡೆಯುವ ಲಕ್ಷಣ ಕಾಣುತ್ತಿದೆ. ಉಮೇಶ ಕತ್ತಿಯವರ ಪ್ರಸ್ತಾವನೆಗೆ, ಗೋಕಾಕ ಹೊರತುಪಡಿಸಿ ಒಕ್ಕೊರಲ ಬೆಂಬಲವೂ ಸಿಗಬಹುದು.
ಮತ್ತೆ ಬೆಳಗಾವಿ ಜಿಲ್ಲೆ ವಿಭಜನೆ ಕೂಗು ; ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು?
ಅಭಿವೃದ್ಧಿ ಮತ್ತು ಆಡಳಿತ ದೃಷ್ಟಿಯಿಂದ ಬೆಳಗಾವಿ ಜಿಲ್ಲಾ ವಿಭಜನೆ ಅಗತ್ಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ