Kannada NewsKarnataka NewsLatest

ಮತ್ತೆ ಕುಸಿದ ಬೆಳಗಾವಿ ಸ್ಮಾರ್ಟ್ ಸಿಟಿ ಶ್ರೇಯಾಂಕ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬೆಳಗಾವಿ ಸ್ಮಾರ್ಟ್ ಸಿಟಿ ರ್ಯಾಂಕ್ ಮತ್ತೆ ಕುಸಿದಿದೆ. ಅಕ್ಟೋಬರ್ ಮಧ್ಯ ಭಾಗದಲ್ಲಿ 34ಕ್ಕೆ ಏರಿದ್ದ ರ್ಯಾಂಕ್ ಮತ್ತೆ 36ಕ್ಕೆ ಇಳಿದಿದೆ.

ದಾವಣಗೆರೆ 15 ರ್ಯಾಂಕ್ ನೊಂದಿಗೆ ಕರ್ನಾಟಕದಲ್ಲಿ ಮೊದಲ ಸ್ಥಾನದಲ್ಲಿದೆ. ತುಮಕೂರು (19), ಮಂಗಳೂರು (22) ನಂತರದ ಸ್ಥಾನದಲ್ಲಿವೆ. ಬೆಳಗಾವಿ ದಾವಣಗೆರೆ ಜೊತೆಗೇ ಮೊದಲ ಹಂತದಲ್ಲೇ ಆಯ್ಕೆಯಾಗಿದ್ದರೂ ಹೆಚ್ಚು ಕಡಿಮೆ ಕೊನೆಯ ಸ್ಥಾನಕ್ಕೆ ಕುಸಿದಿದೆ.

ಹುಬ್ಬಳ್ಳಿ-ಧಾರವಾಡ 30, ಶಿವಮೊಗ್ಗ 32ನೇ ಸ್ಥಾನದಲ್ಲಿವೆ. ಎಲ್ಲಕ್ಕಿಂತ ನಂತರದಲ್ಲಿ ಸೇರಿರುವ ಬೆಂಗಳೂರು 39ನೇ ಸ್ಥಾನದಲ್ಲಿದೆ.

ಹಣ ವೆಚ್ಚ ಮಾಡಿರುವ ಆಧಾರದ ಮೇಲೆ ಶ್ರಯಾಂಕ ನಿಗದಿಪಡಿಸಲಾಗುತ್ತದೆ. ಬೆಳಗಾವಿ ಸ್ಮಾರ್ಟ್ ಸಿಟಿಯಲ್ಲಿ ಈವರೆಗೆ 133.63 ಕೋಟಿ ರೂ. ವೆಚ್ಚ ಮಾಡಲಾಗಿದೆ. ದಾವಣಗೆರೆಯಲ್ಲಿ 220.49 ಕೋಟಿ ರೂ. ಖರ್ಚು ಮಾಡಲಾಗಿದೆ. 2ನೇ ಹಂತದಲ್ಲಿ ಸೇರ್ಪಡೆಯಾಗಿರುವ ಹುಬ್ಬಳ್ಳಿ -ಧಾರವಾಡ ಸ್ಮಾರ್ಟ್ ಸಿಟಿಯಲ್ಲಿ 153.91ಕೋಟಿ ರೂ. ಖರ್ಚು ಮಾಡಲಾಗಿದೆ.

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಎಬಿಡಿ ಏರಿಯಾ ನಿಗದಿ ಗೊಂದಲ, ಹಲವು ಬಾರಿ ವ್ಯವಸ್ಥಾಪಕ ನಿರ್ದೇಶಕರ ಬದಲಾವಣೆ, ಕೇಂದ್ರ ಸರಕಾರಕ್ಕೆ ಕ್ರೆಡಿಟ್ ಹೋಗಬಾರದೆಂದು ರಾಜ್ಯ ಸರಕಾರದ ನಿರಾಸಕ್ತಿ, ಪ್ರೊಜೆಕ್ಟ್ ಮ್ಯಾನೇಜ್ ಮೆಂಟ್ ಕನ್ಸಲ್ಟನ್ಸಿ ಗೊಂದಲ ಇವೆಲ್ಲ ಹಿಂದೆ ಬೀಳಲು ಕಾರಣವಾಗಿದೆ.

ಇದೀಗ ಮತ್ತೆ ಪೂರ್ಣಾವಧಿ ಎಂಡಿಯಾಗಿ ಶಶಿಧರ ಕುರೇರ ನೇಮಕವಾಗಿದ್ದು,  ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ಉತ್ತರ ಶಾಸಕ ಅನಿಲ ಬೆನಕೆ ಹಾಗೂ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮೂವರೂ ಇದೀಗ ಹೆಚ್ಚಿನ ಆಸಕ್ತಿ ತೆಗೆದುಕೊಂಡಿದ್ದಾರೆ.

ಜೊತೆಗೆ ಕೇಂದ್ರ ಸಚಿವ ಸುರೇಶ ಅಂಗಡಿ ಕೂಡ ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿದ್ದಾರೆ. ಹಾಗಾಗಿ ಇನ್ನು ಮುಂದಾದರೂ ಸ್ಮಾರ್ಟ್ ಸಿಟಿ ಯೋಜನೆ ನಿಜ ಅರ್ಥದಲ್ಲಿ ಸ್ಮಾರ್ಟ್ ಆಗಲಿ ಎನ್ನುವುದೇ ಜನರ ಆಶಯವಾಗಿದೆ.

ಕರ್ನಾಟಕಕ್ಕೆ 5ನೇ ಶ್ರೇಯಾಂಕ

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕರ್ನಾಟಕದ ರಾಷ್ಟ್ರದಲ್ಲಿ 5ನೇ ಸ್ಥಾನದಲ್ಲಿದೆ. ಮಧ್ಯ 6ನೇ ಸ್ಥಾನಕ್ಕೆ ಕುಸಿದಿದ್ದ ಕರ್ನಾಟಕ ಮತ್ತೆ 5ನೇ ಸ್ಥಾನಕ್ಕೇರಿದೆ. ಜಾರ್ಖಂಡ್, ಗುಜರಾತ್, ಆಂದ್ರಪ್ರದೇಶ ಹಾಗೂ ಮಧ್ಯಪ್ರದೇಶ ಮೊದಲ 4 ಸ್ಥಾನಗಳಲ್ಲಿವೆ. ರಾಜಸ್ಥಾನ, ಉತ್ತರಾಖಂಡ ಮತ್ತು ತಮಿಳುನಾಡು ಕರ್ನಾಟಕದ ನಂತರದ ಸ್ಥಾನದಲ್ಲಿವೆ.

ಆರಂಭದಿಂದಲೂ ಮಾಡಿದ ಹಲವು ತಪ್ಪುಗಳಿಂದಾಗಿ ಸ್ಮಾರ್ಟ್ ಸಿಟಿ ಯೋಜನೆ ಹಿಂದೆ ಬಿದ್ದಿದೆ. ಆದರೆ ಈಗ ಎಲ್ಲವನ್ನೂ ಸರಿದಾರಿಗೆ ತರಲಾಗುತ್ತಿದೆ. ಇನ್ನು 3 ತಿಂಗಳಲ್ಲಿ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯ ಚಿತ್ರಣವನ್ನೇ ಬದಲಾಯಿಸುತ್ತೇವೆ.

-ಅಭಯ ಪಾಟೀಲ,

ಬೆಳಗಾವಿ ದಕ್ಷಿಣ ಶಾಸಕ

 

ಸ್ಮಾರ್ಟ್ ಸಿಟಿಗೆ ಸಂಬಂಧಿಸಿದ ಸುದ್ದಿಗಳು –

ಸ್ಮಾರ್ಟ್ ಸಿಟಿ ಎಂಡಿಯಾಗಿ ಕುರೇರ್ ಅಧಿಕಾರ ಸ್ವೀಕಾರ

ಸ್ಮಾರ್ಟ್ ಸಿಟಿ ರಸ್ತೆಯಲ್ಲಿ 7 ಕಡೆ ಬಿರುಕು: ಡಾಂಬರ್ ಹೊಯ್ದು ಮುಚ್ಚಲು ಯತ್ನ -Pragativahini Exclusive 

4 ವರ್ಷ, 4 ಎಂಡಿ, 4 ಕೋಟಿ!

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button