Belagavi NewsBelgaum NewsKannada NewsKarnataka NewsLatest

*ಬಾಣಂತಿ, ಶಿಶುವಿನ ಸಾವು ಬಿಜೆಪಿ ಅವಧಿಯಲ್ಲೇ ಅತ್ಯಧಿಕ!*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಾಣಂತಿಯರ ಮತ್ತು ನವಜಾತ ಶಿಶುವಿನ ಸಾವಿನ ಪ್ರಮಾಣ ಕುರಿತಂತೆ ಕಳೆದ ಒಂದು ವಾರದಿಂದ ಹೆಚ್ಚು ಸುದ್ದಿಯಾಗುತ್ತಿದೆ.

ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ, ಕಾಂಗ್ರೆಸ್ ಸರಕಾರದ ವಿರುದ್ಧ ಮನಬಂದಂತೆ ವಾಗ್ದಾಳಿ ನಡೆಸಿದ್ದರು.

“ಬೆಳಗಾವಿಯಲ್ಲಿಯೂ ಬಾಣಂತಿಯರು, ಶಿಶುಗಳ ಸಾವು ಸಂಭವಿಸಿದೆ. ಇದರಲ್ಲಿ ರಾಜ್ಯ ಸರ್ಕಾರದ ಬೇಜವಾಬ್ದಾರಿ ಮೇಲ್ನೋಟಕ್ಕೆ ಕಾಣುತ್ತಿದೆ. ಈ ಬಗ್ಗೆ ಸತ್ಯಾಂಶ ತಿಳಿದುಕೊಳ್ಳಬೇಕು ಎಂದು ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಇಂದು ಬಡವರಿಗೆ ಅನ್ಯಾಯವಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವ ಬಾಣಂತಿಯರಿಗೆ ತೊಂದರೆಯಾಗುತ್ತಿದೆ. ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸದನದಲ್ಲಿಯೂ ಪ್ರಸ್ತಾಪಿಸುತ್ತೇವೆ” ಎಂದು ಹೇಳಿದ್ದರು.

“ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಹಾಗೂ ಮಕ್ಕಳು ಸಾಯುತ್ತಿರುವಾಗ ಕಾಂಗ್ರೆಸ್‌ 20 ಕೋಟಿ ರೂ. ಖರ್ಚು ಮಾಡಿ ಸಮಾವೇಶ ಮಾಡಿದೆ. ಮಕ್ಕಳನ್ನು ಉಳಿಸದೆ ನೂರು ಸಮಾವೇಶ ಮಾಡಿದರೂ ಸರ್ಕಾರಕ್ಕೆ ಜನರ ಶಾಪ ತಟ್ಟದೆ ಇರುವುದಿಲ್ಲ. ಇದನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡದೆ ಬಿಡುವುದಿಲ್ಲ” ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ಹೊರಹಾಕಿದ್ದರು.

ಮಾಜಿ ಮುಖ್ಯಮಂತ್ರಿ, ಪ್ರಸ್ತುತ ಕೇಂದ್ರ ಸಚಿವ, ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಕೂಡ ಈ ವಿಷಯದಲ್ಲಿ ಸರಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು. ಆಸ್ಪತ್ರೆಗೆ ಹೋದ ಗೃಹಲಕ್ಷ್ಮೀಯರ ಜೀವಕ್ಕೆ ಗ್ಯಾರಂಟಿಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ವಾಸ್ತವಾಂಶವೇ ಬೇರೆ !

ಆದರೆ, ಬೆಳಗಾವಿ ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಾಣಂತಿ ಮತ್ತು ಶಿಸುವಿನ ಸಾವಿನ ಸಂಖ್ಯೆ ಕಳೆದ 3 ವರ್ಷಗಳನ್ನು ಗಮನಿಸಿದಾಗ 2022ರಲ್ಲೇ ಅತ್ಯಧಿಕ ಎನ್ನುವುದು ಬೆಳಕಿಗೆ ಬಂದಿದೆ.

2022ರಲ್ಲಿ ಬಿಮ್ಸ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 6,878 ಹೆರಿಗೆಗಳಾಗಿದ್ದು, ಬಿಮ್ಸ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ 12ರಂತೆ ಒಟ್ಟೂ 24 ಬಾಣಂತಿಯರು ಸಾವಿಗೀಡಾಗಿದ್ದಾರೆ.

2023ರಲ್ಲಿ 7,951 ಹೆರಿಗೆಯಾಗಿದ್ದು, ಬಿಮ್ಸ್ ನಲ್ಲಿ 7 ಹಾಗೂ ಪಿಎಚ್ ಸಿ ಗಳಲ್ಲಿ 6 ಸೇರಿದಂತೆ ಒಟ್ಟೂ 13 ಮಹಿಳೆಯರು ಸಾವಿಗೀಡಾಗಿದ್ದಾರೆ.

2024ರಲ್ಲಿ 6,961 ಹೆರಿಗೆಗಳಗಾದ್ದು, ಬಿಮ್ಸ್ ನಲ್ಲಿ 6 ಹಾಗೂ ಪಿಎಚ್ಸಿ ಗಳಲ್ಲಿ 2 ಸೇರಿ ಒಟ್ಟೂ 8 ಬಾಣಂತಿಯರು ಸಾವಿಗೀಡಾಗಿದ್ದಾರೆ.

ಅಂದರೆ, ಕಳೆದ 2 ವರ್ಷಗಳ ಒಟ್ಟೂ ಸಂಖ್ಯೆಗಿಂತ 2022ರಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಸಾವಿಗೀಡಾದ ಬಾಣಂತಿಯರ ಸಂಖ್ಯೆ ಹೆಚ್ಚಾಗಿದೆ.

ಶಿಶುಗಳ ಸಾವಿನ ಸಂಖ್ಯೆ

ಶಿಶುಗಳ ಸಾವಿನ ಸಂಖ್ಯೆ ಕೂಡ ಕಳೆದ 7 ವರ್ಷಗಳಲ್ಲೇ ಬಿಜೆಪಿ ಸರಕಾರದ ಅವಧಿಯ, 2022ರಲ್ಲಿ ಅತ್ಯಧಿಕವಾಗಿದೆ. 2022ರಲ್ಲಿ ಶೇ.16.27ರಷ್ಟು ಶಿಶುವಿನ ಮರಣ ಪ್ರಮಾಣ ದಾಖಲಾಗಿದೆ. ಅಂದರೆ 2022ರಲ್ಲಿ 384 ಶಿಶುಗಳು ಮರಣಪಟ್ಟಿವೆ.

2023ರಲ್ಲಿ ಒಟ್ಟೂ 159 ಶಿಶುಗಳು ಸಾವಿಗೀಡಾಗಿದ್ದು, ಮರಣ ಪ್ರಮನಾಣ ಶೇ. 5.10 ದಾಖಲಾಗಿದೆ. ಇದು ಕಳೆದ 7 ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ. 2024ರಲ್ಲಿ 188 ಶಿಶುಗಳು ಸಾವಿಗೀಡಾಗಿದ್ದು ಶೇಕಡಾವಾರು 7.79 ಆಗಿದೆ. ಇದು ಕಳೆದ 7 ವರ್ಷಗಳಲ್ಲಿ ಎರಡನೇ ಕನಿಷ್ಟ ಪ್ರಮಾಣವಾಗಿದೆ.

ವಾಸ್ತವಿಕ ಮಾಹಿತಿ ಪಡೆಯದೆ ಪ್ರಸ್ತುತ ಕಾಂಗ್ರೆಸ್ ಸರಕಾರದ ವಿರುದ್ದ ಆರೋಪಗಳನ್ನು ಮಾಡಲು ಹೋಗಿ ಬಿಜೆಪಿ ಈಗ ಮುಖಭಂಗಕ್ಕೀಡಾಗಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲಾ ಆಸ್ಪತ್ರೆಗಳಲ್ಲಿ ಬಾಣಂತಿ ಹಾಗೂ ಶಿಶುವಿನ ಸಾವಿನ ಪ್ರಕರಣವನ್ನು ಎತ್ತುವ ಮೂಲಕ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ಮುಂದಾಗಿದೆ. ಆದರೆ ವಾಸ್ತವಾಂಶಗಳು ಬಿಜೆಪಿಗೆ ಪ್ರತಿಕೂಲವಾಗಿರುವುದು ಈಗ ಬಯಲಾಗಿದೆ.

ಬಿಜೆಪಿ ಹಗ್ಗ ಕೊಟ್ಟು ತನ್ನ ಕೈಯನ್ನು ತಾನೇ ಕಟ್ಟಿಸಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪದೆ ಪದೆ ಹೇಳುತ್ತಿರುವುದು ಈಗ ಬೆಳಗಾವಿಯ ಬಾಣಂತಿ ಮತ್ತು ಶಿಶುವಿನ ಸಾವಿನ ವಿಷಯದಲ್ಲೂ ನಿಜವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button