ಬೆಳಗಾವಿ: ಜಿಪಂ 91, ತಾಪಂ 299 ಕ್ಷೇತ್ರಗಳ ನಿಗದಿಗೆ ನಿರ್ಣಯ- ಆಕ್ಷೇಪಣೆ ಸಲ್ಲಿಕೆಗೆ ಅವಕಾಶ (ಇಲ್ಲಿದೆ ಸಮಗ್ರ ವಿವರ)
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಪ್ರಕಟಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲೆಯ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳ ಸದಸ್ಯರ ಕ್ಷೇತ್ರಗಳ ಸಂಖ್ಯೆಯನ್ನು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ನಿಗದಿಪಡಿಸಲು ನಿರ್ಣಯಿಸಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ(ಮೇ 12) ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2011 ರ ಜನಗಣತಿಯಂತೆ ಆಯಾ ತಾಲ್ಲೂಕುಗಳ ಗ್ರಾಮೀಣ ಜನಸಂಖ್ಯೆಯನ್ನು ಆಧರಿಸಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ ಸದಸ್ಯರ ಕ್ಷೇತ್ರಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿರುತ್ತದೆ.
ಜಿಲ್ಲಾ ಪಂಚಾಯತ್ 91 ಕ್ಷೇತ್ರಗಳ ನಿಗದಿ:
ಈ ಪ್ರಕಾರ ಆಯೋಗವು ಪ್ರತಿ 40 ಸಾವಿರ ಜನಸಂಖ್ಯೆಗೆ ಹಾಗೂ ಅದರ ಭಾಗಕ್ಕೆ ಒಬ್ಬರು ಸದಸ್ಯರಂತೆ ಬೆಳಗಾವಿ ಜಿಲ್ಲೆಯ 15 ತಾಲ್ಲೂಕುಗಳಲ್ಲಿ ಒಟ್ಟಾರೆ 91 ಕ್ಷೇತ್ರಗಳನ್ನು ನಿಗದಿಪಡಿಸಲು ನಿರ್ಣಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ತಾಲ್ಲೂಕು ಪಂಚಾಯತ 299 ಕ್ಷೇತ್ರಗಳು:
ನೂತನ ತಾಲ್ಲೂಕು ಯರಗಟ್ಟಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಒಟ್ಟು 15 ತಾಲ್ಲೂಕುಗಳಲ್ಲಿ ಒಟ್ಟಾರೆ 299 ಕ್ಷೇತ್ರಗಳನ್ನು ನಿಗದಿಪಡಿಸಲು ಆಯೋಗವು ನಿರ್ಣಯಿಸಿರುತ್ತದೆ.
ತಾಪಂ ಕ್ಷೇತ್ರ ನಿಗದಿಗೆ ಮಾನದಂಡ:
1. ಐವತ್ತು ಸಾವಿರ ಜನಸಂಖ್ಯೆ ಮೀರಿದ ಆದರೆ ಒಂದು ಲಕ್ಷ ಮೀರಿರದ ಗ್ರಾಮೀಣ ಜನಸಂಖ್ಯೆಯನ್ನು ಹೊಂದಿರುವ ತಾಲ್ಲೂಕುಗಳಲ್ಲಿ ಕನಿಷ್ಠ 9 ಕ್ಷೇತ್ರಗಳು
2. ಒಂದು ಲಕ್ಷ ಮೀರಿದ ಆದರೆ ಎರಡು ಲಕ್ಷ ಗ್ರಾಮೀಣ ಜನಸಂಖ್ಯೆ ಮೀರಿರದ ತಾಲ್ಲೂಕುಗಳಲ್ಲಿ ಪ್ರತಿ 10 ಸಾವಿರಕ್ಕೆ ಒಬ್ಬ ಚುನಾಯಿತ ಸದಸ್ಯ ಇರತಕ್ಕದ್ದು ಹಾಗೂ ಅಲ್ಲಿ ಕನಿಷ್ಠ 11 ಚುನಾಯಿತ ಸದಸ್ಯರಿರತಕ್ಕದ್ದು.
3. ಯಾವುದೇ ತಾಲ್ಲೂ ಪಂಚಾಯಿತಿಯ ಎರಡು ಲಕ್ಷದಿಂದ 2.28 ಲಕ್ಷದೊಳಗಿನ ಜನಸಂಖ್ಯೆಗೆ ಕನಿಷ್ಠ 20 ಸದಸ್ಯರನ್ನು ನಿಗದಿಪಡಿಸಲು ಆಯೋಗವು ನಿರ್ಣಯಿಸಿದೆ.
4. ಎರಡು ಲಕ್ಷ ಮೀರಿದ ಗ್ರಾಮೀಣ ಜನಸಂಖ್ಯೆಯನ್ನು ಹೊಂದಿರುವ ತಾಲ್ಲೂಕುಗಳಲ್ಲಿ ಪ್ರತಿ 12 ಸಾವಿರಕ್ಕೆ ಕಡಿಮೆಯಲ್ಲದ ಜನಸಂಖ್ಯೆಗೆ ಒಬ್ಬ ಚುನಾಯಿತ ಸದಸ್ಯ ಇರತಕ್ಕದ್ದು.
ಹೀಗೆ ತಾಲ್ಲೂಕುವಾರು ಗ್ರಾಮೀಣ ಜನಸಂಖ್ಯೆಯನ್ನು ಆಧರಿಸಿ ಜಿಲ್ಲೆಯ 15 ತಾಲ್ಲೂಕುಗಳಲ್ಲಿ ಒಟ್ಟಾರೆ 91 ಜಿಲ್ಲಾ ಪಂಚಾಯತ ಕ್ಷೇತ್ರಗಳು ಮತ್ತು 299 ತಾಲ್ಲೂಕು ಪಂಚಾಯತ ಕ್ಷೇತ್ರಗಳನ್ನು ಈ ಕೆಳಕಂಡಂತೆ ನಿಗದಿಪಡಿಸಲು ನಿರ್ಣಯಿಸಲಾಗಿರುತ್ತದೆ.
ತಾಲ್ಲೂಕುವಾರು ಜಿಪಂ-ತಾಪಂ ಕ್ಷೇತ್ರಗಳ ವಿವರ:
ಕಾಗವಾಡ( ಜಿಪಂ-3, ತಾಪಂ-9)
ಕಿತ್ತೂರು (ಜಿಪಂ-3 ತಾಪಂ-9)
ಮೂಡಲಗಿ( ಜಿಪಂ-4, ತಾಪಂ-14)
ನಿಪ್ಪಾಣಿ( ಜಿಪಂ-5, ತಾಪಂ-20)
ಬೈಲಹೊಂಗಲ( ಜಿಪಂ-6, ತಾಪಂ-20)
ರಾಮದುರ್ಗ( ಜಿಪಂ-6, ತಾಪಂ-20)
ಖಾನಾಪುರ( ಜಿಪಂ-6, ತಾಪಂ-20)
ಗೋಕಾಕ( ಜಿಪಂ-7, ತಾಪಂ-21)
ಚಿಕ್ಕೋಡಿ( ಜಿಪಂ-7, ತಾಪಂ-22)
ರಾಯಬಾಗ( ಜಿಪಂ-7, ತಾಪಂ-23)
ಸವದತ್ತಿ( ಜಿಪಂ-6, ತಾಪಂ-20)
ಅಥಣಿ( ಜಿಪಂ-9, ತಾಪಂ-28)
ಹುಕ್ಕೇರಿ( ಜಿಪಂ-9, ತಾಪಂ-29)
ಬೆಳಗಾವಿ( ಜಿಪಂ-11, ತಾಪಂ-35)
ಯರಗಟ್ಟಿ( ಜಿಪಂ-2, ತಾಪಂ-9)
ಈ ಕುರಿತು ವಿವರವಾದ ಮಾಹಿತಿಯನ್ನು ಪರಿಶೀಲಿಸಿ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಆಕ್ಷೇಪಣೆಗಳು ಇದ್ದಲ್ಲಿ ಏಳು ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಲಿಖಿತವಾಗಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ವಿಧಾನಪರಿಷತ್ ಚುನಾವಣೆ; ಮಾದರಿ ನೀತಿಸಂಹಿತೆ ಜಾರಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ