
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ರಾಜಕಾರಣಿಗಳನ್ನು ಬೆಂಬಿಡದೇ ಕಾಡುತ್ತಿದೆ. ಇದೀಗ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಈ ಬಗ್ಗೆ ಸ್ವತ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ನನಗೂ ಕೊರೊನಾ ಪಾಸಿಟಿವ್ ಬಂದಿದೆ ಎಂದಿದ್ದಾರೆ. ನಮ್ಮ ಮನೆಯಲ್ಲಿ ಕಾರ್ಯನಿರ್ವಹಿಸುವ ಕೆಲಸದ ಹುಡುಗನಿಗೆ ನಿನ್ನೆ ಕೋವಿಡ್-19 ಪರೀಕ್ಷೆಯಲ್ಲಿ ಸೊಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ನಾನು ಸಹ ಪರೀಕ್ಷೆಗೆ ಒಳಪಟ್ಟಿದ್ದು ನನಗೂ ಸಹ ಸೊಂಕು ದೃಢಪಟ್ಟಿದೆ. ಯಾವುದೇ ರೀತಿಯ ರೋಗ ಲಕ್ಷಣಗಳು ಇಲ್ಲ ಹಾಗೂ ನಾನು ಆರೋಗ್ಯವಾಗಿದ್ದು, ಮನೆಯಲ್ಲಿಯೇ ಪ್ರತ್ಯೇಕವಾಗಿರುತ್ತೇನೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ನನ್ನ ನೇರ ಸಂಪರ್ಕಕ್ಕೆ ಬಂದಿರುವವರು ಕೂಡಲೇ ಪರೀಕ್ಷೆಗೆ ಒಳಪಡುವಂತೆ ಹಾಗೂ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೋರುತ್ತೇನೆ ಎಂದಿದ್ದಾರೆ.




