Belagavi NewsBelgaum NewsKannada NewsKarnataka NewsNationalPolitics

*ಬೆಮೂಲ್‌ಗೆ 13.26 ಕೋಟಿ ರೂ.ಲಾಭ: ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ತಮ್ಮ ಒಂದು ವರ್ಷದ ಅಧಿಕಾರವಧಿಯಲ್ಲಿ ₹ 13.20 ಕೋಟಿ ಲಾಭಗಳಿಸುವ ಮೂಲಕ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ ಎಂದು ಬೆಮುಲ್‌ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಒಕ್ಕೂಟವು ₹ 68 ಲಕ್ಷ ಲಾಭ ಹೊಂದಿತ್ತು. ಆದರೆ, ಈ ಬಾರಿ ₹ 13.20 ಕೋಟಿ ಲಾಭಗಳಿಸಿದೆ. ಇದಕ್ಕೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿರುವುದು, ವಾರ್ಷಿಕ ಸಾಮಾನ್ಯ ಸಭೆಗೆ ಶೂನ್ಯ ನಿಧಿ ಬಳಕೆ ಮಾಡಿರುವುದು, ಆಡಳಿತ ಮಂಡಳಿ ಸದಸ್ಯರು ಟಿಎ, ಡಿಎ ಪಡೆಯದಿರುವುದು ಸೇರಿದಂತೆ ಮತ್ತಿತರ ಸುಧಾರಣಾ ಕ್ರಮಗಳು ಕಾರಣವಾಗಿವೆ ಎಂದರು.

ಒಟ್ಟು ₹ 399.50 ಕೋಟಿ ವಹಿವಾಟು ಆಗಿದೆ. ಕಳೆದ ಸಾಲಿನಲ್ಲಿ ₹ 320.83 ಕೋಟಿ ವಹಿವಾಟು ಆಗಿತ್ತು. ಈ ಮೂಲಕ ಶೇ. 24 ರಷ್ಟು ಹೆಚ್ಚುವರಿ ಪ್ರಗತಿ ಸಾಧಿಸಲಾಗಿದೆ. ಒಕ್ಕೂಟದ ಇತಿಹಾಸದಲ್ಲೇ ಅತೀ ಹೆಚ್ಚಿನ ವಹಿವಾಟು ಹೊಂದಿ ದಾಖಲೆ ನಿರ್ಮಿಸಿದೆ . ಅಂದಾಜು ₹ 13.26 ಕೋಟಿ ಲಾಭಾಂಶ ಆಗಿದೆ. ಈ ಮೊತ್ತವನ್ನು ಹಾಲು ಉತ್ಪಾದಕರು, ಸಂಘಗಳು, ಗುತ್ತಿಗೆ ಕಾರ್ಮಿಕರು, ಭದ್ರತಾ ರಕ್ಷಕರ ಶ್ರೇಯೋಭಿವೃದ್ಧಿಗಾಗಿ ಹಂಚಿಕೆ ಮಾಡಲಾಗುವುದು ಎಂದರು.

ವಾರ್ಷಿಕ ಸಾಮಾನ್ಯಸಭೆಗೆ ₹ 40 ಲಕ್ಷ ವೆಚ್ಚ ಮಾಡಲಾಗುತ್ತಿತ್ತು. ಆಡಳಿತ ಮಂಡಳಿ ಸದಸ್ಯರು ಪಡೆಯದ ಟಿಎ, ಡಿಎ ₹ 10 ಲಕ್ಷ ಹಣವನ್ನು ರೈತರ ಕಲ್ಯಾಣ ನಿಧಿಗೆ ಪಾವತಿಸಲಾಗಿದೆ ಎಂದರು.

Home add -Advt

ಒಕ್ಕೂಟವು ಜಿಲ್ಲೆಯಲ್ಲಿ ಒಟ್ಟು 1002 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಿದೆ. ಈ ಪೈಕಿ 610 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯಾಚರಣೆಯಲ್ಲಿವೆ. ಈ ಪೈಕಿ 160 ಮಹಿಳಾ ಸಂಘಗಳಿವೆ. ಈವರೆಗೆ ಒಟ್ಟು ₹ 622.10 ಲಕ್ಷ ಷೇರು ಬಂಡವಾಳ ಸಂಗ್ರಹಿಸಲಾಗಿದೆ. ಬೆಳಗಾವಿಯಲ್ಲಿ 1.50 ಲಕ್ಷ ಲೀಟರ್‌ ಸಾಮರ್ಥ್ಯದ ಮುಖ್ಯ ಡೇರಿ, ರಾಮದುರ್ಗ ಮತ್ತು ಅಥಣಿಯಲ್ಲಿ ತಲಾ 30 ಸಾವಿರ ಲೀಟರ್‌ ಸಾಮರ್ಥ್ಯದ ಶೀತಲ ಕೇಂದ್ರಗಳಿವೆ. ರಾಯಬಾಗದಲ್ಲಿ 60 ಸಾವಿರ ಲೀಟರ್‌ ಸಾಮರ್ಥ್ಯದ ಸಂಸ್ಕರಣ ಘಟಕವನ್ನು ಹೊಂದಿದೆ. ಕೇಂದ್ರ ಸರ್ಕಾರದ ಶುದ್ಧ ಹಾಲು ಉತ್ಪಾದನೆ ಮತ್ತು ವಿಶೇಷ ಪ್ಯಾಕೇಜ್‌ ಯೋಜನೆಗಳಡಿ ಒಟ್ಟು 39 ಬಿಎಂಸಿ ಘಟಕಗಳನ್ನು ಸ್ಥಾಪಿಸಿದೆ. ಪ್ಲೆಕ್ಸಿ ಪ್ಯಾಕ್‌ ಘಟಕವು ನಿತ್ಯ 80 ಸಾವಿರ ಲೀಟರ್‌ನಷ್ಟು ಹಾಲು ಪ್ಯಾಕಿಂಗ್‌ ಸಮರ್ಥವನ್ನು ಹೊಂದಿದೆ ಎಂದರು.

 2024-25ನೇ ಸಾಲಿನಲ್ಲಿ 43 ಸಂಖ್ಯೆ ನೂತನ ಸಂಘಗಳನ್ನು ಸ್ಥಾಪಿಸಿದೆ. ಜಿಲ್ಲೆಯಲ್ಲಿ 610 ಸಂಘಗಳಿವೆ. ನಿತ್ಯ ಸರಾಸರಿ 2.10 ಲಕ್ಷ ಕೆ.ಜಿ. ಹಾಲು ಶೇಖರಿಸಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 22 ರಷ್ಟು ಪ್ರಗತಿ ಹೊಂದಲಾಗಿದೆ. ಅಲ್ಲದೇ, ಒಟ್ಟು 12797 ರಾಸುಗಳಿಗೆ ಒಕ್ಕೂಟದಿಂದ ಶೇ. 75 ರಷ್ಟು ರಿಯಾಯಿತಿ ದರದಲ್ಲಿ ವಿಮಾ ಸೌಲಭ್ಯ ಒದಗಿಸಲಾಗಿದೆ. ವಿಮೆಗೆ ಒಳಪಟ್ಟು ಮರಣ ಹೊಂದಿದ 245 ರಾಸುಗಳ ಫಲಾನುಭವಿಗಳಿಗೆ ₹ 1.22 ಕೋಟಿ ವಿಮಾ ಪರಿಹಾರ ನೀಡಲಾಗಿದೆ. 134138 ರಾಸುಗಳಿಗೆ ಕೃತಕ ಗರ್ಭಧಾರಣೆ ಸೇವೆ ಒದಗಿಸಲಾಗಿದೆ ಎಂದರು.

ಪ್ಲೇಕ್ಸಿ ಘಟಕದಿಂದ 80 ಲಕ್ಷ ಲೀಟರ್‌ ಹಾಲನ್ನು ಸ್ಥಳೀಯ ಮತ್ತು ಆಂದ್ರಪ್ರದೇಶ ರಾಜ್ಯಕ್ಕೆ ಮಾರಾಟ ಮಾಡಲಾಗಿದೆ.ಕಳೆದ ಸಾಲಿನ ಮಾರಾಟಕ್ಕೆ ಹೋಲಿಸಿದರೆ ಶೇ. 196 ರಷ್ಟು ಹೆಚ್ಚುವರಿ ಪ್ರಗತಿ ಸಾಧಿಸಲಾಗಿದೆ. 380516 ಲೀಟರ್ ತುಪ್ಪ ಮಾರಾಟ ಮಾಡಲಾಗಿದೆ. 4112820 ಲೀಟರ್‌ ಮೊಸರನ್ನು ಮಾರಾಟ ಮಾಡಲಾಗಿದೆ. 173746 ಕೆ.ಜಿ. ಪನೀರ್‌ ಮಾರಾಟ ಮಾಡಲಾಗಿದೆ. 74245 ಕೆ.ಜಿ. ಕುಂದಾ ಮಾರಾಟ ಮಾಡಲಾಗಿದೆ. 

ಹೊಸದಾಗಿ 10 ಕೆಜಿ ಬಕೇಟ್‌ ಮೊಸರು ಮಾರಾಟ ಪ್ರಾರಂಭಿಸಲಾಗಿದೆ. ಬೆಳಗಾವಿ ಜಿಲ್ಲೆ ಮತ್ತು ಗೋವಾ ರಾಜ್ಯದ ಮಾರುಕಟ್ಟೆಗೆ ನಿತ್ಯ 50 ರಿಂದ 100 ಬಕೇಟ್‌ ಮೊಸರು ಪ್ಯಾಕಿಂಗ್‌ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದರು.

ಒಕ್ಕೂಟವು ಮುಂಬೈ ಮಾರುಕಟ್ಟೆಗೆ ಎಮ್ಮೆ ಹಾಲವನ್ನು ಬಿಡುಗಡೆ ಮಾಡಿದ್ದು, ನಿತ್ಯ 5 ಸಾವಿರ ಲೀಟರ್‌ ಹಾಲು ಮಾರಾಟ ಮಾಡಲಾಗುತ್ತಿದೆ. ಕಳೆದ ಫೆಬ್ರುವರಿ ತಿಂಗಳಲ್ಲಿ  130 ಎಂಎಲ್‌ ಪ್ಯಾಕ್‌ನ 2.50 ಲಕ್ಷ ಮಜ್ಜಿಗೆ ಪ್ಯಾಕೇಟ್‌ಗಳನ್ನು ಸವದತ್ತಿ ಶ್ರೀ ಯಲ್ಲಮ್ಮ ದೇವಸ್ಥಾನಕ್ಕೆ ಪೂರೈಸಲಾಗಿದೆ. ಖರ್ಚು ವೆಚ್ಚಗಳಲ್ಲಿ  ವಾರ್ಷಿಕ ₹ 2.52 ಕೋಟಿ ಉಳಿತಾಯ ಮಾಡಲಾಗಿದೆ ಎಂದರು.

ಸಂಕೇಶ್ವರ ಬಳಿಯ ರಾಷ್ಟ್ರೀಯ ಹೆದ್ದಾರಿ 4ರ ಬಳಿ ಮೆಗಾ ಡೇರಿ ಸ್ಥಾಪಿಸಲು ಜಾಗೆಯನ್ನು ಗುರುತಿಸಲಾಗಿದ್ದು, ₹ 350 ಕೋಟಿ ವೆಚ್ಚದಲ್ಲಿ ನೂತನ ತಂತ್ರಜ್ಞಾನವುಳ್ಳ ಹೈಟೆಕ್‌ ಮೆಗಾಡೇರಿಯನ್ನು ನಿರ್ಮಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಬೆಮುಲ್‌ ನಿರ್ದೇಶಕರಾದ ಬಾಬು ಬಸವಂತಪ್ಪ ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಪಾಟೀಲ, ಬಸವರಾಜ ಪರಗಣ್ಣವರ, ಬಾಬುರಾವ್‌ ವಾಘಮೊಡೆ, ವಿರುಪಾಕ್ಷಿ ಈಟಿ,ರಾಯಪ್ಪ ಡೂಗ,ಪ್ರಕಾಶ ಅಂಬೋಜ, ಮಹಾದೇವಬಿಳಿಕುರಿ, ಸಂಜಯ ಶಿಂತ್ರೆ, ರಮೇಶ ಅಣ್ಣಿಗೇರಿ, ಶಂಕರ ಇಟ್ನಾಳ, ಖಾನಪ್ಪಗೋಳ, ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಕಾಂತ ವಿ.ಎನ್‌. ಉಪಸ್ಥಿತರಿದ್ದರು.

Related Articles

Back to top button