ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ರೈಲ್ವೇ ನಿಲ್ದಾಣದ ಎದುರಿಗೆ ಇರುವ ಹಳೆಯ ಬಸ್ ನಿಲ್ದಾಣ ತೆರವುಗೊಳಿಸಿ ನೂತನ ಬಸ್ ನಿಲ್ದಾಣ ನಿರ್ಮಿಸುವ ಕಾಮಗಾರಿಗೆ ಶಾಸಕ ಅನಿಲ ಬೆನಕೆ ಚಾಲನೆ ನೀಡಿದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 1.89 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕ ಅನಿಲ ಬೆನಕೆ, ಬೆಳಗಾವಿಯ ದಂಡು ಮಂಡಳಿಯ ವ್ಯಾಪ್ತಿಯ ರೈಲ್ವೆ ನಿಲ್ದಾಣದ ಎದುರಿಗೆ ಇರುವ ಬಸ್ ನಿಲ್ದಾಣ ತುಂಬಾ ಹಳೆಯದಾಗಿತ್ತು, ಹೀಗಾಗಿ ಅದನ್ನು ತೆರವುಗೊಳಿಸಿ ಸ್ಮಾರ್ಟ್ ಸಿಟಿ ಅನುದಾನದಡಿ ನೂತನ ಬಸ್ ನಿಲ್ದಾಣ ನಿರ್ನಿಸಲಾಗುತ್ತಿದೆ ಎಂದರು.
ಈಗಾಗಲೇ ಬೆಳಗಾವಿಯ ನೂತನ ಕೇಂದ್ರ ಬಸ್ ನಿಲ್ದಾಣ ಕಾಮಗಾರಿಯು ಚಾಲ್ತಿಯಲ್ಲಿದೆ. ಗ್ರಾಮೀಣ ಜನರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ರೈಲ್ವೆ ನಿಲ್ದಾಣದ ಎದುರಿಗೆ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ. ಗುತ್ತಿಗೆದಾರರು ಬಸ್ ನಿಲ್ದಾಣ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಅದೇ ರೀತಿ ಸಾರ್ವಜನಿಕರು ಗುತ್ತಿಗೆದಾರರಿಗೆ ಸಹಕರಿಸಿ ಒಳ್ಳೆಯ ರೀತಿಯಲ್ಲಿ ಬಸ್ ನಿಲ್ದಾಣ ನಿರ್ಮಿಸಿಕೊಳ್ಳುವಂತೆ ಮನವಿ ಮಾಡಿಕೊಂಡರು.
ನೂತನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೂಡುವ ಆಸನ, ಟಿಕೇಟ್ ಕೌಂಟರ್ ಸೇರಿದಂತೆ ಇನ್ನೂ ಹಲವು ರೀತಿಯ ಕಾಮಗಾರಿಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.
ನಂತರದಲ್ಲಿ ಮಾತನಾಡಿದ ದಂಡು ಮಂಡಳಿ ಸಿ.ಇ.ಓ. ಬರ್ಚೇಸ್ವಾ, ರೈಲ್ವೇ ನಿಲ್ದಾಣ ಎದುರಿಗೆ ನೂತನ ಬಸ್ ನಿಲ್ದಾಣ ಕಾಮಗಾರಿ ಪ್ರಾರಂಭವಾಗಿದ್ದು ಕಾಮಗಾರಿ ಪೂರ್ಣಗೊಂಡ ನಂತರದಲ್ಲಿ ಬಸ್ ನಿಲ್ದಾಣವನ್ನು ಸ್ಮಾರ್ಟ ಸಿಟಿ ಅಧಿಕಾರಿಗಳು ದಂಡು ಮಂಡಳಿಗೆ ಹಸ್ತಾಂತರಿಸಲಿದ್ದು, ಇದರ ನಿರ್ವಹಣೆ ನಾವು ಮಾಡುತ್ತೇವೆ ಎಂದು ತಿಳಿಸಿದರು.
ತದನಂತರದಲ್ಲಿ ದಂಡು ಮಂಡಳಿಯ ಸದಸ್ಯ ಸಾಜೀದ್ ಶೇಖ ಮಾತನಾಡಿ ಈ ಭಾಗದ ಜನತೆ ಹಲವಾರು ವರ್ಷಗಳಿಂದ ಹೊಸ ಬಸ್ ನಿಲ್ದಾಣ ನಿರ್ಮಾಣ ಮಾಡುವಂತೆ ಬೇಡಿಕೆ ಇಟ್ಟಿದ್ದೆವು, ಅದು ಈ ದಿನ ನನಸಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸ್ಮಾರ್ಟ ಸಿಟಿ ಅಧಿಕಾರಿಗಳು, ದಂಡು ಮಂಡಳಿ ಉಪಾಧ್ಯಕ್ಷ ನಿರಂಜನಾ ಅಷ್ಠೇಕರ, ಸದಸ್ಯರಾದ ಸಾಜೀದ ಶೇಖ, ವಿಕ್ರಮ ಪುರೋಹಿತ, ರಿಜ್ವಾನ ಬೇಪಾರಿ, ಅಲ್ಲಾವುದ್ದೀನ ಕಿಲ್ಲೇದಾರ, ಬಿ.ಜೆ.ಪಿ. ಬೆಳಗಾವಿ ಮಹಾನಗರದ ಅಧ್ಯಕ್ಷ ಶಶಿಕಂತ ಪಾಟೀಲ, ಬಿ.ಜೆ.ಪಿ. ಉತ್ತರ ಮಂಡಳ ಅಧ್ಯಕ್ಷ ಪಾಂಡುರಂಗ ಧಾಮಣೇಕರ, ಬಿ.ಜೆ.ಪಿ ಉತ್ತರ ಯುವ ಮೋರ್ಚಾ ಅಧ್ಯಕ್ಷ ಸದಾನಂದ ಗುಂಟೆಪ್ಪನ್ನವರ, ದಂಡು ಮಂಡಳಿಯ ಇಂಜಿನೀಯರ ಸತೀಶ, ಗುತ್ತಿಗೆದಾರ ಶ್ರೀಧರ ನಾಗೋಜಿಚೆ ಹಾಗೂ ರಾಜು ಖಟಾವಕರ ಮತ್ತು ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ