
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರು ಜನತೆಗೆ ಬೆಲೆ ಏರಿಕೆ ಬಿಸಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜನಸಾಮಾನ್ಯರು ಜೀವನ ನಡೆಸುವುದು ದುಸ್ಥರವಾಗುತ್ತಿದೆ. ಈನಡುವೆ ನಾಳೆಯಿಂದ ದುಬಾರಿ ದುನಿಯಾ ಆರಂಭವಾಗಲಿದೆ.
ಹಾಲು, ಮೊಸರು, ವಿದ್ಯುತ್ ಬಿಲ್ ಏರಿಕೆಯಿಂದ ತತ್ತರಿಸಿದ್ದ ಬೆಂಗಳೂರಿಗರಿಗೆ ನಾಳೆಯಿಂದ ಮತ್ತೊಂದು ಶಾಕ್ ಎದುರಾಗಲಿದೆ. ಕಸಕ್ಕೂ ತೆರಿಗೆ ಪಾವತಿ ಮಾಡಬೇಕು. ಏಪ್ರಿಲ್ 1ರಿಂದ ಬೆಂಗಳೂರಿನಲ್ಲಿ ಪ್ರತಿ ಮನೆ, ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಕಟ್ಟಡಗಳ ಬಳಿ ಕಸ ಸಂಗ್ರಹಕ್ಕೆ ತೆರಿಗೆ ವಸೂಲಿಗೆ ಬಿಬಿಎಂಪಿ ಮುಂದಾಗಿದೆ. ನಾಳೆ ಮಂಗಳವಾರದಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ.
ಈಗಾಗಲೇ ಕಸಕ್ಕೆ ತೆರಿಗೆ ವಿಧಿಸುವ ಕ್ರಮ ಬಿಬಿಎಂಪಿ ಬಜೆಟ್ ನಲ್ಲಿಯೂ ಘೋಷಣೆಯಾಗಿದೆ. ಈ ಮೂಲಕ 600 ಕೋಟಿ ರೂ ಆದಾಯ ಸಂಗ್ರಹಕ್ಕೆ ಪಾಲಿಕೆ ಮುಂದಾಗಿದೆ.
ಅಂಗಡಿ ಮುಂಗಟ್ಟುಗಳಲ್ಲಿ ಪ್ರತಿ ಕೆಜಿ ಕಸಕ್ಕೆ 12 ರೂ. ತೆರಿಗೆ ವಸೂಲಿಗೆ ಪಾಲಿಕೆ ನಿರ್ಧರಿಸಿದೆ. ಕಟ್ಟಡದ ವಿಸ್ತೀರ್ಣ ಆಧಾರದ ಮೇಲೆ ಕಸ ತೆರಿಗೆ ಶುಲ್ಕ ಹೆಚ್ಚಳವಾಗಲಿದೆ. ಇನ್ಮುಂದೆ ಆಸ್ತಿ ತೆರಿಗೆ ಜೊತೆಗೆ ಕಸ ತೆರಿಗೆಯೂ ಅನ್ವಯವಾಗಲಿದೆ.
600 ಚದರ ಅಡಿ ಕಟ್ಟಡಗಳಿಗೆ ತಿಂಗಳಿಗೆ 10 ರೂ. ತೆರಿಗೆ
600-1000 ಚದರ ಅಡಿ ಕಟ್ಟಡಗಳಿಗೆ ತಿಂಗಳಿಗೆ 50 ರೂ ತೆರಿಗೆ
1000-2000 ಚದರ ಅಡಿ ಕಟ್ಟಡಗಳಿಗೆ ತಿಂಗಳಿಗೆ 100 ರೂ ತೆರಿಗೆ
2000-3000 ಚದರ ಅಡಿ ಕಟ್ಟಡಗಳಿಗೆ 150 ರೂ
3000-4000 ಚದರ ಅಡಿ ಕಟ್ಟಡಗಳಿಗೆ 200 ರೂ
4000 ಚದರ ಅಡಿ ಮೇಲ್ಪಟ್ಟ ಕಟ್ಟಡಗಳಿಗೆ 400 ರೂ ತೆರಿಗೆ ವಿಧಿಸಲಾಗುತ್ತಿದೆ.
ಇನ್ನು ನಾಳೆಯಿಂದ ಕೆ ಎಂಎಫ್ ನಂದಿನಿ ಹಾಲಿನ ದರ ಹೆಚ್ಚಳವಾಗಲಿದ್ದು, ಲೀಟರ್ ಹಾಲಿನ ದರ 4 ರೂ ಏರಿಕೆಯಾಗಲಿದೆ. ಇದರೊಂದಿಗೆ ಹೋಟೆಲ್ ಗಳಲ್ಲಿ ಟೀ, ಕಾಫಿ ದರವೂ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ.