CrimeKannada NewsKarnataka NewsLatest

*ವೃದ್ಧಾಶ್ರಮದ ಹೆಸರಿನಲ್ಲಿ ಕಾರು ಮಾಲೀಕರಿಗೆ ವಂಚನೆ*: *ಆರೋಪಿ ಸುನಿಲ್ ನಾಯಕ್ ಬಂಧನ, 12 ಕಾರುಗಳು ವಶ*

ಪ್ರಗತಿವಾಹಿನಿ ಸುದ್ದಿ: ಕಾರು ಮಾಲೀಕರಿಗೆ ಬಾಡಿಗೆ ಹಣದ ಆಮಿಷವೊಡ್ಡಿ ವಂಚಿಸುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರಂಭದಲ್ಲಿ ಬಾಡಿಗೆ ನೀಡಿ ವಿಶ್ವಾಸ ಗಳಿಸುತ್ತಿದ್ದ ಆರೋಪಿ, ಬಳಿಕ ಕಾರುಗಳನ್ನೇ ಅಡಮಾನ ಇಟ್ಟು ಹಣ ಪಡೆಯುತ್ತಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಬರೋಬ್ಬರಿ 12 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ಪಡೆದು ವಾಪಸ್ ನೀಡದೆ ವಂಚಿಸುತ್ತಿದ್ದ ಆರೋಪದ ಮೇಲೆ ಸುನಿಲ್ ನಾಯಕ್ ಎಂಬಾತನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಜೆ.ಪಿ. ನಗರ 9ನೇ ಫೇಸ್ ನಿವಾಸಿಯಾಗಿರುವ ಈತ ಈ ಹಿಂದೆ ವೃದ್ಧಾಶ್ರಮ ನಡೆಸುತ್ತಿದ್ದ. ಜೊತೆಗೆ ಟ್ರಾವೆಲ್ಸ್ ಸಂಸ್ಥೆಯೊಂದರಲ್ಲೂ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಕಾರು ಮಾಲೀಕರನ್ನು ಸಂಪರ್ಕಿಸಿ, ತನ್ನ ವೃದ್ಧಾಶ್ರಮಕ್ಕೆ ಕಾರುಗಳು ಬೇಕೆಂದು ಹೇಳುತ್ತಿದ್ದ. ದಿನಕ್ಕೆ 1,000ರಿಂದ 2,000 ರೂಪಾಯಿ ಬಾಡಿಗೆ ನೀಡುವುದಾಗಿ ಭರವಸೆ ನೀಡುತ್ತಿದ್ದ. ಆರಂಭದಲ್ಲಿ ಕೆಲ ದಿನ ಬಾಡಿಗೆ ಹಣವನ್ನೂ ಪಾವತಿಸಿ ಮಾಲೀಕರ ವಿಶ್ವಾಸ ಗಳಿಸುತ್ತಿದ್ದ.

ನಂತರ ಕಾರುಗಳು ತನ್ನದೇ ಎಂದು ಹೇಳಿಕೊಂಡು, ತುರ್ತಾಗಿ ಹಣದ ಅಗತ್ಯವಿದೆ ಎಂಬ ನೆಪದಲ್ಲಿ ಅವುಗಳನ್ನು ಅಡಮಾನ ಇಟ್ಟು ಸಾಲ ಪಡೆಯುತ್ತಿದ್ದ. ಈ ಮೂಲಕ ಲಕ್ಷಾಂತರ ರೂಪಾಯಿ ಹಣ ಪಡೆದು, ಕಾರುಗಳನ್ನೂ ವಾಪಸ್ ನೀಡದೆ ಮಾಲೀಕರಿಗೆ ವಂಚಿಸುತ್ತಿದ್ದ ಎನ್ನಲಾಗಿದೆ.

ಈ ರೀತಿ ಸುಮಾರು 1.20 ಕೋಟಿ ರೂಪಾಯಿ ಮೌಲ್ಯದ ಕಾರುಗಳನ್ನು ವಂಚಿಸಿರುವ ಆರೋಪ ಸುನಿಲ್ ನಾಯಕ್ ಮೇಲಿದೆ. ಪ್ರಕರಣ ದಾಖಲಿಸಿಕೊಂಡ ಹುಳಿಮಾವು ಪೊಲೀಸರು ಆರೋಪಿಯನ್ನು ಬಂಧಿಸಿ, ಇನ್ನೋವಾ, ಎರ್ಟಿಗಾ, ಸಿಯಾಜ್, ಕ್ರೆಟಾ, ಎಕ್ಸ್‌ಯುವಿ ಹಾಗೂ ಬಲೆನೊ ಸೇರಿದಂತೆ ಒಟ್ಟು 12 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Related Articles

Back to top button