*ಆರೋಪಿಯನ್ನು ಬಂಧಿಸಲು ತೆರಳಿದ್ದ ಬೆಂಗಳೂರು ಪೊಲೀಸರು ರಾಜಸ್ಥಾನದಲ್ಲಿ ಲಾಕ್: ಏನಿದು ಘಟನೆ?*

ಪ್ರಗತಿವಾಹಿನಿ ಸುದ್ದಿ: ಆರೋಪಿಯನ್ನು ಬಂಧಿಸಲೆಂದು ರಾಜಸ್ಥಾನಕ್ಕೆ ಹೋಗಿದ್ದ ಬೆಂಗಳೂರು ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟು ಎಸಿಬಿಯಿಂದ ಬಂಧನಕ್ಕೊಳಗಾಗಿರುವ ಘಟನೆ ನಡೆದಿದೆ.
ವರದಕ್ಷಿಣೆ ಪ್ರಕರಣದಲ್ಲಿ ಆರೋಪಿ ಬಂಧನಕ್ಕೆ ತೆರಳಿದ್ದ ಬೆಂಗಳೂರಿನ ಹೆಚ್ಎಎಲ್ ಪೊಲೀಸರು ರಾಜಸ್ಥಾನದ ಜೈಪುರದಲ್ಲಿ ಟ್ರ್ಯಾಪ್ ಆಗಿದ್ದಾರೆ. ಪಿಎಸ್‌ಐ ಅನಿತಾ, ಹೆಡ್ ಕಾನ್ಸ್‌ಟೇಬಲ್ ಉಳುವಪ್ಪ, ಕಾನ್ಸ್ಟೇಬಲ್ ಯತೀಶ್ ಟ್ರ‍್ಯಾಪ್ ಆದ ಪೊಲೀಸರು.
ವರದಕ್ಷಿಣೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಶುಕ್ರವಾರ ಆರೋಪಿ ಬಂಧನಕ್ಕೆ ರಾಜಸ್ಥಾನದ ಜೈಪುರಕ್ಕೆ ತೆರಳಿದ್ದರು. ಈ ವೇಳೆ ಸಿಕ್ಕ ಆರೋಪಿ ಬಳಿ 2 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಆರೋಪಿ ಸಾಧ್ಯವಾದಷ್ಟು ಹಣ ಕೊಡುವುದಾಗಿ ಹೇಳಿದ್ದ.
ಜೈಪುರದ ಗಂಗೌರ್‌ನ ಹೋಟೆಲ್‌ವೊಂದರಲ್ಲಿ 40,000 ರೂ. ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಪೊಲೀಸರನ್ನು ಬಂಧಿಸಿದ್ದಾರೆ. ಸದ್ಯ ಹೆಚ್‌ಎಎಲ್ ಪೊಲೀಸರನ್ನೇ ಬಂಧಿಸಿರುವ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.



