Latest

*7 ಜನರ ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್*: *ಆರೋಪಿ ಎದುರಲ್ಲೇ ಮರುಸೃಷ್ಟಿಯಾಯ್ತು ಭೀಕರ ಕೊಲೆ ದೃಶ್ಯ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ಒಂದೇ ಕುಟುಂಬದ ಏಳು ಜನರ ಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಕಸ್ಟಡಿಯಲ್ಲಿರುವ ಆರೋಪಿ ಇಂದುಶೇಖರ್‌ನಿಂದಲೇ ಕೊಲೆ ನಡೆದ ಕ್ಷಣದಿಂದ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸಿದವರೆಗಿನ ಸಂಪೂರ್ಣ ಘಟನೆಯನ್ನು ಪೊಲೀಸರು ಮರುಸೃಷ್ಟಿ ಮಾಡಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದ ಹಲವು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ.

ಮನೆಯಿಂದ ಕಾರಿನವರೆಗೆ ನಡೆದಿದ್ದೇನು?

ಆರೋಪಿ ಇಂದುಶೇಖರ್‌ನ ಹೇಳಿಕೆ ಆಧರಿಸಿ ಪೊಲೀಸರು ಸಂಪೂರ್ಣ ಕ್ರೈಂ ಸೀನ್ ರಿಕ್ರಿಯೇಟ್ ಮಾಡಿದ್ದಾರೆ. ಮೃತರನ್ನು ಮನೆಗೆ ಕರೆಸಿಕೊಂಡಿದ್ದು, ಊಟಕ್ಕೆ ಕೂರಿಸಿದ್ದು, ಮಲಗಲು ವ್ಯವಸ್ಥೆ ಮಾಡಿದ್ದು, ಬಳಿಕ ಹತ್ಯೆಗೆ ಸಂಚು ರೂಪಿಸಿದ್ದು ಸೇರಿದಂತೆ ಪ್ರತಿಯೊಂದು ಹಂತವನ್ನೂ ಮರುಸೃಷ್ಟಿಸಲಾಗಿದೆ.

ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ ಬಳಿಕ ಮೃತದೇಹಗಳನ್ನು ಚೀಲಗಳಲ್ಲಿ ತುಂಬಿ ಪ್ಯಾಕ್ ಮಾಡಿದ್ದು, ಮನೆಯಿಂದ ಕೆಳಗೆ ಸಾಗಿಸಿ ಕಾರಿನಲ್ಲಿ ಇರಿಸಿದ ದೃಶ್ಯಗಳನ್ನೂ ಮರುಸೃಷ್ಟಿ ಮಾಡಲಾಗಿದೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ಪೊಲೀಸರು ವಿಡಿಯೋಗ್ರಫಿ ಮಾಡಿಕೊಂಡಿದ್ದಾರೆ.

ಇನ್ನು ಪ್ರಕರಣದ ಸಾಕ್ಷ್ಯ ಸಂಗ್ರಹಕ್ಕೆ ಪೊಲೀಸರು ಹೆಚ್ಚಿನ ಆದ್ಯತೆ ನೀಡಿದ್ದಾರೆ. ಮೃತರ ಮೊಬೈಲ್ ಫೋನ್‌ಗಳನ್ನು ರಿಟ್ರೀವ್ ಮಾಡಲು ಕಳುಹಿಸಲಾಗಿದ್ದು, ಆರೋಪಿ ಇಂದುಶೇಖರ್‌ನ ಪ್ರಯಾಣದ ವಿವರಗಳ ಆಧಾರದಲ್ಲಿ ಟ್ರಾವೆಲ್ ಹಿಸ್ಟರಿ ಮ್ಯಾಪಿಂಗ್ ಮಾಡಲಾಗುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಿರುವ ಆಡಿಯೋ ದಾಖಲೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ. ಹತ್ಯೆಗೆ ಸಂಬಂಧಿಸಿದ ಎಲ್ಲ ಸ್ಥಳಗಳಲ್ಲೂ ರಾಜಾಜಿನಗರ ಪೊಲೀಸರು ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ಇನ್ನೊಂದೆಡೆ, ಆರೋಪಿ ಇಂದುಶೇಖರ್‌ನ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ತನಿಖೆ ಮಹತ್ವದ ಹಂತ ತಲುಪಿದೆ. ತಂದೆ ಮತ್ತು ಮಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣದ ಪ್ರತಿಯೊಂದು ಅಂಶವನ್ನೂ ಪರಿಶೀಲಿಸುತ್ತಿದ್ದಾರೆ.

ಒಟ್ಟಿನಲ್ಲಿ, ಏಳು ಜನರ ಹತ್ಯೆ ಪ್ರಕರಣದಲ್ಲಿ ಕ್ರೈಂ ಸೀನ್ ಮರುಸೃಷ್ಟಿ ಮತ್ತು ತಾಂತ್ರಿಕ ಸಾಕ್ಷ್ಯಗಳ ಪರಿಶೀಲನೆ ಮೂಲಕ ಪೊಲೀಸರು ತನಿಖೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಮುಂದಿನ ವಿಚಾರಣೆಯಲ್ಲಿ ಇನ್ನಷ್ಟು ಸಂಗತಿಗಳು ಹೊರಬರುವ ನಿರೀಕ್ಷೆಯಿದೆ.

Related Articles

Back to top button