CrimeKannada NewsKarnataka NewsLatest

*ಕಾರಿನೊಳಗೆ ಇಮ್ರಾನ್ ಪಾಷ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್*: *ಗುಂಡಿಕ್ಕಿ ಹತ್ಯೆ ಶಂಕೆ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಹೊರವಲಯದಲ್ಲಿ ಕಾರಿನೊಳಗೆ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಹಣೆಗೆ ಗುಂಡೇಟಿನ ಗಾಯವಾಗಿರುವುದು ಕಂಡುಬಂದಿದೆ. ಸ್ಥಳದಲ್ಲಿ ಖಾಲಿ ಬುಲೆಟ್ ಕೂಡ ಸಿಕ್ಕಿರುವುದರಿಂದ ಕೊಲೆಯ ಶಂಕೆಯೂ ವ್ಯಕ್ತವಾಗಿದೆ.

ಬಾಗಲೂರು ಸಮೀಪದ ಮಂಚಪ್ಪನಹಳ್ಳಿಯ ನಿರ್ಜನ ಪ್ರದೇಶದಲ್ಲಿ ನಿಂತಿದ್ದ ಕಾರಿನಲ್ಲಿ ವ್ಯಕ್ತಿಯ ಶವ ಪತ್ತೆಯಾಗಿತ್ತು. ಮೃತನನ್ನು ಬನ್ನೇರುಘಟ್ಟ ರಸ್ತೆ ನಿವಾಸಿ ಇಮ್ರಾನ್ ಪಾಷ ಎಂದು ಗುರುತಿಸಲಾಗಿದೆ. ಸ್ಥಳೀಯರು ಕಾರು ಬಹಳ ಸಮಯದಿಂದ ಒಂದೇ ಜಾಗದಲ್ಲಿ ನಿಂತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ತಕ್ಷಣ ಸ್ಥಳಕ್ಕೆ ಧಾವಿಸಿದ ಬಾಗಲೂರು ಪೊಲೀಸರು ಪರಿಶೀಲನೆ ನಡೆಸಿದಾಗ ಕಾರಿನ ಮುಂದಿನ ಸೀಟಿನಲ್ಲಿ ಇಮ್ರಾನ್ ಪಾಷರ ಮೃತದೇಹ ಪತ್ತೆಯಾಗಿದೆ. ಆತನ ತಲೆಯ ಬಲಭಾಗದಲ್ಲಿ ಗುಂಡೇಟಿನ ಗಾಯ ಕಂಡುಬಂದಿದ್ದು, ಕಾರಿನ ಪಕ್ಕದಲ್ಲಿ ಖಾಲಿ ಬುಲೆಟ್ ಕೂಡ ಸಿಕ್ಕಿದೆ.

ಈ ಬಗ್ಗೆ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೂತ್ ಪ್ರತಿಕ್ರಿಯಿಸಿ, ನವೆಂಬರ್ 17ರ ಸಂಜೆ ಕಾರು ಒಂದೇ ಸ್ಥಳದಲ್ಲಿ ನಿಂತಿರುವ ಬಗ್ಗೆ ಸ್ಥಳೀಯರಿಂದ ಕರೆ ಬಂದಿತ್ತು. ಪೊಲೀಸರು ಪರಿಶೀಲನೆ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಕುಟುಂಬಸ್ಥರಿಗೂ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮೃತ ಇಮ್ರಾನ್ ಪಾಷ ಸ್ಕ್ರಾಪ್ ವ್ಯವಹಾರ ನಡೆಸುತ್ತಿದ್ದ. ಮೇಲ್ನೋಟಕ್ಕೆ ಗುಂಡು ಹಾರಿಸಿ ಹತ್ಯೆ ಮಾಡಿದ ರೀತಿಯಲ್ಲಿ ಗಾಯ ಕಂಡುಬರುತ್ತಿದೆ. ಎಫ್‌ಎಸ್‌ಎಲ್ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ಕಾರಿನಲ್ಲಿ ಬಂದೂಕು ಇತ್ತೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

ಇನ್ನು ಇಮ್ರಾನ್ ಪಾಷಗೆ ಯಾರೊಂದಿಗಾದರೂ ಹಣಕಾಸಿನ ವ್ಯವಹಾರ ಅಥವಾ ವೈಯಕ್ತಿಕ ವಿವಾದಗಳಿದ್ದವೇ ಎಂಬ ಬಗ್ಗೆಯೂ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಒಟ್ಟಿನಲ್ಲಿ, ನಿರ್ಜನ ಪ್ರದೇಶದಲ್ಲಿ ಕಾರಿನೊಳಗೆ ಪತ್ತೆಯಾದ ಇಮ್ರಾನ್ ಪಾಷ ಅವರ ಸಾವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಆತ್ಮಹತ್ಯೆಯೇ ಅಥವಾ ಯಾರಾದರೂ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆಯೇ ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.

Related Articles

Back to top button