
ಪ್ರಗತಿವಾಹಿನಿ ಸುದ್ದಿ: ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ಫಿಕ್ಸ್ ಆಗಿದೆ. ಏಪ್ರಿಲ್ 1ರ ಮಧ್ಯರಾತ್ರಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. 16ನೇ ಬಾರಿಗೆ ಅರ್ಚಕರು ಎ.ಜ್ಞಾನೇಂದ್ರಸ್ವಾಮಿ ಬೆಂಗಳೂರು ಕರಗ ಹೊರಲಿದ್ದಾರೆ.
ಧರ್ಮರಾಯ ಸ್ವಾಮಿ ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿಯಿಂದ ಬೆಂಗಳೂರು ಕರಗಮಹೋತ್ಸವಕ್ಕೆ ದಿನಾಂಕ ನಿಗದಿಪಡಿಸಲಾಗಿದೆ. ಪ್ರತೀ ವರ್ಷ ಚೈತ್ರ ಮಾಸದ ಪೌರ್ಣಮಿಯ ಸಂದರ್ಭದಲ್ಲಿ ನಡೆಯುವ ಈ ಉತ್ಸವವು ಸಾಮಾನ್ಯವಾಗಿ 9 ರಿಂದ 11 ದಿನಗಳವರೆಗೆ ನಡೆಯುತ್ತದೆ. ಮಾರ್ಚ್ 24ರಂದು ಧ್ವಜಾರೋಹಣದ ಮೂಲಕ ಉತ್ಸವಕ್ಕೆ ಚಾಲನೆ ಸಿಗಲಿದೆ. ಮಾರ್ಚ್ 30ರಂದು ಹಸಿಕರಗ ನಡೆಯಲಿದೆ. ಬಳಿಕ ಏಪ್ರಿಲ್ 1ರ ಮಧ್ಯರಾತ್ರಿ ಬೆಂಗಳೂರು ಕರಗ ಶಕ್ತ್ಯೋತ್ಸವ ನಡೆಯಲಿದೆ.
ಒಟ್ಟು 11 ದಿನಗಳ ಕಾಲ ಬೆಂಗಳೂರು ಕರಗ ಶಕ್ತ್ಯೋತ್ಸವ ನಡೆಯಲಿದೆ. ಕಳೆದ ವರ್ಷ ಬೆಂಗಳೂರು ಕರಗ ಹೊತ್ತಿದ್ದ ಅರ್ಚಕರು ಎ.ಜ್ಞಾನೇಂದ್ರ ಸ್ವಾಮಿ ಅವರು 16ನೇ ಬಾರಿಗೆ ಕರಗ ಹೊರಲಿದ್ದಾರೆ.
ತಿಗಳ ಸಮುದಾಯದವರು ಈ ಹಬ್ಬದ ಮುಖ್ಯ ಆಯೋಜಕರಾಗಿದ್ದು, ಶತಮಾನಗಳಿಂದ ಬಂದಿರುವ ಆಚರಣೆಗಳನ್ನು ಶ್ರದ್ಧೆಯಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ. ವಿವಿಧ ಧರ್ಮಗಳ ಜನರು ಭಾಗವಹಿಸುವ ಬೆಂಗಳೂರು ಕರಗ ಉತ್ಸವ ಸಹಭಾಳ್ವೆ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುತ್ತದೆ.




