*2027ರ ಡಿಸೆಂಬರ್ ವೇಳೆಗೆ ಬೆಂಗಳೂರಿನಲ್ಲಿ 175 ಕಿ.ಮೀ ಮೆಟ್ರೋ ಮಾರ್ಗ ಕಾರ್ಯಾರಂಭ*

ಪ್ರಗತಿವಾಹಿನಿ ಸುದ್ದಿ: “ಬೆಂಗಳೂರಿನಲ್ಲಿ ಮೆಟ್ರೋ ಮಾರ್ಗ ಹೆಚ್ಚಳ ಮಾಡಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ನಮ್ಮ ಸರ್ಕಾರ ಮುಂದಾಗಿದೆ. 2027ರ ಡಿಸೆಂಬರ್ ವೇಳೆಗೆ ಬೆಂಗಳೂರು ನಗರದಲ್ಲಿ 175 ಕಿ.ಮೀ ಉದ್ದದಷ್ಟು ಮೆಟ್ರೋ ಮಾರ್ಗ ಕಾರ್ಯಾರಂಭವಾಗಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬಿಎಂಆರ್ ಸಿಎಲ್ ಕಚೇರಿಯಲ್ಲಿ ಮೆಟ್ರೋ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು.
“ಪ್ರಸ್ತುತ 96 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಕಾರ್ಯನಿರ್ವಹಿಸುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಳದಿ ಮಾರ್ಗ ಚಾಲನೆ ಮಾಡಲಾಗಿದ್ದು, 24 ಕಿ.ಮೀ ಉದ್ದದ ಮೆಟ್ರೋ ಸಂಚಾರ ಆರಂಭ ಮಾಡಲಾಗಿದೆ. 1 ಲಕ್ಷ ಜನ ಈ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದು, ಈ ಮಾರ್ಗದಲ್ಲಿ 30% ದಟ್ಟಣೆ ಕಡಿಮೆಯಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ” ಎಂದು ತಿಳಿಸಿದರು.
“ಮುಂದಿನ ವರ್ಷ (2026ರಲ್ಲಿ) 41 ಕಿ.ಮೀ ಉದ್ದದ ಮಾರ್ಗ ಕಾರ್ಯಾರಂಭ ಮಾಡಲಾಗುವುದು. 2027ರ ಡಿಸೆಂಬರ್ ವೇಳೆಗೆ ವಿಮಾನ ನಿಲ್ದಾಣ ಮಾರ್ಗ ಸೇರಿದಂತೆ 38 ಕಿ.ಮೀ ಉದ್ದದ ಮಾರ್ಗ ಕಾರ್ಯಾರಂಭ ಮಾಡಲಾಗುವುದು. ಆ ಮೂಲಕ ಬೆಂಗಳೂರಿನಲ್ಲಿ 175 ಕಿ.ಮೀ ಉದ್ದದ ಮಾರ್ಗ ಕಾರ್ಯನಿರ್ವಹಿಸಲಿದೆ. ಇದರ ಹೊರತಾಗಿ ಮಾಗಡಿ ರಸ್ತೆಯಲ್ಲಿ ತಾವರಕೆರೆವರೆಗೆ, ಹೊಸಕೋಟೆ, ಬಿಡದಿ, ನೆಲಮಂಗಲದವರೆಗೆ ವಿಸ್ತರಿಸುವ ಯೋಜನೆ ಹಮ್ಮಿಕೊಂಡಿದ್ದೇವೆ. ಒಂದು ಕಡೆ ಯೋಜನೆ ಕೈಗೆತ್ತಿಕೊಂಡಿದ್ದು, ಉಳಿದ ಕಡೆಗಳಲ್ಲಿ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ” ಎಂದು ತಿಳಿಸಿದರು.
ಮೆಟ್ರೋ ಮೂರನೇ ಹಂತದ ಯೋಜನೆಯ 100 ಕಿ.ಮೀ ಕಾಮಗಾರಿಗೆ ಜನವರಿಯಲ್ಲಿ ಟೆಂಡರ್
“ಮುಂದಿನ ತಿಂಗಳು ಮೆಟ್ರೋ ಮೂರನೇ ಹಂತದ ಯೋಜನೆಯಲ್ಲಿ ಎಲಿವೇಟೆಡ್ ಕಾರಿಡಾರ್ (ಡಬಲ್ ಡೆಕ್ಕರ್) ಸೇರಿದಂತೆ ಸುಮಾರು 100 ಕಿ.ಮೀ ಉದ್ದದ ಮೆಟ್ರೋ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು. ಸಂಚಾರ ದಟ್ಟಣೆ ನಿಯಂತ್ರಿಸಿ ಜನರ ಪ್ರಯಾಣಕ್ಕೆ ಅನುಕೂಲವಾಗಲು ಕಾಮಗಾರಿ ವೇಗವಾಗಿ ನಡೆಸುತ್ತಿದೆ. ಮೆಟ್ರೋ ನಿಲ್ದಾಣಗಳ ಬಳಿ ಹೆಚ್ಚಿನ ಜಮೀನು ಸ್ವಾಧೀನಪಡಿಸಿಕೊಂಡು ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸುವಂತೆ ಸೂಚಿಸಲಾಗಿದೆ. ವಾಹನ ನಿಲುಗಡೆಗೂ ಅವಕಾಶ ಕಲ್ಪಿಸಬೇಕಿದೆ” ಎಂದರು.
“ಮೂರನೇ ಹಂತದ ಯೋಜನೆ ಟೆಂಡರ್ ಕರೆಯಲಾಗುತ್ತಿದೆ. 25,311 ಸಾವಿರ ಕೋಟಿ ವೆಚ್ಚದ ಈ ಕಾಮಗಾರಿಗೆ, ಜೈಕಾದಿಂದ 15,600 ಕೋಟಿ ಸಾಲ ಮಾಡಲಾಗುತ್ತಿದೆ. ಉಳಿದಂತೆ ಎಲಿವೇಟೆಡ್ ಕಾರಿಡಾರ್ ಗೆ 9,700 ಕೋಟಿ ಮೊತ್ತದ ಟೆಂಡರ್ ಅನ್ನು ಜನವರಿಯಲ್ಲಿ ಕರೆಯಲಾಗುವುದು” ಎಂದು ಮಾಹಿತಿ ನೀಡಿದರು.
ಮೂರನೇ ಹಂತದಲ್ಲಿ ಸಂಪೂರ್ಣ ಮಾರ್ಗ ಎಲಿವೇಟೆಡ್ ಕಾರಿಡಾರ್ (ಡಬಲ್ ಡೆಕ್ಕರ್) ಮಾಡಲಾಗುವುದೇ ಎಂದು ಕೇಳಿದಾಗ, “ಮೂರನೇ ಹಂತದ ಯೋಜನೆಯಲ್ಲಿ ಸಂಪೂರ್ಣವಾಗಿ ಎಲ್ಲಾ ಮಾರ್ಗದಲ್ಲೂ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲಾಗುವುದು. ತಾವರೆಕೆರೆ ಬಳಿ ಮೆಟ್ರೋ ನಿಲ್ದಾಣಕ್ಕೆ ಜಾಗ ಅಂತಿಮಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಹಾಸನದಿಂದ ಬರುವ ಜನರು ಈ ಮಾರ್ಗವಾಗಿ ಬರುವುದರಿಂದ ಇಲ್ಲೂ ಡಬಲ್ ಡೆಕ್ಕರ್ ಮಾಡಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.
ಅಧಿಕೃತವಾಗಿ ಮಾಹಿತಿ ಬಂದ ನಂತರ ಟನಲ್ ರಸ್ತೆ ಟೆಂಡರ್ ಕುರಿತು ಪ್ರತಿಕ್ರಿಯೆ
ಟನಲ್ ರಸ್ತೆ ಟೆಂಡರ್ ಅಂತಿಮಗೊಂಡಿದ್ದು, ಅದಾನಿ ಕಂಪನಿ ಕಡಿಮೆ ಬಿಡ್ ಮಾಡಿದೆ ಎಂಬ ವರದಿಗಳು ಬಂದಿವೆ ಎಂದು ಕೇಳಿದಾಗ, “ನನಗೆ ಇನ್ನು ಸಂಪೂರ್ಣ ಮಾಹಿತಿ ಬಂದಿಲ್ಲ. ನನಗೆ ಅಧಿಕೃತವಾಗಿ ಪತ್ರ ಬರುವವರೆಗೂ ನಾನು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ” ಎಂದು ತಿಳಿಸಿದರು.
ಸರ್ಕಾರ ನಿಗದಿ ಮಾಡಿದ ಮೊತ್ತಕ್ಕಿಂತ ಹೆಚ್ಚಿನ ಹಣ ಬಿಡ್ ಮಾಡಲಾಗಿದೆ ಎಂದು ಕೇಳಿದಾಗ, “ನಾವು ಯಾರಿಗೂ ಹಣ ನೀಡುವುದಿಲ್ಲ. ಅವರೇ ಹಣ ಬಂಡವಾಳ ಹಾಕಿ ಮಾಡಬೇಕು. ವಿಜೆಎಫ್ ಎಷ್ಟು ಪರ್ಸೆಂಟ್ ನೀಡುತ್ತೇವೆ ಎಂದು ಹೇಳಿದ್ದೇವೋ ಅಷ್ಟನ್ನೇ ನೀಡುತ್ತೇವೆ. ನಾವು ಅಂದಾಜು ಮಾಡಿರುವುದರಲ್ಲಿ 40% ಮಾತ್ರ ನೀಡುತ್ತೇವೆ. ಅದರ ಮೇಲೆ ನಾವು ನೀಡುವುದಿಲ್ಲ. ಮೆಟ್ರೋಗೆ ತಗುಲುವ ವೆಚ್ಚ ಪರಿಶೀಲಿಸಿದೆ. ಬಾಂಬೆಯಲ್ಲಿ ಆಗುತ್ತಿರುವ ವೆಚ್ಚದ ಮಾಹಿತಿ ತರಿಸಿಕೊಂಡೆ. ಬಾಂಬೆಯಲ್ಲಿ ಪ್ರತಿ ಕಿ.ಮೀಗೆ 1,200 ಕೋಟಿ ಆಗುತ್ತಿದೆ” ಎಂದು ತಿಳಿಸಿದರು.


