ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಚಿರತೆ ಹಾವಳಿಗೆ ಜನರು ಬೆಚ್ಚಿ ಬಿದ್ದಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆಯೇ ದಾಳಿ ನಡೆಸಿದೆ.
ಬೊಮ್ಮನಹಳ್ಳಿಯ ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದ ಕಟ್ಟಡವೊಂದರಲ್ಲಿ ಅವಿತು ಕುಳಿತಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದು, ಕಾರ್ಯಾಚರಣೆ ಚುರುಕುಗೊಂಡಿದೆ. ಈ ವೇಳೆ ಚಿರತೆ ಸೆರೆ ಹಿಡಿಯಲು ಅರವಳಿಕೆ ಚುಚ್ಚು ಮದ್ದು ನೀಡಲು ಮುಂದಾಗಿದ್ದ ಡಾ.ಕಿರಣ್ ಎಂಬುವವರ ಮೇಲೆ ಬೆಳಿಗ್ಗೆ ಚಿರತೆ ದಾಳಿ ನಡೆಸಿದೆ. ಕೈ ಹಾಗೂ ಕುತ್ತಿಗೆ ಭಾಗದಲ್ಲಿ ಚಿರತೆ ಪರಚಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರವಳಿಕೆ ಮದ್ದು ನೀಡಿದರೂ ಚಿರತೆ ಅರಣ್ಯ ಇಲಾಖೆಸಿಬ್ಬಂದಿಗಳ ಬಲೆಗೆ ಬೀಳದೇ ತಪ್ಪಿಸಿಕೊಳ್ಳುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಕಟ್ಟಡದ ಬೇಸ್ ಮೆಂಟ್ ನಲ್ಲಿರುವ ಚಿರತೆ ಸೆರೆಗಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಈ ಮಧ್ಯೆ ಅರಣ್ಯ ಇಲಾಖೆಯ ಮತ್ತೋರ್ವ ಸಿಬ್ಬಂದಿ, ಶಾರ್ಪ್ ಶೂಟರ್ ಧನರಾಜ್ ಎಂಬುವವರ ಮೇಲೆ ದಾಳಿ ನಡೆಸಿ, ಅವರನ್ನು ಗಾಯಗೊಳಿಸಿದೆ. ಗಾಯಾಳು ಧನರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೊಮ್ಮನಹಳ್ಳಿ, ಕೂಡ್ಲು ಸುತ್ತಮುತ್ತ ನಿವಾಸಿಗಳು ಕ್ಷಣ ಕ್ಷಣಕ್ಕೂ ಆತಂಕದಲ್ಲಿ ಕಾಲಕಳೆಯುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಜೀವದ ಹಂಗುತೊರೆದು ಆಪರೇಷನ್ ಚಿರತೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ