ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಣಕಾಸಿನ ವಿಚಾರವಾಗಿ ನಡೆದ ಗಲಾಟೆಯಲ್ಲಿ ಬೆಸ್ಕಾಂ ನೌಕರನನ್ನೇ ದುಷ್ಕರ್ಮಿಗಳು ಅಪಹರಿಸಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಸ್ಕಾಂ ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್ ಎಂಬ ನೌಕರ ಹಣ ಮರುಪಾವತಿ ಮಾಡಿಲ್ಲ ಎಂದು ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿದ್ದರು. ಪ್ರಕರಣ ನಡೆದ 24 ಗಂಟೆಯಲ್ಲೇ ಪೊಲೀಸರು 10 ಆರೊಪಿಗಳನ್ನು ಬಂಧಿಸಿ, ಬೆಸ್ಕಾಂ ನೌಕರನನ್ನು ರಕ್ಷಿಸಿದ್ದಾರೆ.
ಲೋಹಿತ್ ಗೌಡ, ವೆಂಕಟೇಶ್, ರವಿ, ರಮೇಶ್, ಭರತ್ ಸೇರಿದಂತೆ ಒಟ್ಟು ಹತ್ತು ಆರೋಪಿಗಳನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಮಹತ್ವದ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್ ಬೆಸ್ಕಾಂ ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ವಂಚನೆ ಮಾಡಿದ್ದ. ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದನಂತೆ. ಈ ಬಗ್ಗೆ ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೂ ಹಣ ನೀಡಿದವರು ಪ್ರವೀಣ್ ನನ್ನು ಮಾತುಕತೆಗೆಂದು ಕರೆದು ಕಿಡ್ನ್ಯಾಪ್ ಮಾಡಿದ್ದರಂತೆ. ಹಣ ಕೊಡುವಂತೆ ಹೇಳಿ ಹಲ್ಲೆ ನಡೆಸಿದ್ದಾರೆ. ಇದೀಗ ಕಿಡ್ನ್ಯಾಪ್ ಮಾಡಿದ ಆರೋಪಿಗಳನ್ನು ಬಂಧಿಸುತ್ತಿದ್ದಂತೆ ವಂಚನೆ ಪ್ರಕರಣವೂ ಬಯಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ