ಡಾ.ಪ್ರಭಾಕರ ಕೋರೆಗೆ ಶ್ರೇಷ್ಠ ಕನ್ನಡಿಗ ಪ್ರಶಸ್ತಿ
ಪ್ರಗತಿವಾಹಿನಿ ಸುದ್ದಿ, ಶಿಗ್ಗಾವಿ: ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರೂ, ರಾಜ್ಯಸಭೆಯ ಮಾಜಿ ಸದಸ್ಯರೂ ಆಗಿರು ಡಾ.ಪ್ರಭಾಕರ ಕೋರೆ ಅವರಿಗೆ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ನೀಡಲಾಗಿದೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹುಟ್ಟು ಹಬ್ಬದ ಅಂಗವಾಗಿ ಶಿಗ್ಗಾಯಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಮೋಹನ್ ಆಳ್ವಾ ಹಾಗೂ ಕೆಎಲ್ ಇ ಸಂಸ್ಥೆಯ ಮುಖ್ಯಸ್ಥರಾದ ಪ್ರಭಾಕರ್ ಕೋರೆ ಅವರಿಗೆ ಶ್ರೇಷ್ಠ ಕನ್ನಡಿಗ ಪ್ರಶಸ್ತಿ (ರಾಜ್ಯಮಟ್ಟದ ಗಂಗಮ್ಮಾ ಸೋಮಪ್ಪ ಬೊಮ್ಮಾಯಿ ಪುರಸ್ಕಾರ) ನೀಡಿ ಗೌರವಿಸಲಾಯಿತು.
ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ: ಬಸವರಾಜ ಬೊಮ್ಮಾಯಿ
ಶಿಗ್ಗಾವಿ ಸವಣೂರು ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸುತ್ತಿದ್ದು, ಶಿಕ್ಷಣ ಮತ್ತು ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತಮ್ಮ 64 ನೇ ಹುಟ್ಟು ಹಬ್ಬದ ಅಂಗವಾಗಿ ಶಿಗ್ಗಾವಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮೋಹನ್ ಆಳ್ವಾ ಹಾಗೂ ಕೆಎಲ್‌ಇ ಸಂಸ್ಥೆಯ ಮುಖ್ಯಸ್ಥ ಪ್ರಭಾಕರ ಕೋರೆಯವರಿಗೆ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡಿದ ಅವರು, ಶಿಗ್ಗಾವಿ ಸವಣೂರು ಕ್ಷೇತ್ರದ ಜನರ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆ. ನನಗೆ 64 ವರ್ಷ ಆಗಿದೆ. ಇನ್ನೂ ಎಷ್ಟು ವರ್ಷ ಇರುತ್ತೇನೋ ಗೊತ್ತಿಲ್ಲ. ಜೀವನದ ಕೊನೆ ಉಸಿರು ಇರುವವರೆಗೂ ಶಿಗ್ಗಾವಿ ಸವಣೂರಿನ ಜನರ ಸೇವೆ ಮಾಡುತ್ತೇನೆ. ಸೃಷ್ಟಿಕರ್ತ ಭಗವಂತ, ತಂದೆತಾಯಿ, ಜೊತೆಯಾಗಿರುವ ಅಣ್ಣ ತಮ್ಮಂದಿರು, ಸಮಾಜ, ಪರಮಪೂಜ್ಯರಿಗೆ ಋಣಿಯಾಗಿರಬೇಕು ಎಂದು ಹೇಳಿದರು.
ಇದು ಶರಣರ ನಾಡು, ಭಕ್ತ ಕನಕದಾಸರು, ಸಂತ ಶಿಶುನಾಳ ಶರೀಫರು ಪುಣ್ಯ ಭೂಮಿ ಇದು. ಹುಟ್ಟು ಆಕಸ್ಮಿಕ ಹಾಗೂ ಸಾವು ನಿಶ್ಚಿತ, ಮಕ್ಕಳ ಮುಖದಲ್ಲಿ ಮುಗ್ಧತೆ ಇರುತ್ತದೆ. ನಮ್ಮ ಮುಖ ವಿಕಾರವಾಗಿರುತ್ತದೆ. ಅದಕ್ಕೆ ಕಾರಣ ನಮ್ಮ ಮನಸು ಕೆಟ್ಟು ಹೋಗಿರುತ್ತದೆ. ಇನ್ನೊಂದು ಕಷ್ಟದ ಕೆಲಸ ಎಂದರೆ ನಮ್ಮ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳುವುದು. ಆತ್ಮಸಾಕ್ಷಿಯಾಗಿ ನಡೆದುಕೊಳ್ಳುವ ವ್ಯಕ್ತಿಗಳನ್ನು ಸೃಷ್ಟಿ ಮಾಡುವ ಕೆಲಸವನ್ನು ಸಮಾಜ, ತಂದೆತಾಯಿ, ಗುರುಗಳು ಮಾಡಬೇಕು. ಆ ನಿಟ್ಟಿನಲ್ಲಿ ಶಿಗ್ಗಾವಿ ಸವಣೂರು ಮಾದರಿಯಾಗಲಿ ಎಂದು ಹೇಳಿದರು.
ಯಾವ ಮನುಷ್ಯನಲ್ಲಿ ಕೃತಜ್ಞತಾ ಭಾವನೆ ಇರುವುದಿಲ್ಲವೋ ಅದು ಮನುಷ್ಯನ ಜೀವನವೇ ಅಲ್ಲ. ಕೃತಜ್ಞತೆಯನ್ನು ಸಲ್ಲಿಸುವ ದಿನ ಇದು ಅಂತ ಭಾವಿಸಿದ್ದೇನೆ. ನಾನು ಶಾಸಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದವರು ಅಭಿಮಾನಿ ದೇವರುಗಳು ನಿಮಗೆ ನಾನು ಕೃತಜ್ಞರಾಗಿರುತ್ತೇನೆ. ಶಿಗ್ಗಾವಿ ಸವಣೂರು ಕ್ಷೇತವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದು ನನ್ನ ಗುರಿಯಾಗಿದೆ ಎಂದು ಹೇಳಿದರು.
ಶಿಗ್ಗಾವಿಯಲ್ಲಿ ಒಂದು ಕಣ್ಣಿನ ಆಸ್ಪತ್ರೆ, ಡಯಾಬಿಟಿಸ್ ಹಾಗೂ ಇಎನ್‌ಟಿ ಆಸ್ಪತ್ರೆಯನ್ನು ಮಾಡುತ್ತೇನೆ. ನಮ್ಮ ಕ್ಷೇತ್ರ ವಿದ್ಯಾರ್ಥಿಗಳಿಗೆ ಶಿಗ್ಗಾವಿಯಲ್ಲಿ ಕೋಚಿಂಗ್ ಕ್ಲಾಸ್ ಮಾಡಲು ತೀರ್ಮಾನ ಮಾಡಿದ್ದೇನೆ. ಮೂಗರು ಮತ್ತು ಕಿವುಡರ ಶಿಕ್ಷಣ ಸಂಸ್ಥೆಯನ್ನು ಬರುವ ದಿನಗಳಲ್ಲಿ ಮಾಡಲು ತೀರ್ಮಾನ ಮಾಡಿದ್ದೇವೆ ಎಂದರು.
ಇನ್ನಷ್ಟು ಶಿಕ್ಷಣ ಕೇತದಲ್ಲಿ ಕೆಲಸ ಮಾಡಬೇಕಿದೆ. ಉದ್ಯೋಗ ನೀಡುವ ಕಾರ್ಖಾನೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಇಲ್ಲಿ ಬದುಕುವವರಿಗೆ ಅವಕಾಶ ಕಲಿಸುವ ಸಂಕಲ್ಪ ಮಾಡಿದ್ದೇವೆ. ಈಗಾಗಲೇ ಟೆಕ್ಸ್‌ಟೈಲ್ ಪಾರ್ಕ್ ಆರಂಭವಾಗಿದೆ. ಇನ್ನೆರಡು ತಿಂಗಳಲ್ಲಿ ಅಲ್ಲಿ ಕಾರ್ಖಾನೆಗಳು ಆರಂಭವಾಗಲಿವೆ. ಪೂರ್ಣ ಪ್ರಮಾಣದಲ್ಲಿ ಟೆಕ್ಸ್ ಟೈಲ್ ಕಂಪನಿಗಳು ಆರಂಭವಾದರೆ ಮೂವತ್ತರಿಂದ ನಲವತ್ತು ಸಾವಿರ ಮಹಿಳೆಯರಿಗೆ ಉದ್ಯೋಗ ದೊರೆಯಲಿದೆ ಎಂದು ಹೇಳಿದರು.
ಯಾರು ಅವಕಾಶ ವಂಚಿತರಾಗಿದ್ದಾರೆ. ಯಾರು ಸಮಾಜದಿಂದ ವಂಚಿತರಾಗಿದ್ದಾರೆ ಅವರಿಗೆ ವಯಕ್ತಿಕ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಸರ್ಕಾರದಿಂದ ಮಾಡುವ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ. ಐಟಿಐ, ಬಿಎಎಂಸ್ ಕಾಲೇಜು ತರಲು ಚಿಂತನೆ ಮಾಡುತ್ತಿದ್ದೇನೆ. ಖಾಸಗಿ ವಲಯದಲ್ಲಿ ಶಿಕ್ಷಣ ಮತ್ತು ಉದ್ಯೋಗ ನಮ್ಮ ಮುಖ್ಯವಾದ ಕೆಲಸಗಳು. ಮುಂದಿನ ನಾಲ್ಕು ವರ್ಷದಲ್ಲಿ ಶಿಗ್ಗಾವಿ ಸವಣೂರಿನಲ್ಲಿರುವ ಅಂಧರ ಶೇ 90 ರಷ್ಟು ಅಂಧತ್ವ ನಿವಾರಣೆ ಮಾಡಲು ಶ್ರಮಿಸುವುದಾಗಿ ತಿಳಿಸಿದರು.
ಕೆಎಲ್‌ಇ ಸೊಸೈಟಿಯವರು ಹುಬ್ಬಳ್ಳಿ ಮಾರ್ಗದಲ್ಲಿ ದೊಡ್ಡ ಪ್ರಮಾಣದ ಆಸತೆಯನ್ನು ತೆರೆಯಲು ತೀರ್ಮಾನಿಸಿದ್ದಾರೆ. ಮುಂದಿನ ನಾಲ್ಕು ತಿಂಗಳಲ್ಲಿ ಆಸತ್ರೆ ಆರಂಭವಾಗಲಿದೆ. ಹೀಗಾಗಿ ಪ್ರಭಾಕರ ಕೋರೆಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶಿಗ್ಗಾವಿಯಲ್ಲಿ ನಾವು 250 ಬೆಡ್ ಆಸ್ಪತ್ರೆ ಆರಂಭಿಸುತ್ತಿದ್ದೇವೆ. ಹೆಚ್ಚಿನ ಚಿಕಿತ್ಸೆಗೆ ನಾವು ಹುಬ್ಬಳ್ಳಿಗೆ ಹೋಗಬೇಕು. ಅದಕ್ಕೆ ಮುಂಚೆಯೇ ಸುಸಜ್ಜಿತ ಆಸ್ಪತ್ರೆ ಆದರೆ ನಮಗೆ ಅನುಕೂಲವಾಗಲಿದೆ ಎಂದರು.
ಇದೇ ವೇಳೆ, ಅರಟಾಳ ರುದ್ರಗೌಡ ಅವರ ಹೆಸರಿನಲ್ಲಿ ಹೈಸ್ಕೂಲ್‌ನಿಂದ ಶಿಕ್ಷಣ ಸಂಸ್ಥೆಯನ್ನು ಕೆಎಲ್‌ಇ ಸಂಸ್ಥೆಯಿಂದ ಆರಂಭಿಸಬೇಕೆಂದು ಮನವಿ ಮಾಡಿದರು. ಕೋರೆಯವರು ಸುಮಾರು 280 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಆದರೆ, ಕೆಎಲ್‌ಇ ಶಿಕ್ಷಣ ಸಂಸ್ಥೆ ಪ್ರಾರಂಭದಲ್ಲಿ ಅರಟಾಳ ರುದಗೌಡ ಅವರ ಪಾತ್ರ ಅತ್ಯಂತ ಮುಖ್ಯವಾಗಿದೆ. ಹೀಗಾಗಿ ಅವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಬೇಕೆಂದು ಮನವಿ ಮಾಡಿದರು.
ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ನಮ್ಮ ಭಾಗದ ಧಾರವಾಡ, ಹಾವೇರಿ, ಗದಗ್ ಭಾಗದಿಂದ ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಾರೆ. ಸುಮಾರು ಇಪ್ಪತ್ತು ಸಾವಿರ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಇದ್ದು ಶಿಕ್ಷಣ ಕಲಿಯುತ್ತಿದ್ದಾರೆ. ಆಳ್ವಾಸ್ ಶಿಕ್ಷಣ ಸಂಸ್ಥೆ ನಮ್ಮ ಸಂಸ್ಕೃತಿ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ