ಪ್ರಗತಿವಾಹಿನಿ ಸುದ್ದಿ; ಬೆಟಗೇರಿ: ಭಾರತ ದೇಶ ಸರ್ವ ಜಾತಿ, ಧರ್ಮ, ದೇವರು ಹಾಗೂ ಸಂಸ್ಕೃತಿ, ಸಂಪ್ರದಾಯಗಳನ್ನು ಹೊಂದಿದ ಬಿಡಾಗಿದೆ. ನಾವೆಲ್ಲರೂ ಭಾರತೀಯರು ಎನ್ನುವ ಸಮನ್ವಯ ಭಾವ ನಮ್ಮೆಲ್ಲರಲ್ಲಿರಲಿ, ದೇವರುಗಳ ಮೇಲೆ ಅಪಾರ ನಂಬಿಕೆ, ಶ್ರೇದ್ಧೆ, ಭಯ, ಭಕ್ತಿ ಹೊಂದಿದ ಜನರು ಭಾರತದಲ್ಲಿ ಮಾತ್ರ ಇದ್ದಾರೆ. ಹೀಗಾಗಿ ಭಾರತ ದೇಶ ಶ್ರೀಮಂತವಾದ ಧಾರ್ಮಿಕ ಪರಂಪರೆ ಹೊಂದಿದೆ ಎಂದು ಉಜ್ಜಯನಿಪೀಠದ ಶ್ರೀ ಮದುಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಭಗವತ್ಪಾದರು ಹೇಳಿದರು.
ಬೆಟಗೇರಿ ಗ್ರಾಮದ ಓಂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯವರ ಆಶ್ರಯದಲ್ಲಿ ಡಿ.27ರಂದು ನಡೆದ 24ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ, ಉಜ್ಜಯನಿಪೀಠದ ಶ್ರೀಮದುಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಧರ್ಮಸಭೆಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಎಲ್ಲಿ ನಾರಿಯರನ್ನು ಪೂಜಿಸುತ್ತಾರೆ, ಗೌರವಿಸುತ್ತಾರೋ ಅಲ್ಲಿ ದೇವತೆಗಳು ಇರುತ್ತಾರೆ ಎಂಬ ಸಂಸ್ಕೃತಿಯನ್ನು ಪ್ರಪಂಚಕ್ಕೆ ಹೇಳಿಕೊಟ್ಟ ದೇಶ ನಮ್ಮದು ಎಂದರು.
ಪ್ರಪಂಚದಲ್ಲಿಯೇ ದಾನ, ಧರ್ಮ ಮಾಡುವ ಪರಂಪರೆ ಮತ್ತು ದೇಹಕ್ಕಿಂತ ಮಿಗಿಲಾಗಿ ದೇವರನ್ನು ಪ್ರೀತಿಸುವ ಜನರು ಭಾರತ ದೇಶದಲ್ಲಿ ಮಾತ್ರ ಇದ್ದಾರೆ. ದೇವರಿಗೆ ಕೊಡುವುದು ಮಾತ್ರ ಗೊತ್ತು, ಇಸಿದುಕೊಳ್ಳುವುದಿಲ್ಲಾ, ಪ್ರತಿಯೊಬ್ಬರೂ ದೇವರಲ್ಲಿ ಸದ್ಗುಣಗಳ ಮನೋಭಾವ ಕೊಡು ಅಂತಾ ಬೇಡಿಕೊಳ್ಳಿರಿ. ಕರೊನಾ ಮತ್ತು ಓಮಿಕ್ರಾನ್ ತಡೆಗಟ್ಟಲು ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದಕೊಂಡು ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಅನುಸರಿಸಬೇಕು. 24 ವರ್ಷಗಳಿಂದ ಅಯ್ಯಪ್ಪಸ್ವಾಮಿ ಮಹಾಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಸ್ಥಳೀಯ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಉಜ್ಜಯನಿಪೀಠದ ಜಗದ್ಗುರುಗಳು ಅಭಿಪ್ರಾಯಿಸಿದರು.
ಮಮದಾಪೂರದ ಮೌನ ಮಲ್ಲಿಕಾರ್ಜುನ ಸ್ವಾಮಿಜಿ, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ಕೌಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು, ಕಡಕೋಳದ ಅಭಿನವ ಸಿದ್ದರಾಯ ಅಜ್ಜನವರು ಸಮ್ಮುಖ ವಹಿಸಿ ಮಾತನಾಡಿದರು. ಈರಯ್ಯ ಹಿರೇಮಠ, ಹನುಮಂತ ವಡೇರ, ಮುತ್ತೆಪ್ಪ ವಡೇರ, ಅಯ್ಯಪ್ಪಸ್ವಾಮಿ ಮಾಲಾಧಾರಿ ಗುರುಸ್ವಾಮಿಗಳಾದ ವೀರನಾಯ್ಕ ನಾಯ್ಕರ, ಬಸವರಾಜ ಬೆಟಗೇರಿ ನೇತೃತ್ವ, ಗ್ರಾಪಂ ಉಪಾಧ್ಯಕ್ಷ ಬಸವಂತ ಕೋಣಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲನ್ನವರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅಯ್ಯಪ್ಪಸ್ವಾಮಿ ಸೇವಾ ಸಮಿತಿ ವತಿಯಿಂದ ಶ್ರೀಗಳಿಗೆ, ಗಣ್ಯರಿಗೆ, ದಾನಿಗಳನ್ನು ಸತ್ಕರಿಸಲಾಯಿತು.
ಸಂಭ್ರಮದಿಂದ ನಡೆದ ಕಾರ್ಯಕ್ರಮಗಳು: ಮುಂಜಾನೆ 10 ಗಂಟೆಗೆ ಅಯ್ಯಪ್ಪಸ್ವಾಮಿ ಮಹಾಪೂಜೆ ಸಮಾರಂಭಕ್ಕೆ ಆಗಮಿಸಿದ ಮಾಲಾಧಾರಿಗಳನ್ನು ಬರಮಾಡಿಕೊಳ್ಳಲಾಯಿತು. ಸಂಜೆ 5 ಗಂಟೆಗೆ ಅಯ್ಯಪ್ಪಸ್ವಾಮಿ ಮೂರ್ತಿಯೊಂದಿಗೆ ಆನೆ, ಸುಮಂಗಲೆಯರ ಆರತಿ, ಕುಂಭ ಮೇಳ ಸೇರಿದಂತೆ ಸಕಲ ಕಲಾ ತಂಡ, ವಾದ್ಯ ಮೇಳಗಳೊಂದಿಗೆ ಇಲ್ಲಿಯ ವೀರಭದ್ರೇಶ್ವರ ದೇವಾಸ್ಥಾನದಿಂದ ಅಯ್ಯಪ್ಪಸ್ವಾಮಿ ಸನ್ನಿದಾನದ ತನಕ ಭವ್ಯ ಮೆರವಣಿಗೆ ನಡೆಯಿತು. ಸಂಜೆ 7 ಗಂಟೆಗೆ ಅಗ್ನಿಪೂಜೆ, ಮಾಲಾಧಾರಿಗಳಿಂದ ಬೆಂಕಿಪಾದ ನಡೆಯುವುದು, ಅಯ್ಯಪ್ಪಸ್ವಾಮಿ ಮಹಾಪೂಜೆ, ಮಹಾಪ್ರಸಾದ ಜರುಗಿದ ಬಳಿಕ ಪ್ರಸಕ್ತ ವರ್ಷದ ಕಾರ್ಯಕ್ರಮ ಸಮಾರೂಪಗೊಂಡಿತು.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗ್ರಾಪಂ, ವಿವಿಧ ಸಂಘ, ಸಂಸ್ಥೆಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ಗಣ್ಯರು, ಸಂತರು, ಶರಣರು, ವೀರಭದ್ರೇಶ್ವರ ದೇವರ ಪುರವಂತರು, ನೂರಾರು ಜನ ಅಯ್ಯಪ್ಪಸ್ವಾಮಿ ಮಾಲಾಧಾರಿ ಗುರುಸ್ವಾಮಿಗಳು, ಮಾಲಾಧಾರಿಗಳು, ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಸದಸ್ಯರು, ಭಕ್ತರು ಇದ್ದರು. ಬಸವರಾಜ ಪಣದಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ರಾಜು ಪತ್ತಾರ ಕೊನೆಗೆ ವಂದಿಸಿದರು.
ಡ್ರಗ್ಸ್ ಮತ್ತು ಗಾಂಜಾ ಮುಕ್ತ ಘಟಪ್ರಭಾಕ್ಕಾಗಿ ಬುಧವಾರ ಅಭಿಯಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ