Belagavi NewsBelgaum NewsKannada NewsKarnataka NewsLatest

ಪ್ರವಾಹ, ಸಾಂಕ್ರಾಮಿಕ ರೋಗ ಮುನ್ನೆಚ್ಚರಿಕೆ ವಹಿಸಿ – ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇರುವುದು ಜನರ ಸೇವೆಗಾಗಿ. ಸಾರ್ವಜನಿಕರಿಗೆ ಯಾವುದೇ ಆರೋಗ್ಯ ಮತ್ತು ಪ್ರವಾಹ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಬೇಕು. ಡೆಂಗಿ, ಝಿಕಾ ಸೋಂಕು ಹರಡದಂತೆ ಮತ್ತು ಪ್ರವಾಹ ಪರಿಸ್ಥಿಯನ್ನು ಎದುರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕಿ ಶಶಿಕಲಾ ಜೊಲ್ಲೆ ತಾಲೂಕಾ ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ತಾಲೂಕಿನ ಎಲ್ಲ ಇಲಾಖೆಗಳ ಮುಖ್ಯ ಅಧಿಕಾರಿಗಳ ಜತೆ ಸಭೆಯನ್ನು ಜರುಗಿಸಿ ಅವರು ಮಾತನಾಡಿದರು. ’ತಾಲೂಕಿನ ಗ್ರಾಮೀಣ ಭಾಗದಲ್ಲಿ ಇಲ್ಲಿಯವರೆಗೆ ೧೫ ಡೆಂಗಿ ಸೊಂಕಿನ ಪ್ರಕರಣಗಳು ವರದಿಯಾಗಿವೆ. ಝೀಕಾ ಸೋಂಕಿನ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಈ ಸೊಂಕುಗಳು ಹರಡದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜನಪ್ರತಿನಿಧಿ ಮತ್ತು ಅಧಿಕಾರಿಗಳು ನಗರದ ಮತ್ತು ಗ್ರಾಮದ ಪ್ರತಿಯೊಂದು ವಾರ್ಡಗಳ ಸಮುದಾಯ ಭವನ ಅಥವಾ ಮಂದಿರಗಳಲ್ಲಿ ಜಾಗೃತಿ ಅಭಿಯಾನಗಳ ಸಭೆಗಳನ್ನು ಹಮ್ಮಿಕೊಳ್ಳಬೇಕು. ಘಂಟಾ ಗಾಡಿಗಳ ಧ್ವನಿವರ್ಧಕ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ಹೇಳಿದರು.

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ವ್ಯಾಪಕ ಮಳೆಯಾಗಿದೆ. ಕಾಳಮ್ಮವಾಡಿ ಮತ್ತು ಪಾಟಗಾಂವ ಜಲಾಶಯಗಳಿಗೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಈ ಜಲಾಶಯಗಳಿಂದ ವೇದಗಂಗಾ ಹಾಗೂ ದೂಧಗಂಗಾ ನದಿಗಳಿಗೆ ನೀರು ಹರಿಬಿಟ್ಟಿಲ್ಲ. ಆದರೆ ಇತರೆ ಹಳ್ಳಕೊಳ್ಳಗಳಿಂದ ಕಾರದಗಾ ಬಳಿ ೧೨೦೨೫ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಇದೇ ತರಹ ಮಳೆ ಮುಂದುವರೆದರೆ ಕೆಲವೇ ದಿನಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆಗಳಿವೆ. ಹಾಗಾಗಿ ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಹ ಎದುರಾದರೆ ಜನರಿಗೆ ತೊಂದರೆ ಆಗದಂತೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ತಾಲೂಕಾ ಆಡಳಿತಕ್ಕೆ ಸೂಚನೆ ನೀಡಿದ ಅವರು ಎಲ್ಲ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕೆಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಮುಜಫ್ಫರ್ ಬಳಿಗಾರ, ತಾ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ ಹುಕ್ಕೇರಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ಸುಕುಮಾರ ಭಾಗಾಯಿ, ಟಿಬಿಸಿಡಬ್ಲೂಓ ಅಧಿಕಾರಿ ವೀನಾ ಮನಗೂಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ನಾಯಿಕ, ಸಿಡಿಪಿಓ ಸುಪ್ರಿಯಾ ಜಡಗೆ, ನೀರಾವರಿ ಇಲಾಖೆ ಎಇಇ ಅಶೋಕ ಪೂಜಾರಿ, ಎನ್.ಎ. ಮಾನೆ, ಸಮಾಜ ಕಲ್ಯಾಣ ಅಧಿಕಾರಿ ಪ್ರವೀಣ ಪಾಟೀಲ, ಮಹಾತ್ಮಾ ಗಾಂಧಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸೀಮಾ ಗುಂಜಾಳ, ನರಸಭೆಯ ಪರಿಸರ ಅಧಿಕಾರಿ ಚಂದ್ರಕಾಂತ ಗುಡ್ಡುನ್ನವರ, ನಾಗೇಶ ಬಹಾದ್ದೂರಿ, ನಗರಭೆ ಸದಸ್ಯೆ ನೀತಾ ಬಾಗಡೆ, ರಾಜೇಂದ್ರ ಗುಂದೇಶಾ, ಕಾವೇರಿ ಮಿರ್ಜೆ, ಸುನೀಲ ಪಾಟೀಲ ತಾಲೂಕ ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button