ವೃತ್ತಿ ಜೀವನವನ್ನು ದೇವರ ಪೂಜೆಯಂತೆ ಮಾಡಿದರೆ ಅದೇ ಭಗವಂತನ ಆರಾಧನೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಂದೇಶ ಭಗವದ್ಗೀತೆ. ಮಾನವ ಸಂಘಜೀವಿ, ಸಮಾಜದಿಂದ ಎಲ್ಲವನ್ನೂ ಪಡೆದುಕೊಂಡಿದ್ದಾನೆ, ಎಲ್ಲರೂ ಪಡೆದುಕೊಳ್ಳುವವರೇ ವಿನಹ ಮರಳಿ ಕೊಡುವವರು ಯಾರೂ ಇಲ್ಲದಿದ್ದರೆ ಅಂಥ ಸಮಾಜ ಬಹಳ ಬೇಗ ಹಾಳಾಗುತ್ತದೆ. ಹಾಗಾಗಿ ಕರ್ತವ್ಯ ಪ್ರಜ್ಞೆ ಅಗತ್ಯ. ಇದನ್ನು ಜಾಗೃತಗೊಳಿಸುವುದು ಭಗವದ್ಗೀತೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಬೆಳಗಾವಿ ನಗರದ ಲಿಂಗರಾಜ ಕಾಲೇಜು ಮೈದಾನಲ್ಲಿ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಭಗವದ್ಗೀತಾ ಅಭಿಯಾನ ಹಾಗೂ ಜನಕಲ್ಯಾಣ ಟ್ರಸ್ಟ್ ಬೆಳಗಾವಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭಗವಂತನ ಆರಾಧನೆ ಮಾಡುತ್ತೇವೆ. ಆದರೆ ಗುಡಿ ಗೋಪುರಗಳಿಗೆ ಹೋಗಿ ಆರಾಧನೆ ಮಾಡಿದರೆ ಮಾತ್ರ ಸಾಲದು. ಸಮಾಜದ ಎಲ್ಲರ ಹೃದಯದೊಳಗೆ ಭಗವಂತ ನೆಲೆಸಿದ್ದಾನೆ. ಹಾಗಾಗಿ ಎಲ್ಲ ಕಡೆಯೂ ಭಗವಂತನ ಆರಾಧನೆ ಮಾಡಬೇಕು ಎಂದರು.
ಬದುಕಿಗೋಸ್ಕರ ಆಯ್ದುಕೊಂಡ ವೃತ್ತಿಯನ್ನಾದರೂ ದೇವರ ಪೂಜೆಯಂತೆ ಮಾಡಿದರೆ ಅದೇ ಭಗವಂತನ ಆರಾಧನೆ. ಈ ಎಚ್ಚರವಿದ್ದಾಗ ಕರ್ತವ್ಯದಲ್ಲಿ ಮೋಸ, ಅವ್ಯವಹಾರಕ್ಕೆ ಆಸ್ಪದವಿರುವುದಿಲ್ಲ. ವೃತ್ತಿ ಜೀವನದ ಸಾಧನೆ, ಆಧ್ಯಾತ್ಮಿಕ ಜೀವನದ ಸಾಧನೆ ಎರಡೂ ಒಂದೆ. ಈ ತತ್ವ ಮಕ್ಕಳಾಗಿದ್ದಾಗಲೇ ಅವರ ಕಿವಿಗೆ ಬಿದ್ದರೆ ಲೋಕ ಉಳಿಯುತ್ತದೆ. ಅಂಥ ಸಾಧನೆಯನ್ನು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾಡಿದ್ದಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ