
ಪ್ರಗತಿವಾಹಿನಿ ಸುದ್ದಿ: ರೀಲ್ಸ್ ಮಾಡುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಉತ್ತರ ಪ್ರದೇಶ ಮೂಲದ ಮೂವರು ಕಾರ್ಮಿಕರು ದುರ್ಮರಣ ಹೊಂದಿರುವ ಆಘಾತಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ಸಿದ್ದೆನಾಯಕನಹಳ್ಳಿ ರೈಲ್ವೆ ಹಳಿ ಬಳಿ ನಡೆದಿದೆ.
ಮೃತರನ್ನು ರಾಹುಲ್ (18), ಬಿಕೇಶ್ (20) ಮತ್ತು ಲಲನ್ (24) ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶ ಮೂಲದ ಯುವಕರು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದರು. ಸಂಜೆ ಕೆಲಸ ಮುಗಿಸಿಕೊಂಡು ರೈಲ್ವೆ ಹಳಿ ಬಳಿ ಬಂದ ಅವರು ರೀಲ್ಸ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ರೈಲು ಬರುತ್ತಿದ್ದುದು ಗಮನಕ್ಕೆ ಬಾರದೇ ಯುವಕರು ಡಿಕ್ಕಿಯಿಂದ ಮೃತಪಟ್ಟಿದ್ದಾರೆ.
ರೈಲಿನ ರಭಸದ ಹೊಡೆತಕ್ಕೆ ಮೂವರ ಮೃತದೇಹಗಳು ಹಳಿಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಹಳಿ ಮೇಲಿದ್ದ ಮೃತದೇಹಗಳನ್ನು ಕಂಡು ಸ್ಥಳಿಯರು ಈ ಬಗ್ಗೆ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಯಶವಂತಪುರ ರೈಲ್ವೆ ಪೊಲೀಸರು ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಿ ತನಿಖೆ ನಡೆಸಿದ್ದಾರೆ.