*ಒಂದು ವಾರದೊಳಗೆ ಭಾಗ್ಯಲಕ್ಷ್ಮೀ ಹಣ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ: ಸರ್ಕಾರಕ್ಕೆ ಯಡಿಯೂರಪ್ಪ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಶಿಗ್ಗಾವಿ ಸವಣೂರು ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಮಾಜಿ ಸಿಎಂಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಬಿಜೆಪಿ ನಾಯಕರು ಶಕ್ತಿ ಪ್ರದರ್ಶನ ಮಾಡಿದರು.
ಶಿಗ್ಗಾವಿಯ ಸಂತೆ ಮೈದಾನದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಯನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ರಾಜ್ಯ ಸರ್ಕಾರಕ್ಕೆ ಪಾಠ ಕಲಿಸುವಂತೆ ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಒಂದು ಕಾಲದಲ್ಲಿ ಹಣ ಬಲ, ಅಧಿಕಾರದ ಬಲ, ಜಾತಿಯ ವಿಷ ಬೀಜ ಬಿತ್ತಿ ಚುನಾವಣೆ ಗೆಲ್ಲುತ್ತಿದ್ದರು. ಈಗ ಕಾಲ ಬದಲಾಗಿದೆ. ಇದು ಮೋದಿ ಕಾಲ. ಈ ಉಪ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಗೆಲ್ಲುತ್ತದೆ. ಸಿದ್ದರಾಮಯ್ಯ ನೀವು ಯಾವ ಕ್ಷೇತ್ರ ಗೆಲ್ಲುತ್ತೀರಿ ಹೇಳಿ ಎಂದು ಸವಾಲು ಹಾಕಿದರು.
ಭಾಗ್ಯಲಕ್ಷ್ಮೀಗಾಗಿ ಹೋರಾಟ
ನಾನು ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದಿದ್ದೆ. ಅದು ಮೆಚ್ಯುರಿಟಿ ಆಗಿದೆ. ಈ ಪಾಪರ್ ಸರ್ಕಾರ ಆ ಹಣ ಬಿಡುಗಡೆ ಮಾಡಿಲ್ಲ. ಈ ಸರ್ಕಾರ. ದಿವಾಳಿಯಾಗಿದೆ. ಒಂದು ವಾರದಲ್ಲಿ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಹಣ ಬಿಡುಗಡೆ ಮಾಡದಿದ್ದರೆ ರಾಜ್ಯಧ್ಯಂತ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯಾದ್ಯಂತ ಒಂದೂ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಅಬಕಾರಿ ಇಲಾಖೆಯಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ವಾಗ್ದಾಳಿ ನಡೆಸಿದರು.
50 ಸಾವಿರ ಅಂತರದಿಂದ ಗೆಲುವು
ಶಿಗ್ಗಾವಿ ಸವಣೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಅದರಲ್ಲಿ ಒಂದು ಮತಕಡಿಮೆಯಾದರೂ ಅದು ಸೋಲೆಂದು ನಾನು ಭಾವಿಸುತ್ತೇನೆ. ಇಲ್ಲಿ ಸೇರಿರುವ ಜನಸ್ತೋಮ ಎರಡು ದಿನ ಮನೆಮನೆಗೆ ತೆರಳಿ ಯಾರು ಕಾಂಗ್ರೆಸ್ ಬಗ್ಗೆ ಯೋಚನೆ ಮಾಡುತ್ತಿದ್ದಾರೋ ಅವರಿಗೆ ಮನವರಿಕೆ ಮಾಡಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಗೆ ಮತ ನೀಡುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈ ಕ್ಷೇತ್ರದಲ್ಲಿ ನಿಮ್ಮ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುತ್ತಾರೆ. ಇಲ್ಲಿ ಜನಸ್ತೋಮವೇ ಸಾಕ್ಷಿ. ನೀವು ಇಲ್ಲಿ ಬಂದು ಯಾಕೆ ಮರ್ಯಾದೆ ಕಳೆದುಕೊಳ್ಳುತ್ತೀರಿ ಎಂದರು.
ಈ ಕ್ಷೇತ್ರದ ಅಭಿವೃದ್ದಿ ಮುಂದುವರೆಬೇಕೆಂದರೆ ಯುವ ನಾಯಕ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಯನ್ನು ಐವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸುವಂತೆ ಸಮಾವೇಶದಲ್ಲಿ ನೆರೆದಿದ್ದ ಜನಸ್ತೋಮಕ್ಕೆ ಮನವಿ ಮಾಡಿದರು.
ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಚಿವರಾದ ರಾಜುಗೌಡ, ಸಿ.ಸಿ. ಪಾಟೀಲ್, ಬೈರತಿ ಬಸಬರಾಜ, ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ