
ಟೆಂಡರ್ ಗೂ ಮಂತ್ರಿಗಳಿಗೂ ಏನು ಸಂಬಂಧವೆಂದು ಆಕ್ರೋಶ
ಪ್ರಗತಿವಾಹಿನಿ ಸುದ್ದಿ: ಗುತ್ತಿಗೆದಾರರ ಸಂಘದ ಮಂಜುನಾಥ್ ಅವರು ಮಾಡಿರುವ ಆರೋಪಕ್ಕೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆದಾರರು ತಮ್ಮ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳನ್ನು ನೀಡದೇ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾಮಗಾರಿಯ ಗುತ್ತಿಗೆಯನ್ನು ನೀಡುವ ವಿಚಾರದಲ್ಲಿ ಸಚಿವರ ಹಸ್ತಕ್ಷೇಪ ಇರುವುದಿಲ್ಲ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತದೆ ಎಂದು ಸುರೇಶ್ ಪ್ರತಿಕ್ರಿಯೆ ನೀಡಿದರು.
ಟೆಂಡರ್ ಕೊಡುವುದಕ್ಕೂ ಮಂತ್ರಿಗಳಿಗೂ ಏನು ಸಂಬಂಧ? ಪಾರದರ್ಶಕ ಕಾಯ್ದೆಯಡಿಯೇ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ. ಅರ್ಹ ಗುತ್ತಿಗೆದಾರರನ್ನು ಅಧಿಕಾರಿಗಳ ತಂಡ ಅಂತಿಮಗೊಳಿಸುತ್ತದೆ ಎಂಬುದು ಸೇರಿದಂತೆ ಇಡೀ ಟೆಂಡರ್ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ಗುತ್ತಿಗೆದಾರರ ಸಂಘದ ಮಂಜುನಾಥ್ ಅವರಿಗೂ ತಿಳಿದಿದೆ. ಆದಾಗ್ಯೂ, ಪದೇಪದೆ, ಮಂತ್ರಿಗಳ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ದಿನಂಪ್ರತಿ ಇದೇ ರೀತಿ ಆರೋಪಗಳನ್ನು ಮಾಡುತ್ತಾ ಬಂದರೆ ಇಲಾಖೆಗಳನ್ನು ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ಬೈರತಿ ಸುರೇಶ್ ಅವರು, ಈ ಪ್ರಕ್ರಿಯೆಗಳಲ್ಲಿ ಯಾರು ಭಾಗಿಯಾಗಿದ್ದಾರೆ ಮತ್ತು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದಾದರೂ ಸಾಕ್ಷ್ಯಾಧಾರಗಳಿದ್ದರೆ ಒದಗಿಸಲಿ ಎಂದು ಮಂಜುನಾಥ್ ಅವರಿಗೆ ಸವಾಲು ಹಾಕಿದರು.
ವಿನಾಕಾರಣ ಆರೋಪಗಳನ್ನು ಮಾಡುವ ಮೂಲಕ ಗಾಳಿಯಲ್ಲಿ ಗುಂಡುಹಾರಿಸಿ ಸಾರ್ವಜನಿಕ ಜೀವನದಲ್ಲಿರುವವರ ತೇಜೋವಧೆ ಮಾಡುವುದು ಬೇಡ ಎಂದೂ ಸುರೇಶ್ ಕಿವಿಮಾತು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡುವ ಬಗ್ಗೆ ಮಂಜುನಾಥ್ ಅವರು ನನ್ನ ಬಳಿ ಮನವಿ ಮಾಡಿದ್ದರು. ಹಣಕಾಸು ಇಲಾಖೆ ಅನುಮೋದನೆ ಪಡೆದು ಹಂತಹಂತವಾಗಿ ಬಾಕಿ ಇರುವ 200 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡುವುದಾಗಿ ಬೈರತಿ ಸುರೇಶ್ ತಿಳಿಸಿದರು.

