Latest

45 ವರ್ಷದ ಇತಿಹಾಸದಲ್ಲಿ ಗರಿಷ್ಠ ನಿರುದ್ಯೋಗ ಹೆಚ್ಚಾಗಿದೆ – ಬಳ್ಳಾರಿ ಸಮಾವೇಶದಲ್ಲಿ ರಾಹುಲ್ ಗಾಂಧಿ

ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆದಿದ್ದು, ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕರ್ನಾಟಕ ಜನತೆಗೆ ಧನ್ಯವಾದ ತಿಳಿಸಿದ್ದಾರೆ.

ದೇಶದ ಜನತೆಯನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಐಕ್ಯತಾ ಯಾತ್ರೆ ನಡೆಸುತ್ತಿದೆ. ಬಿಜೆಪಿ, ಆರ್ ಎಸ್ ಎಸ್ ವಿಚಾರಧಾರೆಗಳ ವಿರುದ್ಧ ಯಾತ್ರೆ ಕೈಗೊಳ್ಳಲಾಗಿದೆ. ಧರ್ಮ, ಜಾತಿ ಹೆಸರಲ್ಲಿ ವಿಷಬೀಜ ಬಿತ್ತಿ ಬಿಜೆಪಿ ಧ್ವೇಷದ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ದೇಶದ ಉದ್ದಗಲಕ್ಕೂ ಪಾದಯಾತ್ರೆ ನಡೆಸುತ್ತಿರುವುದಾಗಿ ತಿಳಿಸಿದರು.

ಪಾದಯಾತ್ರೆಯಲ್ಲಿ ಜನಸಾಮಾನ್ಯರ, ರೈತರ, ಯುವಕರ, ಮಹಿಳೆಯರ ಸಮಸ್ಯೆಗಳನ್ನು ಆಲಿಸಿದ್ದೇನೆ. ಬೆಲೆ ಏರಿಕೆ, ಜಿಎಸ್ ಟಿ, ನಿರುದ್ಯೋಗದಿಂದಾಗಿ ಜನರು ಕಂಗೆಟ್ಟಿದ್ದಾರೆ. ರಾಜ್ಯದಲ್ಲಿ 40% ಕಮಿಷನ್ ಸರ್ಕಾರವಿದೆ. ಪಿಎಸ್ ಐ ನೇಮಕಾತಿ ಸೇರಿದಂತೆ ಹಲವು ಹಗರಣಗಳು ನಡೆದಿವೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಾಲು ಸಾಲು ಹಗರಣಗಳು ನಡೆಯುತ್ತಿದ್ದರೂ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಯಾವುದೇ ತನಿಖೆಯನ್ನು ನಡೆಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಎಸ್ ಸಿ, ಎಸ್ ಟಿ ಮೀಸಲಾತಿ ಹೆಚ್ಚಳ ಪ್ರಸ್ತಾಪ ಮಾಡಿದ್ದು ಕಾಂಗ್ರೆಸ್. ನ್ಯಾ.ನಾಗಮೋಹನದಾಸ್ ನೇತ್ರುತ್ವದ ಆಯೋಗ ರಚನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದು 3 ವರ್ಷ ಕಳೆದಿದೆ. ಮೀಸಲಾತಿ ಹೆಚ್ಚಳ ಮಾಡಲು ಇಷ್ಟು ವರ್ಷ ವಿಳಂಬ ಮಾಡಿದ್ದೇಕೆ? ಎಂದು ಪ್ರಶ್ನಿಸಿದರು.

ನನ್ನ ಅಜ್ಜಿ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಕರ್ನಾಟಕ. ಚಿಕ್ಕಮಗಳೂರಿನ ಜನರು ಇಂದಿರಾಗಾಂಧಿ ಅವರನ್ನು ಗೆಲ್ಲಿಸಿದರು. ನನ್ನ ತಾಯಿ ಸೋನಿಯಾ ಗಾಂಧಿ ಅವರನ್ನು ಬಳ್ಳಾರಿ ಜನರು ಗೆಲ್ಲಿಸಿದರು. ಕರ್ನಾಟಕ ಜನರ ಸಹಾಯವನ್ನು ನಾವೆಂದಿಗೂ ಮರೆಯಲ್ಲ. ಕರ್ನಾಟಕದ ಜನರಿಗೆ ಧನ್ಯವಾದಗಳು ಎಂದು ಹೇಳಿದರು.

 
  *ಭಾರತ ಜೋಡೋ ಯಾತ್ರೆ ಭಾಗವಾಗಿ ಬಳ್ಳಾರಿಯಲ್ಲಿ ಶನಿವಾರ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರ ಮಾತುಗಳು:*
*ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ:*
ಕಳೆದ ಕೆಲವು ದಿನಗಳಿಂದ ಭಾರತ ಜೋಡೋ ಯಾತ್ರೆ ಮೂಲಕ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಾವು ಸಾಗುತ್ತಿದ್ದೇವೆ. 3500 ಕಿ.ಮೀ ಪ್ರಯಾಣ ಇದಾಗಿದ್ದು, ಕನ್ಯಾಕುಮಾರಿಯಿಂದ ಆರಂಭವಾಗಿ ಕೇರಳ ಮಾರ್ಗವಾಗಿ, ಕರ್ನಾಟಕಕ್ಕೆ ತಲುಪಿದೆ. ಆರಂಭದಲ್ಲಿ 3500 ಕಿ.ಮೀ ಸಾಗುವುದು ಸುಲಭದ ಕೆಲಸವಲ್ಲ ಎಂದು ನಾವು ಭಾವಿಸಿದ್ದೆವು. ಆದರೆ ನಾವು ಪ್ರಯಾಣ ಆರಂಭಿಸಿ ದಿನ ಕಳೆದಂತೆ ನಂತರ ಹೆಜ್ಜೆ ಹಾಕುವುದು ಸುಲಭವಾಯಿತು.
ಈ ಯಾತ್ರೆಯಲ್ಲಿ ನಾವು ಬಳಲಿದಾಗ ಯಾವುದಾದರೂ ಒಂದು ಶಕ್ತಿ ನಮಗೆ ಪ್ರೇರಣೆ ನೀಡಿ ಮುಂದೆ ಸಾಗುವಂತೆ ಮಾಡಿತ್ತು. ಸಣ್ಣ ಮಕ್ಕಳು, ವಿಕಲಚೇತನರು, ವೃದ್ಧರು, ಬಡವರ ಮಾತುಗಳಿಂದ ನಮಗೆ ಪ್ರೇರಣೆ ನೀಡುತ್ತಿತ್ತು. ಈ ಯಾತ್ರೆ ನಾವು ಯಾಕೆ ಪ್ರಾರಂಭಿಸಿದ್ದೇವೆ? ಇದರ ಉದ್ದೇಶವೇನು? ಇದರಿಂದ ನಮದೆ ಸಿಗುತ್ತಿರುವ ನೆರವು ಯಾಕೆ ಸಿಗುತ್ತಿದೆ? ನಮಗೆ ಪ್ರೇರಣೆ ನೀಡುತ್ತಿರುವ ಶಕ್ತಿ ಯಾರಿಂದ ಸಿಗುತ್ತಿದೆ? ಯಾಕೆ ಸಿಗುತ್ತಿದೆ ಎಂಬ ಪ್ರಶ್ನೆಗಳು ಹುಟ್ಟುತ್ತವೆ.
ಈ ಯಾತ್ರೆಗೆ ನಾವು ಭಾರತ ಜೋಡೋ ಯಾತ್ರೆ ಎಂದು ಹೆಸರಿಟ್ಟಿದ್ದೇವೆ. ಬಿಜೆಪಿ ಆರ್ ಎಸ್ಎಸ್ ವಿಚಾರಧಾರೆ ದ್ವೇಷ, ಹಿಂಸಾಚಾರದ ವಿಚಾರವಾಗಿದ್ದು ಇವುಗಳಿಂದ ದೇಶ ವಿಭಜನೆಯಾಗುತ್ತಿವೆ. ಹಿಂದೂಸ್ಥಾನದ ಮೇಲೆ ಇದೊಂದು ದಾಳಿ. ಇದು ದೇಶಭಕ್ತಿಯಲ್ಲ, ದೇಶ ವಿರೋಧಿ ಕೆಲಸವಾಗಿದೆ. ಕಳೆದೊಂದು ತಿಗಳಿಂದ ಯಾತ್ರೆ ಮಾಡುತ್ತಿದ್ದು, ಬೇರೆ ಬೇರೆ ಧರ್ಮ, ಜಾತಿ, ವೃದ್ಧರು, ಯುವಕರು, ಮಕ್ಕಳು, ಮಹಿಳೆಯರು ಒಟ್ಟಾಗಿ ಸೇರಿ ಹೆಜ್ಜೆ ಹಾಕುತ್ತಿದ್ದಾರೆ. ಈ ಯಾತ್ರೆಯಲ್ಲಿ ದ್ವೇಷ, ಹಿಂಸೆ, ಕಾಣುತ್ತಿಲ್ಲ.
ದಾರಿಯಲ್ಲಿ ಯಾರಾದರೂ ಬಿದ್ದರೆ ಉಳಿದ ಎಲ್ಲರೂ ಅವರಿಗೆ ಸಹಾಯ ಮಾಡುತ್ತಾರೆ. ಸಹಾಯ ಮಾಡುವಾಗ ಲಿಂಗ, ಜಾತಿ, ಧರ್ಮ, ಭಾಷೆಯನ್ನು ಹುಡುಕುವುದಿಲ್ಲ. ಈ ವಿಚಾರಧಾರೆ ಕೇವಲ ಯಾತ್ರೆಯ ವಿಚಾರಧಾರೆಯಲ್ಲ. ಇದು ಕರ್ನಾಟಕ ರಾಜ್ಯ ಹಾಗೂ ದೇಶದ ವಿಚಾರಧಾರೆಯಾಗಿದೆ.
ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರುಗಳು ಇದೇ ವಿಚಾರಧಾರೆಯನ್ನು ನಮಗೆ ತಿಳಿಸಿದ್ದರು. ಅವರು ಹೇಳಿದ ಮಾತುಗಳು ಕರ್ನಾಟಕದಲ್ಲಿ ಹೆಜ್ಜೆ ಹಾಕುವಾಗ ಕಾಣಿಸಿದೆ. ಇದನ್ನು ಕನ್ನಡಿಗರ ರಕ್ತದಲ್ಲಿದ್ದು, ಇದನ್ನು ಕಸಿಯಲು ಸಾಧ್ಯವಿಲ್ಲ. ನಾವು ಸಹೋದರತ್ವದ ಜತೆಗೆ ಬೇರೆ ಉದ್ದೇಶವೂ ಇದೆ. ಈ ಯಾತ್ರೆಯಲ್ಲಿ ವಿದ್ಯಾರ್ಥಿಗಳು, ಯುವಕರನ್ನು ಭೇಟಿಯಾಗಿದ್ದೆ. ಆ ಸಮಯದಲ್ಲಿ ನಾನು ಅವರಿಗೆ ಕೇಲಿದೆ ನೀವು ವ್ಯಾಸಂಗ ಮಾಡುತ್ತಿದ್ದು, ಮುಂದೆ ಏನು ಮಾಡುತ್ತೀರಿ ಎಂದು ಕೇಳಿದೆ. ಆಗ ಅವರು ಎಂಜಿನಿಯರ್, ವೈದ್ಯರು, ಪೊಲೀಸ್ ಇಲಾಖೆ ಸೇರುತ್ತೇನೆ ಎಂದರು. ನಂತರ ನಾನು ಅವರಿಗೆ ಮತ್ತೆ ಕೇಳಿದೆ. ನಿಮ್ಮ ವಿದ್ಯಾಭ್ಯಾಸ ಮುಗಿದ ನಂತರ ನಿಮಗೆ ಉದ್ಯೋಗ ಸಿಗುವ ವಿಶ್ವಾಸ ಇದೆಯಾ ಎಂದು ಕೇಳಿದೆ. ಆಗ ಅವರು ನಮಗೆ ಉದ್ಯೋಗ ಸಿಗುವ ನಂಬಿಕೆ ಇಲ್ಲ ಎಂದರು.
ಇಂದು ದೇಶದಲ್ಲಿ 45 ವರ್ಷದ ಇತಿಹಾಸದಲ್ಲಿ ಗರಿಷ್ಠ ನಿರುದ್ಯೋಗ ಹೆಚ್ಚಾಗಿದೆ. ಪ್ರಧಾನಮಂತ್ರಿಗಳು ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಎಲ್ಲಿ ಹೋದವು ಆ ಉದ್ಯೋಗಗಳು? ಬದಲಿಗೆ ಇದ್ದ ಉದ್ಯೋಗಗಳು ನಾಶವಾಗಿವೆ. ರಾಜ್ಯದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇರುವುದೇಕೆ? ಪ್ರಧಾನಮಂತ್ರಿಗಳ ನೋಟು ರದ್ದತಿ, ಜಿಎಸ್ ಟಿ, ಕೋವಿಡ್ ಸಮಯದಲ್ಲಿನ ನೀತಿಯಿಂದ 12.5 ಕೋಟಿ ಮಂದಿ ನಿರುದ್ಯೋಗಿಗಳಾಗಿದ್ದಾರೆ.
ರಾಜ್ಯದಲ್ಲಿ ನೀವು ಪೊಲೀಸ್ ಇಲಾಖೆ ಸೇರಬೇಕಾದರೆ, 80 ಲಕ್ಷ ಲಂಚ ನೀಡಬೇಕು. ಹಣವಿದ್ದರೆ ಸರ್ಕಾರಿ ಹುದ್ದೆ ಖರೀದಿಸಬಹುದು. ಹಣವಿಲ್ಲದಿದ್ದರೆ ಜೀವನಪೂರ್ತಿ ನಿರುದ್ಯೋಗಿಗಳಾಗಿರುತ್ತೀರಿ. ಸಹಕಾರಿ ಬ್ಯಾಂಕುಗಳಲ್ಲಿ, ಸಹಯಕ ಪ್ರಾದ್ಯಾಪಕ ಹುದ್ದೆ ನೇಮಕಾತಿಯಲ್ಲಿ ಹಗರಣ ನಡೆಯುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂದು ಬಿರುದು ನೀಡಲಾಗಿದೆ. ಏನೇ ಕೆಲಸ ಆಗಬೇಕಾದರೂ 40% ಕಮಿಷನ್ ನೀಡಬೇಕು.
ಈ ಯಾತ್ರೆ ನಿರುದ್ಯೋಗ ವಿರುದ್ಧ ಧ್ವನಿ ಎತ್ತಲು ಆರಂಭಿಸಲಾಗಿದೆ. ನಿರುದ್ಯೋಗ, ದ್ವೇಷದ ಜತೆಗೆ ಬೆಲೆ ಏರಿಕೆ ಮೂಲಕ ನಿಮ್ಮ ಬದುಕು ದುಸ್ಥರವಾಗಿದೆ. ಪದಾರ್ಥಗಳ ಬೆಲೆ ಗಗನಕ್ಕೇರಿದ್ದು, ಇದು ನಿಲ್ಲುವುದಿಲ್ಲ. ಪ್ರಧಾನಮಂತ್ರಿಗಳು ಅಧಿಕಾರಕ್ಕೆ ಬರುವ ಮುನ್ನ ತಮ್ಮ ಭಾಷಣದಲ್ಲಿ ಅಡುಗೆ ಅನಿಲದ ಸಿಲಿಂಡರ್ 400 ರೂ. ಇದೆ. ಇದರಿಂದ ದೇಶದ ಮಹಿಳೆಯರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದ್ದರು. ಇಂದು ಅದೇ ಸಿಲಿಂಡರ್ 1000 ರೂ. ಆಗಿದೆ. ಈಗ ಪ್ರಧಾನಿಗಳು ನಮ್ಮ ಮಹಿಳೆಯರು ಏನು ಮಾಡಬೇಕು ಎಂದು ಹೇಳುತ್ತಿಲ್ಲ. ಇಂಧನ ತೈಲ ಬೆಲೆ ಐತಿಹಾಸಿಕ ಏರಿಕೆ ಆಗಿದೆ. ನಿರುದ್ಯೋಗ ಮತ್ತು ಬೆಲೆ ಏರಿಕೆ ಮಧ್ಯೆ ಸಿಕ್ಕಿ ನರಳುವಂತಾಗಿದೆ.
ನನ್ನ ಯಾತ್ರೆಯಲ್ಲಿ ರೈತರನ್ನು ಭೇಟಿಯಾಗುತ್ತಿದ್ದು, ಎಲ್ಲ ರೈತರ ಪರಿಸ್ಥಿತಿ ಕೇಳುತ್ತಿದ್ದೇನೆ. ಅವರು ಕೃಷಿಗೆ ಎಷ್ಟು ಹಣ ಹಾಕುತ್ತಾರೆ, ಅದರಿಂದ ಎಷ್ಟು ಗಳಿಸುತ್ತಾರೆ ಎಂದು ಕೇಳುತ್ತೇನೆ. ಆಗ ಅವರು ಆರ್ಥಿಕ ಸಹಾಯ ವಿಲ್ಲದೆ ರೈತರು ಬದುಕಲು ಸಾಧ್ಯವಿಲ್ಲ ಎಂಬ ಉತ್ತರ ನೀಡುತ್ತಾರೆ. ರೈತರಿಗೆ ನೆರವಾಗುವ ಬದಲು, ದೇಶದ ಇತಿಹಾಸದಲ್ಲಿ ರೈತ ಶೇ.5 ರಷ್ಟು ರಸಗೊಬ್ಬರಕ್ಕೆ, ಶೇ.12ರಷ್ಟು ಟ್ರ್ಯಾಕ್ಟರ್ಗಳ ಮೇಲೆ, ಶೇ.18ರಷ್ಟು ತೆರಿಗೆಯನ್ನು ಕೀಟನಾಶಕಗಳಿಗೆ ನೀಡಬೇಕಿದೆ. ರೈತರು ತಮಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದಿದ್ದು, ಇದು ರಾಜ್ಯ ಹಾಗೂ ದೇಶದ ರೈತರು ಎದುರಿಸುತ್ತಿರುವ ಸಮಸ್ಯೆ.
ಇನ್ನು ಈ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ವಿರೋಧಿಯಾಗಿದೆ. ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಮಾಣ ಶೇ.50ರಷ್ಟು ಹೆಚ್ಚಾಗಿದೆ. ಈ ವರ್ಗದ ಜನರ ಅಭಿವೃದ್ಧಿಗೆ ಸಿಗಬೇಕಿದ್ದ ಸುಮಾರು 8 ಸಾವಿರ ಕೋಟಿ ಹಣವನ್ನು ಬೇರೆ ಕಾರ್ಯಕ್ಕೆ ವರ್ಗಾಯಿಸಲಾಗಿದೆ.
ನಾವು ಅಧಿಕಾರದಲ್ಲಿದ್ದಾಗ ನಾಗಮೋಹನ್ ದಾಸ್ ಅವರ ಸಮಿತಿ ರಚಿಸಿದ್ದೇವೆ. ಆ ಸಮಿತಿಯು ಎಸ್ ಟಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.7.5ರಷ್ಟು ಏರಿಕೆ ಮಾಡಲು, ಎಸ್ ಸಿ ಸಮುದಾಯದ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಏರಿಕೆ ಮಾಡಲು ಶಿಫಾರಸ್ಸು ನೀಡಿತ್ತು. ಬಿಜೆಪಿ ಸರ್ಕಾರ ಇದನ್ನು ಜಾರಿಗೊಳಿಸಿ ಅನುಷ್ಠಾನಕ್ಕೆ ತರಲು ಮೀನಾಮೇಷ ಎಣಿಸುತ್ತಿರುವುದೇಕೆ. ರಾಜ್ಯ ಸರ್ಕಾರ ಸಬೂಬು ಹೇಳುವುದನ್ನು ಬಿಟ್ಟು ಕೂಡಲೇ ಇದನ್ನು ಜಾರಿಗೆ ತರಬೇಕು.
ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಆರ್ಟಿಕಲ್ 371 ವಿಶೇಷ ಸ್ಥಾನಮಾನ ನೀಡಲು ನಿರಾಕರಿಸಿತ್ತು. ವಾಜಪೇಯಿ ಹಾಗೂ ಅಡ್ವಾಣಿ ಅವರು ನಿರಾಕಸಿದ್ದರು. ನಿಮ್ಮ ಸಂಕಷ್ಟ ಅರಿತು ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ನೀಡಿದ್ದೆವು. ಇದರ ಪರಿಣಾಮವಾಗಿ ಈ ಭಾಗದ ಸಾವಿರಾರು ಮಂದಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಅವಕಾಶ ಸಿಕ್ಕಿದ್ದು, ಸಾವಿರಾರು ಕೋಟಿ ವಿಶೇಷ ಅನುದಾನ ಸಿಕ್ಕಿದೆ.
ಅಂತಿಮವಾಗಿ ನನ್ನ ಕುಟುಂಬಕ್ಕೂ ಬಳ್ಳಾರಿ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ ಎಂದು ಹೇಳಲು ಬಯಸುತ್ತೇನೆ. ನನ್ನ ತಾಯಿ ಸೋನಿಯಾ ಗಾಂಧಿ ಅವರು ಇಲ್ಲಿಂದ ಸ್ಪರ್ಧಿಸಿ ಇಲ್ಲಿನ ಜನರ ಬೆಂಬಲದೊಂದಿಗೆ, ನನ್ನ ಅಜ್ಜಿ ಇಂದಿರಾ ಗಾಂಧಿ ಅವರು ಚಿಕ್ಕಮಗಳೂರಿನಿಂದ ಗೆದ್ದು ಬಂದಿದ್ದರು. ನಾನಿದನ್ನು ಮರೆಯಲು ಸಾಧ್ಯವಿಲ್ಲ. ರಾಜ್ಯದಲ್ಲಿ ನನ್ನ ಜತೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಬಳ್ಳಾರಿಯ ಬಿಸಿಲಿನ ಪ್ರಭಾವ ಅನುಭಿಸಿದ್ದೇನೆ. ಬಳ್ಳಾರಿಯ ರೈತರು, ಕಾರ್ಮಿಕರು ಬೇಸಿಗೆ ಸಮಯದಲ್ಲಿ ಎಷ್ಟು ಸಮಸ್ಯೆ ಅನುಭವಿಸುತ್ತಾರೆ ಎಂದು ಅರಿತಿದ್ದೇನೆ. ಬಳ್ಳಾರಿಯ ರೈತರು, ಕಾರ್ಮಿಕರು, ಸಣ್ಣ ಉದ್ದಿಮೆದಾರರಿಗೆ ಒಂದು ಭರವಸೆ ನೀಡಲು ಬಯಸುತ್ತೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನಮಗೆ ಎಲ್ಲ ರೀತಿಯ ನೆರವು ನೀಡುತ್ತೇನೆ.
ನಿಮ್ಮ ಪ್ರೀತಿ ವಿಶ್ವಾಸಕ್ಕೆ ಧನ್ಯವಾದ ಅರ್ಪಿಸುತ್ತೇನೆ.
*ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್:*
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಪಕ್ಷದ ಮತ್ತೊಂದು ಇತಿಹಾಸಕ್ಕೆ ನಿವೆಲ್ಲರೂ ಹಾಕುತ್ತಿರುವ ಹೆಜ್ಜೆಯೇ ಸಾಕ್ಷಿ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ರಾಜ್ಯದ ನಾಯಕರೆಲ್ಲರೂ ಕಷ್ಟಕಾಲದಲ್ಲಿ ಪಕ್ಷದ ಅಧ್ಯಕ್ಷ ಜವಾಬ್ದಾರಿ ಕೊಟ್ಟರು. ನಾನು ಈ ಜವಾಬ್ದಾರಿ ವಹಿಸಿಕೊಂಡ ನಂತರ ನಾನೂ ನಿದ್ರೆ ಮಾಡಿಲ್ಲ. ನಿಮ್ಮನ್ನೂ ನಿದ್ರೆ ಮಾಡಲು ಬಿಟ್ಟಿಲ್ಲ. ಕಾರಣ, ಇಡೀ ದೇಶ ಈ ರಾಜ್ಯವನ್ನು ನೋಡುತ್ತಿದೆ. ಸೋನಿಯಾ ಗಾಂಧಿ ಅವರು ಮಹತ್ವದ ಜವಾಬ್ದಾರಿ ಕೊಟ್ಟಿದ್ದಾರೆ.
ಮೇಕೆದಾಟು, ಸ್ವಾತಂತ್ರ್ಯ ನಡಿಗೆ, ಭಾರತ ಐಕ್ಯತಾ ಯಾತ್ರೆಯಲ್ಲಿ ನೀವು ಹೆಜ್ಜೆ ಹಾಕುತ್ತಿದ್ದೀರಿ. ಕಳೆದ ಎರಡು ವರ್ಷಗಳಿಂದ ನನಗೆ ಸಹಕಾರ ನೀಡಿದ ಪಕ್ಷದ ನಾಯಕರು, ಕಾರ್ಯಕರ್ತರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು, ತಂದೆ ತಾಯಂದಿರಿಗೆ ಸಾಷ್ಟಾಂಗ ನಮನ ಸಲ್ಲಿಸುತ್ತೇನೆ.
ಈ ಐತಿಹಾಸಿಕ ಯಾತ್ರೆಗಾಗಿ ನಮ್ಮ ತಾಯಿ ಸಮಾನರಾದ ಸೋನಿಯಾ ಗಾಂಧಿ ಅವರು ಮೂರು ದಿನಗಳ ಕಾಲ ರಾಜ್ಯಕ್ಕೆ ಬಂದು ದಸರಾ ಹಬ್ಬವನ್ನು ಕುಗ್ರಾಮದ ದೇವಾಲಯದಲ್ಲಿ ಆಚರಿಸಿ, ಅರ್ಧ ದಿನಗಳ ಕಾಲ ಪಾದಯಾತ್ರೆಯಲ್ಲಿ ಭಾಗವಹಿಸಿ ನಮಗೆ ದುರ್ಗಾದೇವಿಯಂತೆ ಆಶೀರ್ವಾದ ಮಾಡಿದ್ದಾರೆ.
ಇಂದು ರಾಹುಲ್ ಗಾಂಧಿ ಅವರು ಈ ಯಾತ್ರೆ ನೇತೃತ್ವ ವಹಿಸಿದ್ದಾರೆ. ಸೋನಿಯಾ ಗಾಂಧಿ ಅವರ ಮುಖಂಡತ್ವದಲ್ಲಿ ಉದಯಪುರದ ಸಭೆಯಲ್ಲಿ ಈ ಯಾತ್ರೆ ಘೋಷಣೆ ಮಾಡಿದ್ದೆವು. ಅದು ಎಂತಹ ಗಳಿಗೆ ಎಂದರೆ, ಬುದ್ಧ ಬಸವನು ಮನೆ ಬಿಟ್ಟ ಗಳಿಗೆಯಲ್ಲಿ, ಏಸುಕ್ರಿಸ್ತನು ಶಿಲುಬೆಗೆ ಏರಿದ ಗಳಿಗೆಯಲ್ಲಿ, ಪೈಗಂಬರ್ ದಿವ್ಯವಾಣಿ ಕೇಳಿದ ಗಳಿಗೆಯಲ್ಲಿ, ಭೀಮಾಬಾಯಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಜನ್ಮಕೊಟ್ಟ ಗಳಿಗೆಯಲ್ಲಿ, ಮಹಾತ್ಮ ಗಾಂಧಿ ಕಾಂಗ್ರೆಸ್ ನಾಯಕತ್ವ ವಹಿಸಿದ ಗಳಿಗೆಯಲ್ಲಿ, ಸೋನಿಯಾ ಗಾಂಧಿ ಅವರು ದೇಶದ ಪ್ರಧಾನಮಂತ್ರಿ ಸ್ಥಾನ ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರಿಗೆ ನೀಡಿದ ಗಳಿಗೆಯಲ್ಲಿ ಈ ಯಾತ್ರೆಯನ್ನು ಘೋಷಿಸಿದ್ದಾರೆ.
ಈ ಯಾತ್ರೆಯ ಸಂಭ್ರಮ, ಯಶಸ್ಸು, ಅಮೋಘವಾಗಿದೆ. ರಾಜ್ಯದ ಪಾಲಿಗೆ ಇದೊಂದು ಸುವರ್ಣ ಅವಕಾಶ. ಈಗಾಗಲೇ 1000 ಕಿ.ಮೀ ಹೆಜ್ಜೆ ಹಾಕಲಾಗಿದ್ದು, ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಗೆಲ್ಲಲು ಅವಕಾಶ ಸೃಷ್ಟಿಯಾಗುತ್ತಿದೆ.
ಇದು ಕೇವಲ ಪಾದಯಾತ್ರೆಯಲ್ಲ, ಇದೊಂದು ಆಂದೋಲನ, ಕ್ರಾಂತಿ. ಇದು ರಾಹುಲ್ ಗಾಂಧಿ ಅವರು ಪ್ರಧಾನಿ ಆಗಲು ಮಾಡುತ್ತಿರುವ ಪಾದಯಾತ್ರೆ ಅಲ್ಲ. ಇದು ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲು ಮಾಡುತ್ತಿರುವ ಯಾತ್ರೆ ಅಲ್ಲ. ಇದು ಜನರ ನೋವು, ದುಃಖ ದುಮ್ಮಾನಗಳನ್ನು ನಿವಾರಿಸಿ, ದೇಶ ಒಗ್ಗೂಡಿಸಿ, ದೇಶವನ್ನು ಶಾಂತಿಯ ತೋಟವನ್ನಾಗಿ ಮಾಡಲು ಈ ಯಾತ್ರೆ.
ನಿಮ್ಮ ಹೆಜ್ಜೆ ದೇಶಕ್ಕೊಂದು ಕೊಡುಗೆ, ನಿಮ್ಮ ಹೆಜ್ಜೆ ನಿಮ್ಮ ಜೀವನದಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಹೆಜ್ಜೆ. ಇದು ರೈತರ ಬದುಕು, ಉದ್ಯೋಗ ಸೃಷ್ಟಿ, ನಮ್ಮೆಲ್ಲರಲ್ಲಿ ಶಾಂತಿ ಮೂಡಿಸಲು ಹಾಕುತ್ತಿರುವ ಹೆಜ್ಜೆ. ಬಡವರ ಕಣ್ಣೀರು ಒರೆಸಲು ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕುತ್ತಿದ್ದೀರಿ.
ಪುರಂದರದಾಸರು ಒಂದು ಮಾತು ಹೇಳಿದ್ದಾರೆ. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಭನಾಭನ ಪಾದ ಭಜನೆ ಪರಮ ಸುಖವಯ್ಯ. ಅದೇ ರೀತಿ ನಾನು ಅಧ್ಯಕ್ಷನಾಗಿರುವ ಇಂತಹ ಪವಿತ್ರ ಕಾರ್ಯಕ್ರಮ ನಡೆಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ ಎಂದು ಭಾವಿಸಿದ್ದೇನೆ.
ಬಸವಣ್ಣನವರು ಕೊಟ್ಟಿರುವ ಸಂದೇಶದಂತೆ ನಾವು ನುಡಿದಂತೆ ನಡೆಯಬೇಕು. ಕೊಟ್ಟ ಮಾತು ಉಲಿಸಿಕೊಳ್ಳಬೇಕು. ಇದೇ ರಾಹುಲ್ ಗಾಂಧಿ ಅವರು ನೀಡುತ್ತಿರುವ ಮಾರ್ಗದರ್ಶನ. ಭಾರತದ ಘನತೆ, ಶಾಂತಿ, ಮಾನವೀಯತೆಯ ಸಂಭ್ರಮಾಚರಣೆ ಮಾಡುತ್ತಿದ್ದು, ಇದು ಕ್ವಿಟ್ ಬಿಜೆಪಿ ಚಳುವಳಿ, ಬಿಜೆಪಿಯನ್ನು ತೊಲಗಿಸಬೇಕು ಎಂಬುದನ್ನು ಮರೆಯಬಾರದು. 2023ರ ಚುನಾವಣೆಯಲ್ಲಿ ರಾಜ್ಯದಿಂದ ಬದಲಾವಣೆಯ ಸಂದೇಶ ನೀಡಬೇಕು ಎಂದು ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ.
ಈ ಪಾದಯಾತ್ರೆ ಸಮಯದಲ್ಲಿ ಒಂದು ದಿನ ಇಡಿ ವಿಚಾರಣೆ ದಿನ ಹೊರತುಪಡಿಸಿ ಉಳಿದ ಎಲ್ಲ ದಿನ ಹೆಜ್ಜೆ ಹಾಕಿದ್ದೇನೆ. ರಾಹುಲ್ ಗಾಂಧಿ ಅವರು ಸೋಲಿಗ ಬುಡಕಟ್ಟು ಸಮುದಾಯದವರ ಜತೆ, ಆಕ್ಸಿಜನ್ ಅಪಘಾತದಲ್ಲಿ ಮೃತರ ಕುಟುಂಬ ಸದಸ್ಯರು, ನಿರುದ್ಯೋಗಿ ಯುವಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ರೈತರು, ಕಾರ್ಮಿಕರು, ಶಿಕ್ಷಣ ತಜ್ಞರು, ದಲಿತರು, ಶೋಷಿತರು ಹೀಗೆ ಎಲ್ಲಾ ವರ್ಗದ ಜನ ತಮ್ಮ ನೋವು, ಸಂಕಷ್ಟಗಳನ್ನು, ಮುಂದಿನ ಭವಿಷ್ಯದ ಆಲೋಚನೆ ಹಂಚಿಕೊಂಡರು.
ನಾನು ಮಾಧ್ಯಮದವರನ್ನು ರಾಹುಲ್ ಗಾಂಧಿ ಅವರಿಗೆ ಪರಿಚಯಿಸಿದಾಗ ನೀವು ನಿಮ್ಮ ತಾಯಿ ಯಾವುದೇ ಅಧಿಕಾರ ಪಡೆಯದೇ ಬಂದ ಅಧಿಕಾರ ತ್ಯಾಗ ಮಾಡಿ ಈ ಪರಿಶ್ರಮ ಮಾಡುತ್ತಿರುವುದೇಕೆ ಎಂದು ಕೇಳಿದರು. ಅದಕ್ಕೆ ರಾಹುಲ್ ಗಾಂಧಿ ಅವರು, ‘ನಾವು ಹುಟ್ಟುವಾಗ ಎಲ್ಲರೂ ಖುಷಿ ಪಡುತ್ತಾರೆ. ಆದರೆ ನಮ್ಮ ಬದುಕಿನಲ್ಲಿ ಈ ದೇಶದ ಜನ ನನ್ನ ಮುತ್ತಜ್ಜ, ಅಜ್ಜಿ, ನನ್ನ ತಂದೆ ತಾಯಿ ಕೊಟ್ಟಿರುವ ಪ್ರೀತಿ ಹಾಗೂ ಋಣವನ್ನು ತೀರಿಸಲು ಸಾಧ್ಯವಿಲ್ಲ. ಆ ಪ್ರೀತಿಗಾಗಿ ನಾನು ಈ ತ್ಯಾಗ ಪರಿಶ್ರಮ ಮಾಡುತ್ತಿದ್ದೇನೆ ಎಂದರು. ಇಂತಹ ದೇಶಪ್ರೇಮಿ, ಉದಾರ ಮನೋಭಾವ ಹೊಂದಿರುವ ನಮ್ಮ ನಾಯಕ ರಾಹುಲ್ ಗಾಂಧಿ ಅವರಿಗೆ ಸಾಷ್ಟಾಂಗ ನಮನಗಳನ್ನು ಅರ್ಪಿಸುತ್ತೇನೆ. ಇಂತಹ ನಾಯಕನ ಜತೆ ಕೆಲಸ ಮಾಡಲು ಸಿಕ್ಕಿರುವ ಅವಕಾಶವೇ ನಮ್ಮ ಶಕ್ತಿ. ಇದೇ ನಮ್ಮ ಭಾಗ್ಯ. ಇಂದು ಅವರ ಪ್ರೀತಿ ವಿಶ್ವಾಸ ಉಳಿಸಿಕೊಂಡು ಹೋಗಬೇಕು.
ಇಂದು ನಾವು ಕನಕದುರ್ಗಮ್ಮ ದೇವಿ ಸನ್ನಿದಿ ಮುಂದೆ ಇದ್ದೇವೆ. ರಾಜ್ಯದಲ್ಲಿ ಮತ್ತೆ ವಿಜಯನಗರ ಸಾಮ್ರಾಜ್ಯ ನಿರ್ಮಾಣವಾಗಬೇಕು. 40% ಸರ್ಕಾರ ತೆಗೆಯಬೇಕು. ದೇಶದಲ್ಲಿ ನೆಮ್ಮದಿ ಆಡಳಿತ, ಯುವಕರಿಗೆ ಉದ್ಯೋಗ ಸೃಷ್ಟಿಗೆ ನಾವೆಲ್ಲರೂ ಕೆಲಸ ಮಾಡೋಣ. ನಮಗೆ ಅಧಿಕಾರ ಮುಖ್ಯವಲ್ಲ.
ಇತಿಹಾಸ ಸೃಷ್ಟಿಸಲು ರಾಹುಲ್ ಗಾಂಧಿ ಅವರು ಹೊಸ ಹೆಜೆ ಇಟ್ಟಿದ್ದು, ಅಧಿಕಾರ ಇಲ್ಲದೆ, ಅಧಿಕಾರ ತೆಗೆದುಕೊಳ್ಳದೆ ರಾಹುಲ್ ಗಾಂಧಿ ಅವರು ಬೇರೆ ಯಾವುದೇ ನಾಯಕರು ಮಾಡಲಾಗದ ಸಾಧನೆಯನ್ನು ದೇಶಕ್ಕಾಗಿ ಮಾಡಿದ್ದಾರೆ. ಅವರ ವಿಚಾರಧಾರೆಯಲ್ಲಿ ನಾವೆಲ್ಲರೂ ಕೆಲಸ ಮಾಡಿಕೊಂಡು ಹೋಗೋಣ. ವಾಗ್ದಾನ ನಮ್ಮದು ವಿಶ್ವಾಸ ನಿಮ್ಮದು. ನಿಮ್ಮ ಸಂಕಷ್ಟ ನಿವಾರಣೆ ಮಾಡುವ ವಾಗ್ದಾನ ನಾವು ಮಾಡಿದ್ದು, ನಮ್ಮ ನಡೆ, ನುಡಿ ಸದಾ ಒಂದೇ ಆಗಿರುತ್ತದೆ. ನುಡಿದಂತೆ ನಡೆಯುತ್ತೇವೆ ನಮ್ಮ ಮೇಲೆ ವಿಶ್ವಾಸ, ನಂಬಿಕೆ ಇಡಿ ನಾವು ನಿಮ್ಮ ಸೇವೆ ಮಾಡಿ ಋಣ ತೀರಿಸುತ್ತೇವೆ. ’
*ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ:*
ಮುಂದಿನ ಲೋಕಸಭೆ ಅಥವಾ ರಾಜ್ಯ ವಿಧಾನಸಭೆ ಚುನಾವಣೆ ಗೆಲ್ಲಲು ರಾಹುಲ್ ಗಾಂಧಿ ಅವರು ಈ ಯಾತ್ರೆಯನ್ನು ಹಮ್ಮಿಕೊಂಡಿಲ್ಲ. ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಪಾದಯಾತ್ರೆ. ಈ ಹಿಂದೆ ಹಲವು ಪಾದಯಾತ್ರೆ ನಡೆದಿವೆ. ಮಹಾತ್ಮಾ ಗಾಂಧಿ, ವಿನೋಬಾ ಬಾವೆ, ಚಂದ್ರಶೇಖರ್ ಅವರು ಪಾದಯಾತ್ರೆ ಮಾಡಿದ್ದಾರೆ. ಆದರೆ ಏಕಬಾರಿಗೆ 3570 ಕಿ.ಮೀ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಯಾತ್ರೆ ಐತಿಹಾಸಿಕ ಯಾತ್ರೆಯಾಗಿದೆ. ಈಗಾಗಲೇ 1 ಸಾವಿರ ಕಿ.ಮೀ ಪೂರ್ಣಗೊಂಡಿದೆ.
ಕರ್ನಾಟಕ ನಂತರ ಆಂಧ್ರ, ತೆಲಂಗಾಣ ಹೀಗೆ 12 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾತ್ರೆ ಸಾಗಲಿದೆ. ಈ ಯಾತ್ರೆ ಉದ್ದೇಶವನ್ನು ಅನೇಕ ಬಾರಿ ರಾಹುಲ್ ಗಾಂಧಿ ಅವರ ಸ್ಪಷ್ಟಪಡಿಸಿದ್ದಾರೆ. ಇಂದು ದೇಶ ಜಾತಿ, ಧರ್ಮ, ವರ್ಗ, ಭಾಷೆ ಆಧಾರದ ಮೇಲೆ ಜನರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಮನಸ್ಸಲ್ಲಿ ವಿಷ ಹಿಂಡುತ್ತಿದ್ದಾರೆ. ಮೋದಿ ಅವರು ಪ್ರಧಾನಿಯಾದ ನಂತರ ಮಾನವ ವಿರೋಧಿ ಕೆಲಸ ಹೆಚ್ಚಾಗುತ್ತಿದೆ. ಎಲ್ಲೆಡೆ ದ್ವೇಷ ರಾಜಕಾರಣ, ಹಿಂಸೆಯ ರಾಜಕಾರಣದಿಂದ ಜನ ಇಂದು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ದಲಿತರು, ಹಿಂದುಳಿದವರು,. ಅಲ್ಪಸಂಖ್ಯಾತರು, ರೈತರು, ಬಡವರು ಭಯದಲ್ಲಿದ್ದಾರೆ.
ಕುವೆಂಪು ಅವರು ಭಾರತ ಸರ್ವಜನಾಂಗದ ಶಾಂತಿಯ ತೋಟವಾಗಬೇಕು ಎಂದರು. ಎಲ್ಲ ಜನರು ಶಾಂತಿಯಿಂದ ಪ್ರೀತಿಯಿಂದ ಬದುಕುವಂತೆ ಪರಿಸ್ಥಿತಿ ನಿರ್ಮಾಣ ಆಗಬೇಕು ಎಂದರು. ಆದರೆ ಆರ್ ಎಸ್ಎಸ್ ಹಾಗೂ ಸಂಘಪರಿವಾರದವರು ದೇಶದಲ್ಲಿ ದರ್ಮದ ರಾಜಕಾರಣ ಮಾಡಿ ಅಶಾಂತಿ ಸೃಷ್ಟಿಸಿ ದೇಶದಲ್ಲಿ ನೀಚ ಕೆಲಸ ಮಾಡುತ್ತಿದ್ದಾರೆ.
ರಾಹುಲ್ ಗಾಂಧಿ ಅವರ ಪಾದಯಾತ್ರೆಯನ್ನು ಲಘುವಾಗಿ ಟೀಕಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಐತಿಹಾಸಿಕ ಯಾತ್ರೆ ಮಾಡುತ್ತಿದ್ದು, ದೇಶಕ್ಕಾಗಿ ಅವರ ಕುಟುಂಬ ತ್ಯಾಗ ಬಲಿದಾನ ಮಾಡಿದ್ದಾರೆ. ಮೋದಿ, ಅಮಿತ್ ಶಾ ಅವರೇ ದೇಶಕ್ಕೆ ನಿಮ್ಮ ತ್ಯಾಗ ಏನು? ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟಿದೆ. ಗಾಂಧಿ, ನೆಹರೂ ಸೇರಿದಂತೆ ಅನೇಕ ನಾಯಕರು ಸೇರೆವಾಸ ಅನುಭಿಸಿ ಆಶ್ತಿ ಕಳೆದುಕೊಂಡು ಹುತಾತ್ಮರಾಗಿದ್ದಾರೆ. 1925ರಲ್ಲಿ ಆರ್ ಎಸ್ಎಸ್ ಆರಂಭವಾಗಿದ್ದು ನಿಮ್ಮಲ್ಲಿ ಯಾರಾದರೂ ಒಬ್ಬ ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಒಬ್ಬ ಸಾಯಲಿಲ್ಲ. ಕಾಂಗ್ರೆಸ್ ತಂದುಕೊಟ್ಟ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ.
ಈ ಜಿಲ್ಲೆಯ ಮಂತ್ರಿ ರಾಮುಲು ಅವರು ಇಂದು ಒಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ದೇಶಕ್ಕೆ ಏನೂ ಮಾಡಿಲ್ಲ. ನೆಹರೂ ಕುಟುಂಬ ದೇಶಕ್ಕೆ ಏನೂ ಮಾಡಿಲ್ಲ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಏನು ಮಾಡಿಲ್ಲ ಎಂದು ಹೇಳಿದ್ದಾರೆ. ಶ್ರೀರಾಮುಲು ಅವರಿಗೆ ನೆನಪಿಸುತ್ತಿದ್ದೇನೆ, ರಾಮುಲು ನಿನಗೆ ಇತಿಹಾಸ ಗೊತ್ತಿಲ್ಲ. ನೆಹರೂ ಕಾಂಗ್ರೆಸ್ ಬಗ್ಗೆ ಮಾತನಾಡಲು ನಿನಗೆ ಯಾವುದೇ ನೈತಿಕ ಹಕ್ಕಿಲ್ಲ. 1977ರಲ್ಲಿ ವಿಜಯನಗರ ಉಕ್ಕಿನ ಕಾರ್ಖಾನೆ ಸ್ಥಾಪಿಸಿದವರು ಯಾರು? ಸಾವಿರಾರು ಮಂದಿಗೆ ಉದ್ಯೋಗ ಕೊಟ್ಟು ಊಟ ಕೊಟ್ಟಿದ್ದರೆ ಶ್ರೀಮಂತಿ ಇಂದಿರಾ ಗಾಂಧಿ ಕಾರಣ.
ಸೋನಿಯಾ ಗಾಂಧಿ ಅವರು 1999ರಲ್ಲಿ ಬಳ್ಳಾರಿಯಿಂದ ಗೆದ್ದು ಲೋಕಸಭಾ ಸದಸ್ಯರಾದ ನಂತರ ವಿದ್ಯತ್ ಯೋಜನೆಗೆ 3300 ಕೋಟಿ ತಂದವರು ಯಾರು?   ಸೋನಿಯಾ ಗಾಂಧಿ. ರಾಮುಲು ನಿನ್ನ ಹಾಗೂ ಬಿಜೆಪಿ ಕೊಡುಗೆ ಏನು? ಮೋದಿ ಪ್ರಧಾನಿ ಆಗಿ 8 ವರ್ಷ ಆಗಿದೆ ಬಳ್ಳಾರಿ ಜಿಲ್ಲೆಗೆ 1 ರೂ. ಕೆಲಸ ಆಗಿದೆಯಾ? ನಿನ್ನಂತ ಪೆದ್ದನ ಜತೆ ಚರ್ಚೆಗೆ ನಾವು ಸಿದ್ದರಿಲ್ಲ. ಲೂಟಿ ಹೊಡೆದಿದ್ದು ನಿಮ್ಮ ಸಾಧನೆ. ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ಕೊಟ್ಟವರು ಯಾರು? ನಾವು ಪಾದಯಾತ್ರೆ ಮಾಡಿದ ನಂತರ ಜನಾರ್ದನ ರೆಡ್ಡಿ ಜೈಲಿಗೆ ಹೋಗಬೇಕಾಯಿತು. ಕಾಂಗ್ರೆಸ್ ಪ್ರಶ್ನಿಸಲು ನಿಮಗೆ ಯಾವುದೇ ನೈತಿಕ ಆಧಾರವಿಲ್ಲ.
ರಾಮುಲು, ಬಳ್ಳಾರಿಗೆ ಕಾಂಗ್ರೆಸ್ ಮಾಡಿರುವ ಕೊಡುಗೆ ಬಗ್ಗೆ ಚರ್ಚೆ ಮಾಡಲು ಉಗ್ರಪ್ಪ ಅವರನ್ನು ಕಳುಹಿಸಿಕೊಡುತ್ತೇನೆ. ಚರ್ಚೆ ಮಾಡಿ. ಇಂದು 40% ಕಮಿಷನ್ ಸರ್ಕಾರ ಎಂದು ಬಿಜೆಪಿ ಸರ್ಕಾರಕ್ಕೆ ಕರೆಯುತ್ತಾರೆ. ಇದು ನಾನು ಹೇಳುತ್ತಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಮಂತ್ರಿಗೆ ಪತ್ರ ಬರೆದು ಹೇಳಿದ್ದಾರೆ. ಈ ಪತ್ರ ಬರೆದು ಒಂದು ವರ್ಷವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮೋದಿ ಅವರು ಮಾತೆತ್ತಿದರೆ ನಾ ಖಾವೂಂಗಾ, ನಾ ಖಾನೇದೂಂಗ ಎನ್ನುತ್ತಾರೆ. ಮೋದಿ ಅವರೇ ಎಲ್ಲಿದ್ದೀರಿ? ನಾಚಿಕೆಯಾಗುವುದಿಲ್ಲವೇ?
ರಾಹುಲ್ ಗಾಂಧಿ ಅವರು ಪಾದಯಾತ್ರೆ ಮಾಡಿದ ನಂತರ ಈಗ ಜನಸಂಕ,ಪ ಯಾತ್ರೆ ಮಾಡುತ್ತಿದ್ದಾರೆ. ಜನ ಸಂಕಲ್ಪ ಮಾಡಿದ್ದು, 2023ಕ್ಕೆ ನಿಮ್ಮನ್ನು ಕಿತ್ತೆಸೆದು ಕಾಂಗ್ರೆಸ್ ಸರ್ಕಾರ ತರಲು ಸಂಕಲ್ಪ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ಪಾದಯಾತ್ರೆಗೆ ಸಿಕ್ಕಿರುವ ಅಭೂತಪೂರ್ವ ಬಂಬಲ ಕಂಡು ಬಿಜೆಪಿಯವರಿಗೆ ನಡುಕ ಹುಟ್ಟಿದೆ. ಅಧಿಕಾರ ಹೋಗುತ್ತದೆ ಎಂಬ ಹೆದರಿಕೆ ಶುರುವಾಗಿದೆ. ಇದಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ.
ರಾಹುಲ್ ಗಾಂಧಿ ಅವರು ನನಗೆ 5 ವರ್ಷ ಮುಖ್ಯಮಂತ್ರಿ ಆಗುವ ಅವಕಾಶ ಕೊಟ್ಟಿದ್ದರು. ನಾವು ನುಡಿದಂತೆ ನಡೆದಿದ್ದೇವೆ. 160 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಿದ್ದೇವೆ.ನೀವು 2018ರಲ್ಲಿ ಕೊಟ್ಟಿರುವ ಪ್ರಣಾಳಿಕೆಯಲ್ಲಿ ಶೇ.10ರಷ್ಟು ಈಡೇರಿಸಿಲ್ಲ. ನಿಮಗೆ ನಾಚಿಕೆ ಆಗುವುದಿಲ್ಲವೇ? ಕೇವಲ ಲೂಟಿ ಮಾಡಿ ರಾಜ್ಯ ಹಾಳು ಮಾಡುತ್ತಿದ್ದೀರಿ. ಇದಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದೇವೆ.
ಒಡೆದಿರುವ ಜನರ ಮನಸ್ಸು ಒಂದುಗೂಡಿಸಬೇಕು. ಬೆಲೆ ಏರಿಕೆ ಹೆಚ್ಚಾಗಿದೆ. ಮೋದಿ ಸರ್ಕಾರ ಕಚ್ಚಾತೈಲ ಬೆಲೆ ಇಳಿದರೂ ಇಂಧನದ ಬೆಲೆ ಇಳಿಸಲಿಲ್ಲ. ಬದಲಿಗೆ ಹೆಚ್ಚಿಸಿದ್ದಾರೆ. 2014ರಲ್ಲಿ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. 16 ಕೋಟಿ ಉದ್ಯೋಗ ನೀಡುವ ಬದಲು 4-5 ಲಕ್ಷ ಉದ್ಯೋಗ ಕಸಿದಿದ್ದಾರೆ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದರು. ಆದಾಯ ದುಪ್ಪಟ್ಟು ಆಗಲಿಲ್ಲ. ಅವರ ವೆಚ್ಚ ದುಪ್ಪಟ್ಟು ಆಗಿದೆ. ಬೆಂಬಲ ಬೆಲೆ ನೀಡದೇ ರೈತರ ಮನೆ ಹಾಳು ಮಾಡಿದರು. ಇಂದಿರಾ ಗಾಂಧಿ ಅವರು ತಂದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿ ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಬಹುದು ಎಂದು ಮಾಡಿದ್ದೀರಿ. ದಲಿತರು, ಸಣ್ಣ ಇಡುವಳಿದಾರರನ್ನು ಬೀದಿಗೆ ತಂದಿದ್ದೀರಿ. ಇದೆಲ್ಲವನ್ನು ಜನರಿಗೆ ತಿಳಿಸಬೇಕಲ್ಲವೇ? ಅದಕ್ಕಾಗಿ ಈ ಯಾತ್ರೆ.
2013ರಲ್ಲಿ ಈ ದೇಶದ ಮೇಲಿದ್ದ ಸಾಲ 53.11 ಲಕ್ಷ ಕೋಟಿ. ಮುಂದಿನ ಮಾರ್ಚ್ ಅಂತ್ಯಕ್ಕೆ 155 ಲಕ್ಷ ಕೋಟಿ. ಮೋದಿ ಅವರು ಅಚ್ಛೇ ದಿನ್ ಬರುತ್ತದೆ ಎಂದು  100 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇದೆಲ್ಲವನ್ನು ಜನರಿಗೆ ಹೇಳಬೇಕಲ್ಲವೇ? ದೇಶ ಉಳಿಸಬೇಕಲ್ಲವೇ? ದೇಶದ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಪ್ರಜಾಪ್ರಭುತ್ವ ಸಂವಿಧಾನ ಎಲ್ಲದಕ್ಕೂ ಆರ್ ಎಸ್ಎಸ್ ವಿರೋಧವಿದೆ. ಅವರು ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿಸುತ್ತಾರೆ. ಇವು ಅಪಾಯದಲ್ಲಿವೆ. ಇದನ್ನು ಉಳಿಸುವುದು ನಮ್ಮ ಜವಾಬ್ದಾರಿ.
ಮೋದಿ ಅವರೇ ನೀವು ಪ್ರಧಾನಿ ಆಗಿದ್ದು, ನಾನು ಸಿಎಂ ಆಗಿದ್ದು ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ. ಆ ಸಂವಿಧಾನ ಉಳಿಸಲು ಈ ಪಾದಯಾತ್ರೆ. ಇಂತಹ ಸಾಹಸಕ್ಕೆ ಕೈಹಾಕಿರುವುದಕ್ಕೆ ನಮಿಸುತ್ತೇನೆ. ಅವರ ಈ ಯಾತ್ರೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿಯೋಣ. ನಮ್ಮ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್ ಪಕ್ಷ ಅದಿಕಾರಕ್ಕೆ ತರಲಿದ್ದಾರೆ ಎಂದು ರಾಹುಲ್ ಗಾಂಧಿ ಅವರಿಗೆ ಭರವಸೆ ನೀಡುತ್ತೇನೆ.
*ರಾಜ್ಯಸಭೆ ಮಾಜಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ:*
ಭಾರತ ಜೋಡೋ ಯಾತ್ರೆ ಕೇವಲ ಚುನಾವಣೆ ಅಥವಾ ಬೇರೆ ಲಾಭದ ಉದ್ದೇಶದಿಂದ ನಡೆಯುತ್ತಿರುವ ಯಾತ್ರೆ ಅಲ್ಲ. ನಮ್ಮ ದೇಶದಲ್ಲಿ ಕೋಮು ಸಾಮರಸ್ಯ ಕೊರತೆ, ಧರ್ಮದ ಹೆಸರಲ್ಲಿನ ಜಗಳ ಹಚ್ಚುವ ಕೆಲಸ ಬಿಜೆಪಿ ಆರ್ ಎಸ್ಎಸ್ ಮಾಡುತ್ತಿದೆ. ಇದರ ವಿರುದ್ಧ ಹಾಗೂ ನಿರುದ್ಯೋಗ, ಬೆಲೆ ಏರಿಕೆ, ಹದಗೆಡುತ್ತಿರುವ ಆರ್ಥಿಕ ವ್ಯವಸ್ಥೆ ವಿರೋಧಿಸಿ ಈ ಯಾತ್ರೆ ಮಾಡಲಾಗುತ್ತಿದೆ.
ಈ ಕಲ್ಯಾಣ ಕರ್ನಾಟಕ ಭಾಗಕ್ಕೆ ಆರ್ಟಿಕಲ್ 371ಜೆ ಸಿಕ್ಕಿರುವುದು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಂದ. ನಿಮ್ಮ ಮಕ್ಕಳಿಗೆ ವೈದ್ಯಕೀಯ, ಇಂಜಿನಿಯರ್ ಸೀಟು, ಉದ್ಯೋಗ ಹೆಚ್ಚಾಗಿ ಸಿಗುತ್ತಿರಲಿಲ್ಲ. ಈ ವಿಶೇಷ ಸ್ಥಾನಮಾನದಿಂದ ಈ ಎಲ್ಲ ಕ್ಷೇತ್ರದಲ್ಲಿ ಸಾವಿರಾರು ಮಂದಿಗೆ ಅವಕಾಶ ಸಿಗುತ್ತಿದೆ. ಇಂದು ಭಾರತ ಜೋಡೋ ಯಾತ್ರೆ ಈಗಾಗಲೇ 1 ಸಾವಿರ ಕಿ.ಮೀ ಯಾತ್ರೆ ಸಾಗಿದೆ. ಇನ್ನು 2700 ಕಿ.ಮೀ ದೂರ ಸಾಗಲಿದ್ದಾರೆ. ಅವರ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲ ಇದೆ. ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕು. ಆಗ ನಮ್ಮ ಪಕ್ಷ ಹಾಗೂ ದೆಶ ಕಟ್ಟಲು ಶಕ್ತಿ ಸಿಗುತ್ತದೆ. ಬಿಜೆಪಿ ಆರ್ ಎಸ್ಎಸ್ ವಿರುದ್ಧ ಹೋರಾಡಲು ಶಕ್ತಿ ಸಿಗುತ್ತದೆ. ರಾಜ್ಯದಲ್ಲಿ ಮತ್ತೆ ಸರ್ಕಾರ ಬರುವಂತೆ ಮಾಡಬೇಕು.
ಈ ಬಿಜೆಪಿ ಕೆಟ್ಟ ಸರ್ಕಾರ, ಕಮಿಷನ್ ಸರ್ಕಾರವನ್ನು ತೆಗೆದುಹಾಕಲು ನಿವೆಲ್ಲರೂ ಒಗ್ಗಟ್ಟಾಗಿ ನಮಗೆ ಬೆಂಬಲಿಸಬೇಕು. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ದೊಡ್ಡ ಕೊಡುಗೆ ಕೊಟ್ಟಂತೆ ಆಗಲಿದೆ.
*ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್:*
ಇಂದು ಭಾರತ ಜೋಡೋ ಯಾತ್ರೆ 1000 ಕಿ.ಮೀ ದೂರ ಕ್ರಮಿಸಿ ಬಳ್ಳಾರಿಗೆ ಬಂದಿದೆ. ಕರ್ನಾಟಕ ರಾಜ್ಯದಲ್ಲಿ ಸೆ.30ರಂದು ಆರಂಭವಾದ ಈ ಯಾತ್ರೆ 429 ಕಿ.ಮೀ ಪೂರ್ಣಗೊಳಿಸಿ ಇಂದು ರಾಹುಲ್ ಗಾಂಧಿ ಅವರು ನಿಮ್ಮನ್ನು ಉದ್ದೇಶಿಸಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಲಿದ್ದಾರೆ.
2014ರಲ್ಲಿ ವಿಶ್ವಗುರು ಕಾಂಗ್ರೆಸ್ ಮುಕ್ತ ಭಾರತ ಎಂದು ಪ್ರಚಾರ ಘೋಷಣೆ ಮಾಡಿದ್ದರು. ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಲ್ಲಿ ಆರಂಭಿಸಿದ ಈ ಯಾತ್ರೆಯಲ್ಲಿ ನಿತ್ಯ ಲಕ್ಷಾಂತರ ಮಂದಿ ಉತ್ಸೇಹ ನೀಡುತ್ತಿರುವುದನ್ನು ಕಂಡು ವಿಶ್ವಗುರು ತಲೆ ಕೆಡಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರು ರಾಜಕೀಯ ದುರುದ್ದೇಶಕ್ಕೆ ಈ ಪಾದಯಾತ್ರೆ ಮಾಡುತ್ತಿಲ್ಲ. ದೇಶದ ತ್ರಿವರ್ಣ ಧ್ವಜ, ಅಂಬೇಡ್ಕರ್ ಅವರ ಸಂವಿಧಾನ, ನಮ್ಮ ಹಕ್ಕು ಪ್ರತಿಪಾದಿಸುವ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ನಮ್ಮೆಲ್ಲರ ನೆಚ್ಚಿನ ನಾಯಕ ರಾಹುಲ್ ಗಾಂಧಿ ಅವರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಪಾದಯಾತ್ರೆ ಮೂಲ ಉದ್ದೇಶ ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತ ದೇಶವನ್ನು ದ್ವೇಷಮುಕ್ತ, ಹಿಂಸೆ ಮುಕ್ತ, ನಿರುದ್ಯೋಗ ಮುಕ್ತ, ಪ್ರಜಾಪ್ರಭುತ್ವ ರಕ್ಷಿಸುವ, ಬಡಮುಕ್ತ ಭಾರತ ಉದ್ದೇಶದಿಂದ ಈ ಯಾತ್ರೆ ಆರಂಭವಾಗಿದೆ. ಈ ಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3570 ಕಿ.ಮೀ ಯಾತ್ರೆಯಾಗಿದೆ. ಭಾರತ ಯಾತ್ರೆ, ರಾಜ್ಯದ ಪ್ರದೇಶ ಯಾತ್ರಿ, ಅಥಿಥಿ ತ್ರಿಗಳಿದ್ದಾರೆ. ನಮ್ಮ ರಾಜ್ಯದಲ್ಲಿ ನಿತ್ಯ 1 ಲಕ್ಷ ಜನ ಹೆಜ್ಜೆ ಹಾಕಿದ್ದು, ವಿಶ್ವದಲ್ಲಿ ಇದು ಐತಿಹಾಸಿಕ ಯಾತ್ರೆ. ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧಿ ನೇತೃತ್ವದಲ್ಲಿ ಯಾತ್ರೆ ನಡೆದಿದ್ದು, ಸ್ವಾತಂತ್ರ್ಯದ ನಂತರ ನಭೂತೋ ನಭವಿಷ್ಯತಿ ಎಂಬ ರೀತಿಯಲ್ಲಿ ಈ ಯಾತ್ರೆ ನಡೆಯುತ್ತಿದೆ.
ರಾಹುಲ್ ಗಾಂಧಿ ಅವರ ಜತೆ ಫೋಟೋ ತೆಗೆಸಿಕೊಳ್ಳಲು ಸಾವಿರಾರು ಜನ ಪ್ರಯತ್ನಿಸಿದ್ದು, ಅವರಿಗೆ ಭದ್ರತೆ ಕಾರಣದಿಂದ ಅವಕಾಶ ನೀಡಲಿಲ್ಲ. ಈ ಯಾತ್ರೆಯಿಂದ ಬಿಜೆಪಿ ನಿದ್ದೆಗೆಟ್ಟು ಸುಳ್ಳು ಜಾಹೀರಾತು ನೀಡುತ್ತಿದ್ದಾರೆ.
ಬಳ್ಳಾರಿಯಲ್ಲಿ ಶನಿವಾರ ನಡೆದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾರತ್ ಜೋಡೋ ಯಾತ್ರೆ ನೇತಾರ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ,  ರಾಜಸ್ಥಾನ ಸಿಎಂ ಅಶೋಕ್ ಗೆಹಲೊಟ್, ಛತ್ತೀಸಗಡ ಸಿಎಂ ಭೂಪೇಶ್ ಬಘೇಲ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಕೇಂದ್ರದ ಮಾಜಿ ಸಚಿವರಾದ ಕೆ ಎಂ ಮುನಿಯಪ್ಪ, ಕೆ ರೆಹಮಾನ್ ಖಾನ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ, ಧ್ರುವನಾರಾಯಣ್, ಸತೀಶ್ ಜಾರಕಿಹೊಳಿ, ಕೆಪಿಸಿಸಿ ಸಂವಹನ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತಿತರರು ಭಾಗವಹಿಸಿದ್ದರು.

 

ಸಚಿವಾಕಾಂಕ್ಷಿಗಳಿಗೆ ಸಧ್ಯದಲ್ಲೇ ಶುಭ ಸುದ್ದಿ

https://pragati.taskdun.com/politics/cm-basavaraj-bommaicabinet-extentionreaction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button