ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪೊಲೀಸರಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಮೊದಲ ಹಂತದಲ್ಲಿ 20,000 ಪೊಲೀಸರಿಗೆ ತುರ್ತಾಗಿ ಕೊವೀಡ್ ಪರೀಕ್ಷೆ ಮಾಡಿಸಲು ಇಲಾಖೆ ನಿರ್ಧರಿಸಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 9 ಸಾವಿರ ಮಂದಿಯ ಪರೀಕ್ಷೆ ನಡೆದಿದ್ದು ಹಲವರ ಟೆಸ್ಟ್ ರಿಪೋರ್ಟ್ ಇಲಾಖೆ ಕೈ ಸೇರಿದೆ. ಈಗಾಗಲೇ 370 ಕ್ಕು ಹೆಚ್ಚು ಪೊಲೀಸರು ಕೊರೋನಾ ಸೋಂಕಿಗೆ ಒಳಗಾಗಿದ್ದು ಐಸೋಲೇಷನ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಕೆಲವು ಠಾಣೆಗಳ ಪೊಲೀಸರು ಕೊವೀಡ್ ಟೆಸ್ಟ್ ಮಾಡಿಸುತ್ತಿದ್ದು ಪೊಲೀಸರ ಪರೀಕ್ಷಾ ವರದಿಗಾಗಿ ಇಲಾಖೆ ಕಾಯುತ್ತಿದೆ ಎಂದರು.
ಇನ್ನು ಹಲವಾರು ಪೊಲೀಸ್ ಠಾಣೆಗಳನ್ನು ಸೀಲ್‌ಡೌನ್ ಮಾಡಲಾಗಿದ್ದು, ಕೆಲವು ಪೊಲೀಸರು ಟೆಸ್ಟ್ ಮಾಡಿಸಲು ತಮ್ಮ ಸ್ವಂತ ಖರ್ಚಿನಲ್ಲಿ ಹಣ ಭರಿಸುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪೊಲೀಸರಿಗೆ ಪ್ರತ್ಯೇಕ ಕೊವೀಡ್ ಸೆಂಟರ್ ತೆರೆಯಲು ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಲಕ್ಷಾಂತರ ಜನರಿಗೆ ಕೊವೀಡ್ ಪರೀಕ್ಷೆ ನಡೆಯುತ್ತಿದೆ, ಇದರಿಂದಾಗಿ ಪೊಲೀಸರಿಗೆ ಟೆಸ್ಟ್ ಮಾಡುವುದು ವಿಳಂಬವಾಗುತ್ತಿದೆ. ಸರ್ಕಾರದ ಮೇಲೆ ನಂಬಿಕೆ ಇದೆ, ಪೊಲೀಸರು ಹೆದರುವ ಅವಶ್ಯಕತೆ ಇಲ್ಲ. ಈಗಾಗಲೇ ಸೋಂಕಿತ ಪೊಲೀಸರಲ್ಲಿ ಸಾಕಷ್ಟು ಸಿಬ್ಬಂದಿ ಗುಣಮುಖರಾಗಿ ಕರ್ತವ್ಯಕ್ಕೆ ಮರಳಿದ್ದು ಠಾಣೆಗಳಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಭರವಸೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ