ಪ್ರಗತಿವಾಹಿನಿ ಸುದ್ದಿ; ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿದ್ದು, ಭಟ್ಕಳ ಮೂಲದ 26 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಯುವಕ ಮಾರ್ಚ್ 20ರಂದು ತನ್ನ ಅಣ್ಣನೊಂದಿಗೆ ದುಬೈನಿಂದ ಆಗಮಿಸಿದ್ದ. ದುಬೈನಿಂದ ಗೋವಾಗೆ ಬಂದಿಳಿದ ಇಬ್ಬರನ್ನು ಕರೆತರಲು ಸಂಬಂಧಿ ಕಾರ್ ನಲ್ಲಿ ತೆರಳಿದ್ದರು. ಮೊದಲಿಗೆ ಯುವಕನ ಅಣ್ಣನಲ್ಲಿ ಕೊರೊನಾ ಸೋಂಕು ಕಂಡು ಬಂದಿತ್ತು. ನಂತರ ಸಂಬಂಧಿಯಲ್ಲಿಯೂ ಕೊರೊನಾ ಲಕ್ಷಣಗಳು ಕಂಡು ಬಂದಿತ್ತು. ಇದೀಗ ಯುವಕನಿಗೂ ಕೊರೊನಾ ಸೋಂಕು ತಗಲಿದೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.
ಸದ್ಯ ಯುವಕನ್ನು ಭಟ್ಕಳದ ತಾಲೂಕು ಆಸ್ಪತ್ರೆಯಿಂದ ಕಾರವಾರದ ಪತಂಜಲಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ. ಈ ಮಧ್ಯೆ ಇವರು ಪ್ರಯಾಣಿಸಿದ ಕಾರಿನಲ್ಲಿ ಮಹಿಳೆಯೂ ಇದ್ದರು. ಮಹಿಳೆಯನ್ನು ಹೋಮ್ ಕ್ವಾರಂಟೈನ್ ನಲ್ಲಿರಿಸಲಾಗಿದೆ.
ಇವರೆಲ್ಲರೂ ಗೋವಾದಿಂದ ಭಟ್ಕಳಕ್ಕೆ ಆಗಮಿಸುವ ವೇಳೆ ಮಾರ್ಗ ಮಧ್ಯೆ ಹೋಟೆಲ್ ಗೆ ತೆರಳಿ ತಿಂಡಿ ಸೇವಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಹೋಟೆಲ್ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಹೋಟೆಲ್ ಗೆ ರಾಸಾಯನಿಕ ಸಿಂಪಡಿಸಿ ಸ್ವಚ್ಛಗೊಳಿಸಲಾಗಿದೆ. ಭಟ್ಕಳದಲ್ಲಿ ಸೋಂಕಿತರು ಭೇಟಿಯಾದ ಜನರ ಆರೋಗ್ಯದ ಮೇಲೆ ಜಿಲ್ಲಾಡಳಿತ ನಿಗಾ ಇರಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ