Kannada NewsKarnataka NewsNationalPolitics

*ಭೋವಿ ನಿಗಮದ ಹಗರಣ: ಮಾಜಿ ಎಂಡಿ ಸೋದರಿ ಬಂಧನ*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಅಧಿಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಭೋವಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಆ‌ರ್.ಲೀಲಾವತಿ ಅವರ ಸೋದರಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಉದ್ಯೋಗಿ ಜಾಲಹಳ್ಳಿ ನಿವಾಸಿ ಆರ್. ಮಂಗಳಾ ಅವರನ್ನು ಸಿಐಡಿ ಬಂಧಿಸಿದೆ.

ಭೋವಿ ನಿಗಮದ ಹಗರಣ ಸಂಬಂಧ ಬೆಂಗಳೂರು, ಕಲಬುರಗಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಐದು ಎಫ್‌ಐಆರ್‌ಗಳು ದಾಖಲಾಗಿವೆ. ಸಿಐಡಿ ಈ ಮೊದಲು ಕಚೇರಿ ಅಧೀಕ್ಷಕ ಸುಬ್ಬಪ್ಪ ಅವರನ್ನು ಬಂಧಿಸಿತ್ತು.

ಬಹುಕೋಟಿ ಅವ್ಯವಹಾರದಲ್ಲಿ ಮಂಗಳಾ ಎರಡು ಕೋಟಿ ರೂ. ಸ್ವೀಕರಿಸಿದ ಆರೋಪದಡಿ ಜೈಲು ಸೇರಿದ್ದಾರೆ. ಕೆಲವು ದಿನಗಳ ಹಿಂದೆ ನಿಗಮದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಚೇರಿಗಳ ಮೇಲೆ ದಾಳಿ ನಡೆಸಿ ಕಡತಗಳನ್ನು ಸಿಐಡಿ ವಶಪಡಿಸಿಕೊಂಡಿತ್ತು.

ನಿಗಮದಲ್ಲಿ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ಸೋದರಿ ಲೀಲಾವತಿ ಪರವಾಗಿ 2 ಕೋಟಿ ರೂ. ಮಂಗಳಾ ಸ್ವೀಕರಿಸಿರುವುದು ತನಿಖೆಯಲ್ಲಿ ಬಯಲಾಗಿದೆ. ಸಾಲ ಮಂಜೂರು ನೆಪದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಹನ್ಸಿಕಾ ಎಂಟರ್‌ಪ್ರೈಸಸ್, ನ್ಯೂ ಡೀಮ್ಸ್ ಎಂಟ‌ರ್ ಪ್ರೈಸಸ್, ಹರ್ನಿತಾ ಕ್ರಿಯೇಷನ್ಸ್ ಹಾಗೂ ಸೋಮನಾಥೇಶ್ವರ ಎಂಟರ್ ಪ್ರೈಸಸ್‌ಗಳಿಗೆ ಹಣ ವರ್ಗಾವಣೆ ಮಾಡಲಾಗಿತ್ತು.

ಈ ಕಂಪನಿಗಳ ಖಾತೆಯಿಂದ ಮಂಗಳಾ ಖಾತೆಗೆ ಹಣ ವರ್ಗಾವಣೆಯಾಗಿರುವುದಕ್ಕೆ ದಾಖಲೆಗಳು ಸಿಕ್ಕಿವೆ ಎಂದು ಸಿಐಡಿ ಮೂಲಗಳು ಹೇಳಿವೆ. ಭೋವಿ ನಿಗಮದ ಹಗರಣ ಬೆಳಕಿಗೆ ಬಂದ ಬಳಿಕ ಬಂಧನ ಭೀತಿಗೊಳಗಾಗಿ ನಿರೀಕ್ಷಣಾ ಜಾಮೀನು ಕೋರಿ ಮಂಗಳಾ ನ್ಯಾಯಾಲಯದ ಮೊರೆ ಹೋಗಿದ್ದರು. ಕೋರ್ಟ್‌ನಲ್ಲಿ ಅವರ ಅರ್ಜಿ ವಜಾಗೊಂಡಿದ್ದು, ಸಿಐಡಿ ಕಾರ್ಯಾಚರಣೆ ನಡೆಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button