
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ದುಬಾರಿ ಬೆಂಗಳೂರನ್ನಾಗಿ ಮಾಡಿರುವ ಕ್ರಮವನ್ನು ಖಂಡಿಸಿ, ಅವೈಜ್ಞಾನಿಕ ಯೋಜನೆಗಳನ್ನು ಕೈಬಿಡುವಂತೆ ಒತ್ತಾಯಿಸಿ ಬಿಜೆಪಿ ನಿಯೋಗ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಬಿಇಜೆಪಿ ನಿಯೋಗದ ಸದಸ್ಯರು ಬಿಬಿಎಂಪಿ ಆಯುಕ್ತರನ್ನು ಭೇಟಿಯಾಗಿ, ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಸಾವಿರಾರು ಕೋಟಿ ವೆಚ್ಚದ ಅವಾಸ್ತವಿಕ ಯೋಜನೆಗಳನ್ನು ಪೂರ್ವಾಪರ ಯೋಚಿಸದೇ ಜಾರಿಗೆ ತರಲು ಮುಂದಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಲ್ಲುತ್ತದೆ. ಇವರ ದುರಾಡಳಿತಕ್ಕೆ ಬೆಂಗಳೂರು ನಗರದ ಜನರು ಜರ್ಜರಿತರಾಗಿದ್ದಾರೆ. ಬಿಬಿಎಂಪಿ ಚುನಾವಣೆ ನಡೆಸುವುದನ್ನು ಬಿಟ್ಟು ಗ್ರೇಟರ್ ಬೆಂಗಳುರು ಪ್ರಾಧಿಕಾರ ರಚಿಸಿರುವುದು ದುರ್ದೈವ. ಕೆಂಪೇಗೌಡರು ನಿರ್ಮಾಣ ಮಾಡಿರುವ ಬೆಂಗಳೂರನ್ನು ಆರು ಪಾಲಿಕೆಯನ್ನಾಗಿ ಮಾಡಿ ಛಿದ್ರ ಛಿದ್ರ ಮಾಡುವ ಹುನ್ನಾರ ಕೈಬಿಡಬೇಕು ಎಂದು ಮನವಿ ಮಾಡಿದರು. ದಿನಬಳಕೆ ವಸ್ತುಗಳ ಮೇಲಿನ ತೆರಿಗೆ, ಕಸದ ಮೇಲಿನ ಸೆಸ್ ಎಂಬ ಹೊಸ ಸುಲಿಗೆ ನೀತಿಯನ್ನು ಕೈಬಿಡುವಂತೆ ಒತ್ತಾಯಿಸಿದರು.
ಪಾರದರ್ಶಕವಾಗಿ ಕಸ ವಿಲೇವರಿ ವ್ಯವಸ್ಥೆ ಜಾರಿಗೆ ತರಬೇಕು. ಪಾಲಿಕೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಪಾಲಿಕೆಯಲ್ಲಿ ನಾಗರಿಕ ಸ್ನೇಹಿ ಆಡಳಿತ ನೀಡುವಂತೆ ಒತ್ತಾಯಿಸಿದರು.




