ಪ್ರಗತಿವಾಹಿನಿ ಸುದ್ದಿ; ಬೀದರ್: ವೈದ್ಯರುಗಳ ಜತೆ ಸಭೆ ನಡೆಸುತ್ತಿದ್ದ ವೇಳೆ ಬೀದರ್ ಜಿಲ್ಲಾಧಿಕಾರಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಬೀದರ್ ಜಿಲ್ಲಾಧಿಕಾರಿ ಆರ್ ರಾಮಚಂದ್ರನ್ ವಿರುದ್ಧ ರಾಜ್ಯ ವೈದ್ಯಾಧಿಕಾರಿಗಳ ಸಂಘಕ್ಕೆ ದೂರು ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಡಿಎಚ್ಎಸ್ ಸಭೆ ವೇಳೆ ಈ ಘಟನೆ ನಡೆದಿದೆ. ಈ ಸಭೆ ವೇಳೆ ಕೆಲ ವೈದ್ಯಾಧಿಕಾರಿಗಳ ಮೇಲೆ ಜಿಲ್ಲಾಧಿಕಾರಿ ಬೆತ್ತದಿಂದ ಹೊಡೆದಿದ್ದಾರೆನ್ನಲಾಗಿದೆ.
ವೈದ್ಯರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಈ ಕೆಲಸ ಮಾಡಿರಬಹುದು ಎಂದು ಹೇಳಲಾಗುತ್ತಿದೆ.
ವೈದ್ಯರು ನೀಡಿರುವ ದೂರಿನ ಪ್ರಕಾರ, ನಿನ್ನೆ ಶನಿವಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸುಮಾರು 4 ಗಂಟೆ ಕಾಲ ಡಿಎಚ್ಎಸ್ ಸಭೆ ನಡೆದಿದೆ. ಡಿಎಚ್ಒ ಮತ್ತು ಡಿಎಸ್ಒ ಅವರ ಮೇಲೆ ಜಿಲ್ಲಾಧಿಕಾರಿಯವರು ಮೊದಲು ಕೋಪಗೊಂಡರು. ಆರ್ಸಿಎಚ್ ಕಾರ್ಯಕ್ರಮ ಅಧಿಕಾರಿಯವರ ಕೈಗೆ ಲಾಠಿಯಿಂದ ಹೊಡೆದರು. ತಾಲೂಕು ಆರೋಗ್ಯ ಅಧಿಕಾರಿಗಳನ್ನು ಕರೆಸಿ ಅವರ ಕೈ ಮೇಲೂ ಲಾಠಿ ಏಟು ಕೊಟ್ಟರು. ಕೆಲ ಸಿಬ್ಬಂದಿಯವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆಯೂ ಮಾಡಿದರು ಎಂದು ಬೆಂಗಳೂರಿನಲ್ಲಿರುವ ವೈದ್ಯಾಧಿಕಾರಿಗಳ ಸಂಘಕ್ಕೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.
ಜಿಲ್ಲಾಧಿಕಾರಿಗಳ ಈ ವರ್ತನೆ ನ್ಯಾಯಸಮ್ಮತವಲ್ಲ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಬೀದರ್ ವೈದ್ಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ವೈದ್ಯರು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ