ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಒಂದೇ ದಿನ 17 ಜನರಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 36ಕ್ಕೆ ಏರಿದಂತಾಗಿದೆ.
ಹಿರೇಬಾಗೇವಾಡಿಯ 8, ರಾಯಬಾಗದ 7 ಜನರಿಗೆ ಸೋಂಕಿರುವುದು ಇಂದು ದೃಢಪಟ್ಟಿದೆ. ಇವರೆಲ್ಲ ನಿಜಾಮುದ್ದೀನ್ ಧರ್ಮಸಭೆಗೆ ಹಾಜರಾಗಿ ಹಿಂದಿರುಗಿದವರ ಜೊತೆ ಸಂಪರ್ಕಕ್ಕೆ ಬಂದಿದ್ದರು ಎಂದು ಗೊತ್ತಾಗಿದೆ. ಹಿರೇಬಾಗೇವಾಡಿಯಲ್ಲಿ 6 ಮಹಿಳೆಯರಿಗೆ ಸೋಂಕು ತಗುಲಿದೆ.
ಸಂಕೇಶ್ವರದ ಒಬ್ಬರಿಗೆ, ಬೆಳಗಾವಿಯ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ರಾಜ್ಯದಲ್ಲಿ ಇಂದು ಒಂದೇ ದಿನ 34 ಜನರಿಗೆ ಸೋಂಕು ತಗುಲಿದೆ. ಒಟ್ಟೂ ಸಂಖ್ಯೆ 313ಕ್ಕೇರಿದೆ. ಇವರಲ್ಲಿ 15 ಮಹಿಳೆಯರು. ವಿಜಯಪುರದಲ್ಲಿ ಒಂದೇ ದಿನ 7 ಜನರಿಗೆ ಸೋಂಕು ಪತ್ತೆಯಾಗಿದೆ.
ರಾಯಬಾಗದಲ್ಲಿ ಪತ್ತೆಯಾದವರಲ್ಲಿ ಒಬ್ಬ ಗೋವಾ, ಒಬ್ಬ ವಿಜಯಪುರ, ಒಬ್ಬ ಮೀರಜ್ ನವರು.
ರಾಜ್ಯದ ಒಟ್ಟೂ 5 ಜನರಿಗೆ ಪ್ರಾಥಮಿಕ ತಪಾಸಣೆಯಲ್ಲಿ ನೆಗೆಟಿವ್ ಬಂದಿತ್ತು, ಈಗ ಪಾಸಿಟಿವ್ ಬಂದಿದೆ.
ಒಂದೇ ಕೊಠಡಿಯಲ್ಲಿ ಕ್ವಾರಂಟೈನ್?
ಶಂಕಿತರನ್ನೆಲ್ಲ ಒಂದೇ ಕೊಠಡಿಯಲ್ಲಿಟ್ಟು ಕ್ವಾರಂಟೈನ್ ಮಾಡಿದ್ದೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಉನ್ನತ ಮೂಲಗಳು ಪ್ರಗತಿವಾಹಿನಿಗೆ ಮಾಹಿತಿ ನೀಡಿವೆ.
ಸುಮಾರು 20 ಶಂಕಿತರನ್ನು ಒಂದೇ ಕೊಠಡಿಯಲ್ಲಿಟ್ಟು ಕ್ವಾರಂಟೈನ್ ಮಾಡಲಾಗಿತ್ತು. ಅವರಲ್ಲಿ ಒಬ್ಬರಿಗೆ ಸೋಂಕಿದ್ದರೂ ಅದು ಎಲ್ಲರಿಗೂ ಹಬ್ಬಲು ಕಾರಣವಾಗುತ್ತದೆ. ಈ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಬೆಳಗಾವಿಯಲ್ಲಿ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಹೋಗಿ ತಪಾಸಣೆ ಮಾಡುವ ಕೆಲಸ ಸರಿಯಾಗಿ ಆಗುತ್ತಿಲ್ಲ. ಕೇವಲ ಸಭೆಗಳಲ್ಲೇ ಕಾಲಕಳೆಯುತ್ತಿದ್ದಾರೆ. ವೈದ್ಯಕೀಯ ಸಾಮಗ್ರಿ, ಪಿಪಿಇ ಸೇರಿದಂತೆ ಉಪಕರಣಗಳ ಖರೀದಿ, ಪೂರೈಕೆ ಕೂಡ ಸಮರ್ಪಕವಾಗಿಲ್ಲ. ಹಾಗಾಗಿ ಯಾರೂ ಪರಿಶೀಲನೆ, ಚಿಕಿತ್ಸೆಗೆ ಧೈರ್ಯ ಮಾಡುತ್ತಿಲ್ಲ ಎಂದು ಗೊತ್ತಾಗಿದೆ.
ಜೊತೆಗೆ ಪ್ರಾಥಮಿಕ, 2ನೇ ಹಂತದ ಸಂಪರ್ಕ ಹೊಂದಿರುವವರ ಕುರಿತು ಮಾಹಿತಿ ಸಂಗ್ರಹ ಕೂಡ ಸರಿಯಾಗಿ ಆಗುತ್ತಿಲ್ಲ. ಫೀಲ್ಡ್ ವರ್ಕ್ ಆಗುತ್ತಲೇ ಇಲ್ಲ. ಕೇವಲ ಕೆಲಸಗಳು ಕಚೇರಿ, ಸಭೆಗಳಿಗೆ ಸೀಮಿತವಾಗಿವೆ ಎನ್ನುವ ಆರೋಪ ಕೇಳಿಬರುತ್ತಿದೆ.
ಶಂಕಿತರನ್ನೆಲ್ಲ ಪ್ರತ್ಯೇಕವಾಗಿ ಇಟ್ಟು ಚಿಕಿತ್ಸೆ ನೀಡುವ ಕೆಲಸ ಮಾಡದಿದ್ದರೆ, ಸೋಂಕಿತರ ಸಂಪರ್ಕಕ್ಕೆ ಬಂದವರ ಕುರಿತು ತಕ್ಷಣ ಮಾಹಿತಿ ಸಂಗ್ರಹಿಸಿ ಕ್ರಮ ತೆಗೆದುಕೊಳ್ಳದಿದ್ದರೆ ಬೆಳಗಾವಿಗೆ ಇನ್ನೂ ದೊಡ್ಡ ಆಘಾತ ಕಾದಿದೆ ಎನ್ನಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ